ಚಿಕ್ಕಬಳ್ಳಾಪುರ: ಮಕ್ಕಳನ್ನು ಬಿಡುಗಡೆ ಮಾಡಲು ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಚಿಕ್ಕಬಳ್ಳಾಪುರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮತ್ತು ಸದಸ್ಯರನ್ನು ಅಮಾನತುಗೊಳಿಸಲಾಗಿದೆ.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮುನಿನಾರಾಯಣಸ್ವಾಮಿ, ಸದಸ್ಯರಾದ ಮಹೇಶ್ ಬಿ.ಆರ್. ಮತ್ತು ತ್ರಿಭುವನೇಶ್ವರಿ ಅವರನ್ನು ಹುದ್ದೆಗಳಿಂದ ಅಮಾನತುಗೊಳಿಸಿ ಸರ್ಕಾರ ಆದೇಶಿಸಿದೆ.
2025ರ ಆ. 29ರಂದು ಜಿಲ್ಲಾ 1ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ನಗರದ ಬಾಲಕಿಯರ ಸರ್ಕಾರಿ ಬಾಲ ಮಂದಿರಕ್ಕೆ ಭೇಟಿ ನೀಡಿದ್ದರು.
‘ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮತ್ತು ಸದಸ್ಯರು ಸಂಸ್ಥೆಯಿಂದ ಮಕ್ಕಳನ್ನು ಬಿಡುಗಡೆ ಮಾಡಲು ಹಣಕ್ಕೆ ಬೇಡಿಕೆ ಇಡುತ್ತಾರೆ. ಈಗಾಗಲೇ ಬಿಡುಗಡೆಯಾದ ಕೆಲವು ಮಕ್ಕಳ ಪೋಷಕರಿಂದ ₹50 ಸಾವಿರ ಪಡೆದಿದ್ದಾರೆ’ ಎಂದು ಮಕ್ಕಳು ಆಪಾದಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅವರಿಗೆ ನ್ಯಾಯಾಧೀಶರು ಸೂಚಿಸಿದ್ದರು.
‘ಮಕ್ಕಳ ಸಾಮಾಜಿಕ ತನಿಖಾ ವರದಿ ಬಂದಿದ್ದರೂ ಬಾಲಕಿಯರನ್ನು ಮನೆಗೆ ಕಳುಹಿಸಲು ವಿಳಂಬ ಮಾಡುತ್ತಿದ್ದಾರೆ. ಒಬ್ಬರನ್ನು ಮನೆಗೆ ಕಳುಹಿಸಲು ಕಡ್ಡಾಯವಾಗಿ ₹50 ಸಾವಿರ ಕೊಡಬೇಕು ಎಂದು ಸಮಿತಿ ಅಧ್ಯಕ್ಷ ಮತ್ತು ಸದಸ್ಯರು ಕೇಳುತ್ತಿದ್ದಾರೆ. ಬಾಲಮಂದಿರದಿಂದ ಬಿಡುಗಡೆಯಾದ ಮಕ್ಕಳ ಪೋಷಕರು ಹಣ ನೀಡಿರುವುದಾಗಿ ತಿಳಿಸಿದ್ದಾರೆ. ಪೋಷಕರ ಜೊತೆ ಸಮಿತಿಯವರು ಮಾತನಾಡಿರುವ ಕಾಲ್ ರೆಕಾರ್ಡ್‌ಗಳು ಸಹ ಲಭ್ಯವಿದೆ. ಹಣ ಪಡೆಯುತ್ತಿರುವ ಬಗ್ಗೆ ಮಕ್ಕಳು, ಸಲಹಾ ಪೆಟ್ಟಿಗೆಯಲ್ಲಿ ಬರೆದು ಹಾಕಿರುವ 12 ಪತ್ರಗಳೂ ದೊರೆತಿವೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವರದಿಯಲ್ಲಿ ತಿಳಿಸಿದ್ದರು. ಈ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದರು.
ಈ ವರದಿ ಆಧರಿಸಿ ಮಕ್ಕಳ ನಿರ್ದೇಶನಾಲಯವು ಅಧಿಕಾರಿಗಳ ಮತ್ತೊಂದು ತಂಡ ರಚಿಸಿ ತನಿಖೆಗೆ ಸೂಚಿಸಿತ್ತು. ಅಧಿಕಾರಿಗಳ ತಂಡವು ಚಿಕ್ಕಬಳ್ಳಾಪುರ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯು ಬಾಲ ನ್ಯಾಯ ಕಾಯ್ದೆ ಕಾರ್ಯನಿರ್ವಹಣೆಯಲ್ಲಿ ವಿಫಲವಾಗಿರುವುದನ್ನು ದೃಢೀಕರಿಸಿ ವರದಿ ನೀಡಿತ್ತು.