ADVERTISEMENT

ಚಿಕ್ಕಬಳ್ಳಾಪುರ: ಪ್ರಾಂಶುಪಾಲರ ಕೊಠಡಿಯಲ್ಲಿ ಮಾಟ

ಸರ್ಕಾರಿ ಪದವಿ ಕಾಲೇಜಿನಲ್ಲಿ ಪಟ್ಟಭದ್ರರಿಂದ ಕೃತ್ಯ; ಕಾಲೇಜು ಅಂಗಳದಲ್ಲಿ ತೀವ್ರ ಚರ್ಚೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 16:25 IST
Last Updated 19 ಜುಲೈ 2022, 16:25 IST
ಚಿಕ್ಕಬಳ್ಳಾಪುರ ಪದವಿ ಕಾಲೇಜಿನ ಪ್ರಾಂಶುಪಾಲರ ಕೊಠಡಿಯಲ್ಲಿದ್ದ ಗೊಂಬೆ
ಚಿಕ್ಕಬಳ್ಳಾಪುರ ಪದವಿ ಕಾಲೇಜಿನ ಪ್ರಾಂಶುಪಾಲರ ಕೊಠಡಿಯಲ್ಲಿದ್ದ ಗೊಂಬೆ   

ಚಿಕ್ಕಬಳ್ಳಾಪುರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರ ಕೊಠಡಿಯಲ್ಲಿ ಮಾಟ, ಮಂತ್ರದ ಬೊಂಬೆ ಪತ್ತೆಯಾಗಿದೆ! ‘ವೊಡೋಫೋನ್’ ಜಾಹೀರಾತಿನಲ್ಲಿ ಬರುತ್ತಿದ್ದ ಗೊಂಬೆಯ ಮಾದರಿಯಲ್ಲಿ ಮಾಟಕ್ಕೆ ಬಳಸಿರುವ ಗೊಂಬೆ ಇದೆ. ಕೆಂಪುದಾರವನ್ನು ಗೊಂಬೆ ಬಳಿ ಇಟ್ಟಿದ್ದಾರೆ.

ತಾವೇ ಪ್ರಾಂಶುಪಾಲರ ಹುದ್ದೆಯಲ್ಲಿ ಮುಂದುವರಿಯಬೇಕು, ಬೇರೊಬ್ಬರು ಅಧಿಕಾರವಹಿಸಿಕೊಳ್ಳಲು ಬಂದರೆ ಈ ಮಾಟ, ಮಂತ್ರವನ್ನು ನೋಡಿ ಹೆದರಿ ಕಾಲು ಕೀಳಬೇಕು ಅಥವಾ ಅವರು ಹೆಚ್ಚು ದಿನ ಹುದ್ದೆಯಲ್ಲಿ ಮುಂದುವರಿಯಬಾರದು ಎನ್ನುವ ದೃಷ್ಟಿಯಿಂದ ಈ ರೀತಿಯಲ್ಲಿ ಮಾಟ, ಮಂತ್ರವನ್ನು ಕಾಲೇಜಿನ ಪಟ್ಟಭದ್ರರು ನಡೆಸಿದರೇ ಎನ್ನುವ ಅನುಮಾನ ಮೂಡಿದೆ.ಪ್ರಾಂಶುಪಾಲರ ಕೊಠಡಿಯಲ್ಲಿಯೇ ಈ ರೀತಿ ಮಾಟ ಮಂತ್ರದ ಗೊಂಬೆ ಇಡಲು ಹೊರಗಿನ ವ್ಯಕ್ತಿಗಳಿಂದ ಸಾಧ್ಯವಿಲ್ಲ ಎಂದು ಕಾಲೇಜಿನ ಅಂಗಳದಲ್ಲಿ ಈ ವಿಚಾರ ಚರ್ಚೆ ಆಗುತ್ತಿದೆ.

ಪ್ರಾಂಶುಪಾಲರ ಹುದ್ದೆ ಈ ಹಿಂದಿನಿಂದಲೂ ‘ಪ್ರಭಾರ’ವಾಗಿದೆ.ಹಿರಿಯ ಉಪನ್ಯಾಸಕರಿಗೆ ‘ಪ್ರಭಾರ’ ಪ್ರಾಂಶುಪಾಲ ಹುದ್ದೆಯ ಜವಾಬ್ದಾರಿ ನೀಡಲಾಗುತ್ತಿದೆ. ಈ ಹಿಂದೆ ಚಂದ್ರಯ್ಯ ಮತ್ತು ಶ್ರೀನಿವಾಸ್ ‘ಪ್ರಭಾರ’ ಪ್ರಾಂಶುಪಾಲರಾಗಿದ್ದರು. ಚಂದ್ರಯ್ಯ ಸರ್ಕಾರಿ ಮಹಿಳಾ ಪದವಿ ಕಾಲೇಜಿಗೆ ವರ್ಗಾವಣೆಯಾಗಿದ್ದಾರೆ. ಈಗ ಸಮಾಜಶಾಸ್ತ್ರ ಉಪನ್ಯಾಸಕರಾಗಿದ್ದ ಶಕುಂತಲಾ ಪ್ರಾಂಶುಪಾಲರಾಗಿ ಜವಾಬ್ದಾರಿ ಸ್ವೀಕರಿಸಿದ್ದಾರೆ. ಮತ್ತಷ್ಟು ಹಿರಿಯ ಉಪನ್ಯಾಸಕರು ಈ ಹುದ್ದೆಯ ಮೇಲೆ ದೃಷ್ಟಿ ನೆಟ್ಟಿದ್ದರು ಎನ್ನುತ್ತವೆ ಕಾಲೇಜು ಮೂಲಗಳು.

ADVERTISEMENT

ಕಾಲೇಜಿನಲ್ಲಿ ಕೆಲವು ಉಪನ್ಯಾಸಕರು ‘ತಮ್ಮದೇ’ ಹಿಡಿತ ಹೊಂದಿದ್ದಾರೆ. ಕಾಲೇಜಿನ ಆಳ–ಅಗಲವನ್ನು ಮತ್ತು ವ್ಯವಹಾರಗಳನ್ನು ಚೆನ್ನಾಗಿಯೇ ಬಲ್ಲವರಾಗಿದ್ದಾರೆ. ಇಂತಹವರು ಪ್ರಾಂಶುಪಾಲರ ಹುದ್ದೆಯ ಮೇಲೆ ದೃಷ್ಟಿ ನೆಟ್ಟಿದ್ದರು ಎಂದು ಕಾಲೇಜಿನ ಆಂತರಿಕ ಮೂಲಗಳು ತಿಳಿಸಿವೆ.ಕಾಲೇಜಿನ ಸಿಬ್ಬಂದಿ ಪ್ರಾಂಶುಪಾಲರ ಕೊಠಡಿಯನ್ನು ಸ್ವಚ್ಛಗೊಳಿಸುವಾಗ ಈ ಗೊಂಬೆ ಅವರಿಗೆ ದೊರೆತಿದೆ.

ಹೀಗೆ ಶೈಕ್ಷಣಿಕ ಚಟುವಟಿಕೆಗಳ ಕಾರಣದಿಂದ ಹೆಸರಾಗಬೇಕಾಗಿದ್ದ ಕಾಲೇಜು ಈಗ ಮಾಟ ಮಂತ್ರದ ಕಾರಣ ಚರ್ಚೆಗೆ ಒಳಗಾಗಿದೆ. ಪ್ರಾಂಶುಪಾಲರ ಹುದ್ದೆಯ ಮೇಲೆ ಕಣ್ಣಿಟ್ಟವರು ಈ ರೀತಿಯಲ್ಲಿ ಮಾಟ ಮಂತ್ರವನ್ನು ಮಾಡಿಸಿದ್ದಾರೆ ಎನ್ನುವ ಮಾತುಗಳು ಕಾಲೇಜು ಅಂಗಳದಲ್ಲಿ ಪ್ರಬಲವಾಗಿ ಕೇಳಿ ಬರುತ್ತಿವೆ.

***

ಕೆಲಸಗಾರರಿಗೆ ಗೊಂಬೆ ಸಿಕ್ಕಿತು

ನಾನು ಶುಕ್ರವಾರ ಪ್ರಾಂಶುಪಾಲರಾಗಿ ಜವಾಬ್ದಾರಿವಹಿಸಿಕೊಂಡೆ. ಕೊಠಡಿ ಸ್ವಚ್ಛಗೊಳಿಸುವಂತೆ ಕೆಲಸಗಾರರಿಗೆ ತಿಳಿಸಿದ್ದೆವು. ಸ್ವಚ್ಛತೆ ವೇಳೆ ಅವರಿಗೆ ಮಾಟ ಮಾಡಿರುವ ರೀತಿಯಲ್ಲಿ ಗೊಂಬೆ ಸಿಕ್ಕಿದೆ.ನನಗೆ ಅವರು ಈ ಬಗ್ಗೆ ತಿಳಿಸಿದರು. ಯಾರು ಈ ಗೊಂಬೆ ಇಟ್ಟಿದ್ದಾರೆ, ಯಾವ ಕಾರಣಕ್ಕೆ ಇಟ್ಟಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದು ‍ಪ್ರಾಂಶುಪಾಲರಾದ ಶಕುಂತಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ಒಂದು ವೇಳೆ ಯಾರಾದರೂ ಬೆದರಿಸುವ ಉದ್ದೇಶದಿಂದ ಗೊಂಬೆ ಇಟ್ಟಿದ್ದರೆ, ಅಂತಹ ಬೆದರಿಗೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕಾಲೇಜಿನ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮಗೊಳಿಸುವ ಕಡೆಗೆ ನನ್ನ ಗಮನವಿರುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.