
ಚಿಕ್ಕಬಳ್ಳಾಪುರ: ತಮಗೆ ಬೇಡವಾದ ಮಕ್ಕಳನ್ನು ಪೋಷಕರು ‘ಮಮತೆಯ ತೊಟ್ಟಿಲು’ ಅಥವಾ ಮಕ್ಕಳ ಸಹಾಯವಾಣಿಗೆ ಒಪ್ಪಿಸುವರು. ಹೀಗೆ ಕಳೆದ ಐದು ವರ್ಷಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಪ್ಪಿಸಲ್ಪಟ್ಟ ಮತ್ತು ಪರಿತ್ಯಕ್ತ ಸೇರಿ ಒಟ್ಟು 62 ಮಕ್ಕಳು ದತ್ತು ಕೇಂದ್ರ ಸೇರಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಮತ್ತು ಬಾಲಕಿಯರ ಸರ್ಕಾರಿ ಬಾಲಮಂದಿರದಲ್ಲಿ ಮಮತೆಯ ತೊಟ್ಟಿಲು ಇರಿಸಲಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿಯೂ ಮಮತೆಯ ತೊಟ್ಟಿಲು ಇದೆ.
ತಮಗೆ ಬೇಡವಾದ ಶಿಶುವನ್ನು ಪೋಷಕರು ಎಲ್ಲೆಂದರಲ್ಲಿ ಬಿಟ್ಟು ಹೋಗುವ ಬದಲು ಈ ತೊಟ್ಟಿಲಲ್ಲಿ ಹಾಕಿದರೆ ಅವರನ್ನು ಯಾರೂ ಪ್ರಶ್ನಿಸುವುದಿಲ್ಲ. ಆ ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದತ್ತುಸ್ವೀಕಾರ ಕೇಂದ್ರದ ಸಿಬ್ಬಂದಿಯೇ ಆರೈಕೆ ಮಾಡುವರು. ನಾಮಕರಣ ಸಹ ಮಾಡುವರು. ಮಕ್ಕಳಿಲ್ಲದ ದಂಪತಿಗೆ ಮಗುವನ್ನು ಕಾನೂನು ಬದ್ಧವಾಗಿ ದತ್ತು ಸಹ ನೀಡಲಾಗುತ್ತದೆ.
ಜಿಲ್ಲೆಯಲ್ಲಿ ಮಕ್ಕಳನ್ನು ಮಮತೆಯ ತೊಟ್ಟಿಲಿನಲ್ಲಿ ಹಾಕಿ ಹೋಗುವುದು ಅಥವಾ ಎಲ್ಲೆಂದರಲ್ಲಿ ಬಿಟ್ಟು ಹೋಗುವ ಪ್ರಕರಣಗಳು ಕಡಿಮೆ ಇವೆ. ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮಗುವನ್ನು ಒಪ್ಪಿಸಿರುವ ಪ್ರಕರಣಗಳೇ ಅಧಿಕ.
ಜಿಲ್ಲೆಯಲ್ಲಿ 2021ರಿಂದ 2026ರ ಈ ಐದು ವರ್ಷಗಳಲ್ಲಿ ಸಹಾಯವಾಣಿಗೆ ಕರೆ ಮಾಡಿ 52 ಮಕ್ಕಳನ್ನು ಒಪ್ಪಿಸಿದ್ದರೆ 10 ಮಕ್ಕಳು ಸಾರ್ವಜನಿಕ ಸ್ಥಳಗಳಲ್ಲಿ ಸಿಕ್ಕಿದ್ದಾರೆ. 2019–20ನೇ ಸಾಲಿನಲ್ಲಿ ಪರಿತ್ಯಕ್ತ ಮತ್ತು ಒಪ್ಪಿಸಲ್ಪಟ್ಟ 7 ಮಕ್ಕಳು ಮಮತೆಯ ತೊಟ್ಟಿಲು ಸೇರಿದ್ದವು. 2020–21ನೇ ಸಾಲಿನಲ್ಲಿ 20 ಮಕ್ಕಳು ತೊಟ್ಟಿಲು ಸೇರಿವೆ.
2021ರ ನವೆಂಬರ್‌ನಲ್ಲಿ ಚಿಂತಾಮಣಿಯ ಯಾದವ ವಿದ್ಯಾರ್ಥಿನಿಲಯದ ಬಳಿ ನವಜಾತ ಹೆಣ್ಣು ಶಿಶು ಇಟ್ಟು ಹೋಗಿದ್ದರು. ಇದೇ ವರ್ಷದ ಅಕ್ಟೋಬರ್‌ನಲ್ಲಿ ಚಿಂತಾಮಣಿ ತಾಲ್ಲೂಕಿನ ಅಂಬಾಜಿದುರ್ಗಾ ಹೋಬಳಿಯ ಉಪ್ಪರಪೇಟೆ ಗ್ರಾಮದ ಕಸದಲ್ಲಿ ಬಿಸಾಕಿದ್ದ ನವಜಾತ ಹೆಣ್ಣು ಶಿಶುವನ್ನು ಗ್ರಾಮಸ್ಥರು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಹೀಗೆ ನವಜಾತ ಶಿಶುಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗುವ ಪ್ರಕರಣಗಳು ಕಡಿಮೆ ಆಗಿವೆ. ಸಹಾಯವಾಣಿಗೆ ಕರೆ ಮಾಡಿ ಅಥವಾ ಮಮತೆಯ ತೊಟ್ಟಿಲಿಗೆ ಒಪ್ಪಿಸುತ್ತಿದ್ದಾರೆ.
90 ದಿನಗಳ ಕಾಲಾವಕಾಶ: ನೇರವಾಗಿ ಬಂದು ಅಥವಾ ಸಹಾಯವಾಣಿ ಮೂಲಕ ಮಕ್ಕಳನ್ನು ನಮಗೆ ಒಪ್ಪಿಸಿದರೆ ಆ ಮಗುವಿನ ಪೋಷಕರಿಂದ ದಾಖಲೆಗಳಿಗೆ ಸಹಿ ಪಡೆಯುತ್ತೇವೆ. 90 ದಿನಗಳ ಒಳಗೆ ಅವರು ಮನಸ್ಸು ಬದಲಿಸಿ ವಾಪಸ್ ಬಂದು ನಮ್ಮ ಮಗು ಕೊಡಿ ಸಾಕುತ್ತೇವೆ ಎಂದರೆ ಆ ಮಗುವನ್ನು ವಾಪಸ್ ನೀಡುತ್ತೇವೆ ಎಂದು ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡುವರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನೌತಾಜ್.
ಈ ಅವಧಿಯಲ್ಲಿ ವಾಪಸ್ ಬಂದು ಮಗುವನ್ನು ಕೇಳದಿದ್ದರೆ ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ದತ್ತು ಪ್ರಕ್ರಿಯೆಗೆ ಒಳಪಡಿಸುತ್ತೇವೆ. ಕಾನೂನು ಬದ್ಧವಾದ ದತ್ತು ಪ್ರಕ್ರಿಯೆಗಳಿಗೆ ಚಾಲನೆ ನೀಡುತ್ತೇವೆ ಎಂದು ತಿಳಿಸಿದರು.
ಕೆಲವರು ಎಲ್ಲೆಂದರಲ್ಲಿ ಮಕ್ಕಳನ್ನು ಬಿಟ್ಟು ಹೋಗಿದ್ದರೆ ಪೋಷಕರನ್ನು ಪತ್ತೆ ಮಾಡುವಂತೆ ಪೊಲೀಸರಿಗೆ ದೂರು ನೀಡುತ್ತೇವೆ. ಅವರು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಮಗು ಸಿಕ್ಕಿದೆ ಎನ್ನುವ ಜಾಹೀರಾತು ನೀಡುತ್ತೇವೆ. ಪೋಷಕರು ಬಾರದಿದ್ದಾಗ ಆ ಮಗುವನ್ನು ದತ್ತು ಪ್ರಕ್ರಿಯೆಗೆ ಒಳಪಡಿಸುತ್ತೇವೆ ಎಂದು ವಿವರಿಸಿದರು.
‘ಪೋಕ್ಸೊ; ಶಿಶುಗಳೇ ಹೆಚ್ಚು’
ಪರಿತ್ಯಕ್ತ ಅಥವಾ ಒಪ್ಪಿಸಲ್ಪಟ್ಟ ಮಗುವನ್ನು ಮೊದಲಿಗೆ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸುತ್ತೇವೆ. ನಂತರ ವೈದ್ಯಕೀಯ ಪರೀಕ್ಷೆ ನಡೆಸಿ ನಗರದಲ್ಲಿರುವ ಕೆ.ವಿ ಟ್ರಸ್ಟ್‌ನ ದತ್ತು ಕೇಂದ್ರಕ್ಕೆ ಆರೈಕೆಗಾಗಿ ನೀಡಲಾಗುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನೌತಾಜ್ ‘ಪ್ರಜಾವಾಣಿ’ಗೆ ತಿಳಿಸಿದರು. ಜಿಲ್ಲೆಯಲ್ಲಿ ಒಪ್ಪಿಸಲ್ಪಟ್ಟ ಮಕ್ಕಳೇ ಅಧಿಕವಾಗಿದ್ದಾರೆ. ಇವರಲ್ಲಿ ಪೋಕ್ಸೊ ಪ್ರಕರಣಗಳಿಂದ ಬಾಧಿಕರಾಗಿ ಗರ್ಭಿಣಿಯರಾದವರ ಮಕ್ಕಳೇ ಹೆಚ್ಚಿದ್ದಾರೆ. ಇವರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ನವಜಾತ ಶಿಶುಗಳನ್ನು ಒಪ್ಪಿಸುತ್ತಾರೆ ಎಂದು ತಿಳಿಸಿದರು. ಅಕ್ರಮದಿಂದ ಜನಿಸಿದ ಮಕ್ಕಳು ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವ ಮನಸ್ಥಿತಿಯುಳ್ಳವರು ಎಲ್ಲೆಂದರಲ್ಲಿ ಎಸೆಯುವ ಬದಲು ಮಕ್ಕಳನ್ನು ಒಪ್ಪಿಸುತ್ತಿದ್ದಾರೆ ಎಂದರು. ಎಲ್ಲೊ ಇದ್ದವರು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿರುವ ಮಮತೆಯ ತೊಟ್ಟಿಲಿಗೆ ಮಕ್ಕಳನ್ನು ಹಾಕುವುದು ಕಷ್ಟ. ಅವರು 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದಾಗ ನಮ್ಮ ಸಿಬ್ಬಂದಿಯೇ ಸ್ಥಳಕ್ಕೆ ತೆರಳಿ ಮಗುವನ್ನು ಸುಪರ್ದಿಗೆ ತೆಗೆದುಕೊಳ್ಳುವರು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.