ADVERTISEMENT

ಇಂದು ಚಿಮುಲ್ ಚುನಾವಣೆ; ಕಾಂಗ್ರೆಸ್–ಎನ್‌ಡಿಎ ನಡುವೆ ಅಧಿಕಾರಕ್ಕೆ ಸೆಣಸಾಟ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 6:56 IST
Last Updated 1 ಫೆಬ್ರುವರಿ 2026, 6:56 IST
ಚಿಕ್ಕಬಳ್ಳಾಪುರ ಹಾಲು ಒಕ್ಕೂಟ
ಚಿಕ್ಕಬಳ್ಳಾಪುರ ಹಾಲು ಒಕ್ಕೂಟ   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಲಿದೆ. ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಾಲೇಜಿನಲ್ಲಿ ಮತದಾನ ಜರುಗಲಿದೆ.

ಚಿಮುಲ್ ಅಸ್ತಿತ್ವಕ್ಕೆ ಬಂದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಮತದಾನದ ತರುವಾಯ ಎಣಿಕೆ ಕಾರ್ಯ ನಡೆಯಲಿದೆ. ಸಂಜೆಯ ವೇಳೆಗೆ ಸೋಲು ಗೆಲುವಿನ ಫಲಿತಾಂಶ ಹೊರ ಬೀಳಲಿದೆ.

ಚಿಮುಲ್‌ನ 13 ಕ್ಷೇತ್ರಗಳಿಗೆ ಒಟ್ಟು 28 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಮಾತ್ರ ಮೂವರು ಅಭ್ಯರ್ಥಿಗಳ ನಡುವೆ ಸ್ಪರ್ಧೆ ಇದೆ. ಉಳಿದ ಎಲ್ಲ ಕ್ಷೇತ್ರಗಳಲ್ಲಿಯೂ ನೇರಾ ನೇರ ಹಣಾಹಣಿ ಇದೆ. ಕಾಂಗ್ರೆಸ್ ಬೆಂಬಲಿತರು ಮತ್ತು ಜೆಡಿಎಸ್‌, ಬಿಜೆಪಿ (ಎನ್‌ಡಿಎ) ಬೆಂಬಲಿತರ ನಡುವೆ ಚುನಾವಣಾ ಸಮರ ನಡೆದಿದೆ. 13 ಕ್ಷೇತ್ರಗಳಿಂದ ಒಟ್ಟು 952 ಡೆಲಿಗೇಟ್‌ (ಮತದಾರರು) ಹಕ್ಕು ಚಲಾಯಿಸುವರು.

ADVERTISEMENT

ಸಂಸದ ಡಾ.ಕೆ.ಸುಧಾಕರ್ ಎನ್‌ಡಿಎ ಮೈತ್ರಿಕೂಟವು 8ರಿಂದ 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಚಿವ ಡಾ.ಎಂ.ಸಿ.ಸುಧಾಕರ್ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಹಿಡಿಯುವರು ಎಂದಿದ್ದಾರೆ. 

ಚಿಮುಲ್ ಚುನಾವಣೆಯು ಅಭ್ಯರ್ಥಿಗಳ ನಡುವೆ ಪ್ರತಿಷ್ಠೆಯಾಗಿದೆ. ಡೆಲಿಗೇಟ್‌ಗಳ ಮನಗೆಲ್ಲಲು ಅಭ್ಯರ್ಥಿಗಳು ಕೈ ಬಿಚ್ಚಿ ಹಣ ನೀಡಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಒಂದು ಮತಕ್ಕೆ ₹ 2 ಲಕ್ಷದಷ್ಟು ಹಣ ನೀಡಲಾಗುತ್ತಿದೆ ಎನ್ನುವ ಮಾತುಗಳಿವೆ. ಕೆಲವು ಡೆಲಿಗೇಟ್‌ಗಳನ್ನು ಪ್ರವಾಸಕ್ಕೆ ಕರೆದೊಯ್ಯಲಾಗಿದೆ. ಇವರು ನೇರವಾಗಿ ಮತದಾನದ ಸ್ಥಳಕ್ಕೆ ಬರುವರು. 

ಒಂದೊಂದು ಕ್ಷೇತ್ರದಲ್ಲಿಯೂ ಒಂದೊಂದು ರೀತಿಯ ಚಿತ್ರಣವಿದೆ. ಸಂಪರ್ಕ, ಪ್ರಭಾವ, ಹಣ, ಮನವೊಲಿಕೆ, ಪಕ್ಷ ಹೀಗೆ ವಿವಿಧ ವಿಚಾರಗಳು ಅಭ್ಯರ್ಥಿಗಳ ಸೋಲು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ಹಿಂದೆ ಕೋಚಿಮುಲ್ ನಿರ್ದೇಶಕರಾಗಿದ್ದವರು ಈಗ ಚಿಮುಲ್ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿದ್ದಾರೆ. ಒಂದಿಷ್ಟು ಮಂದಿ ಮೊದಲಬಾರಿಗೆ ಹಾಲು ಒಕ್ಕೂಟದ ಚುನಾವಣೆಯ ಕಣಕ್ಕೆ ಇಳಿದಿದ್ದಾರೆ. ಹೀಗೆ ಅನುಭವಿಗಳು ಮತ್ತು ಮೊದಲ ಬಾರಿ ಕಣಕ್ಕೆ ಇಳಿದವರು ಶನಿವಾರ ಅಂತಿಮ ಕ್ಷಣದಲ್ಲಿ ಮತದಾರರ ಮನ ಗೆಲ್ಲಲು ಸರ್ಕಸ್ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.