ಚಿಕ್ಕಬಳ್ಳಾಪುರ: ಚಿಂತಾಮಣಿಯ 10ನೇ ವಾರ್ಡ್‌ನ 71 ವರ್ಷದ ಸೋಂಕಿತ ವ್ಯಕ್ತಿಯಿಂದ ಅವರ ಮಗಳು ಮತ್ತುಅಳಿಯನಿಗೆ ಕೋವಿಡ್-19 ತಗುಲಿರುವುದು ಗುರುವಾರ ದೃಢಪಟ್ಟಿದ್ದು, ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.
ಚಿಂತಾಮಣಿಯಲ್ಲಿ ಮೇ 9ರಂದು ಮೊದಲ ಕೋವಿಡ್ ಪ್ರಕರಣ ವರದಿಯಾಗಿತ್ತು. ಮೇ 10 ರಂದು ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ ಅವರ 22ರ ಹರೆಯದ ಮೊಮ್ಮಗನಿಗೆ, ಮೇ 12 ರಂದು 45 ವರ್ಷದ ಮಗನಿಗೆಕೋವಿಡ್ ಅಂಟಿರುವುದು ಪತ್ತೆಯಾಗಿತ್ತು.
71 ವರ್ಷದ ಸೋಂಕಿತ ವ್ಯಕ್ತಿಯ ಪತ್ನಿಯು ಮೇ 4 ರಂದು ಮೃತಪಟ್ಟಿದ್ದರು. ಅಂತ್ಯಸಂಸ್ಕಾರಕ್ಕಾಗಿ ಬೆಂಗಳೂರಿನ ವಿಜಯನಗರದಲ್ಲಿರುವ ಅವರ ಪುತ್ರಿ ಪತಿ ಸಮೇತ ಚಿಂತಾಮಣಿಗೆ ಬಂದು, ತಂದೆ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಇದೀಗ ಆ ದಂಪತಿಗೂ ಕೋವಿಡ್-19 ತಗುಲಿದೆ.
ಚಿಂತಾಮಣಿಯಲ್ಲಿ ಮೊದಲ ಪ್ರಕರಣ ವರದಿಯಾಗುತ್ತಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದ ಸುಮಾರು 200 ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಿದ್ದರು. ಈ ಪೈಕಿ ಸುಮಾರು 50 ಜನರು ಈಗಲೂ ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ಈಗಾಗಲೇ ಜಿಲ್ಲಾಡಳಿತ ಚಿಂತಾಮಣಿಯ 9 ಮತ್ತು 10ನೇ ವಾರ್ಡ್‌ಗಳನ್ನು ಸೋಂಕು ಪೀಡಿತ ವಲಯವನ್ನಾಗಿ ಗುರುತಿಸಿ ಸೀಲ್‌ಡೌನ್ ಮಾಡಿದೆ. ಸ್ಥಳೀಯ ಜನರ ನೆರವಿಗಾಗಿ ನೋಡಲ್ ಅಧಿಕಾರಿಗಳು, ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ ಗೌರಿಬಿದನೂರಿನ 12, ಚಿಕ್ಕಬಳ್ಳಾಪುರದ 9 ಮತ್ತು ಚಿಂತಾಮಣಿಯ 5 ಜನರು ಸೇರಿದಂತೆ 26 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಈ ಪೈಕಿ ಇಬ್ಬರು (ಗೌರಿಬಿದನೂರು, ಚಿಕ್ಕಬಳ್ಳಾಪುರದ ತಲಾ ಒಬ್ಬರು) ಮೃತಪಟ್ಟಿದ್ದಾರೆ. ಉಳಿದಂತೆ ಗೌರಿಬಿದನೂರಿನ 11, ಚಿಕ್ಕಬಳ್ಳಾಪುರದ 7 ಸೋಂಕಿತರು ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಸದ್ಯ ಜಿಲ್ಲಾ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ಆರು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.