ADVERTISEMENT

ಚಿಕ್ಕಬಳ್ಳಾಪುರ: ಡೇರಿಗಳಲ್ಲಿ ‘ಡೆಲಿಗೇಟ್‌’ಗೆ ತಿಕ್ಕಾಟ

ಜಿಲ್ಲೆಯಲ್ಲಿ 48 ಡೇರಿಗಳಲ್ಲಿ ಆಡಳಿತ ಮಂಡಳಿ ಇದ್ದರೂ ಸಲ್ಲಿಕೆಯಾಗದ ‘ಪ್ರತಿನಿಧಿ’

ಡಿ.ಎಂ.ಕುರ್ಕೆ ಪ್ರಶಾಂತ
Published 22 ಡಿಸೆಂಬರ್ 2025, 6:31 IST
Last Updated 22 ಡಿಸೆಂಬರ್ 2025, 6:31 IST
ಚಿಕ್ಕಬಳ್ಳಾಪುರ ಮೆಗಾ ಡೇರಿ
ಚಿಕ್ಕಬಳ್ಳಾಪುರ ಮೆಗಾ ಡೇರಿ   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ಚುನಾವಣೆ ಫೆ.1ಕ್ಕೆ ನಿಗದಿಯಾಗಿದೆ. ಜಿಲ್ಲೆಯಲ್ಲಿ 913 ಅರ್ಹ ಮತ್ತು 83 ಅನರ್ಹ ಮತದಾರರ ಪಟ್ಟಿಯನ್ನು ಚಿಮುಲ್ ಪ್ರಕಟಿಸಿದೆ.

ಇಷ್ಟೊಂದು ಸಂಖ್ಯೆಯಲ್ಲಿ ಅನರ್ಹ ಮತದಾರರು ಪಟ್ಟಿಯಲ್ಲಿ ಸ್ಥಾನ ಪಡೆಯಲು ಹಾಲು ಉತ್ಪಾದಕರ ಸಹಕಾರ ಸಂಘಗಳು (ಡೇರಿ)ಗಳಲ್ಲಿನ ತಿಕ್ಕಾಟವೇ ಪ್ರಮುಖವಾಗಿವೆ. ಅನರ್ಹ ಮತದಾರರ ಪಟ್ಟಿಯಲ್ಲಿರುವ 83 ಡೇರಿಗಳ ಪೈಕಿ 48 ಡೇರಿಗಳಲ್ಲಿ ಆಡಳಿತ ಮಂಡಳಿಗಳು ಇವೆ. ಹೀಗಿದ್ದರೂ ಮಂಡಳಿಯಲ್ಲಿ ‘ಡಿಲಿಗೇಟ್‌’ ಆಯ್ಕೆ ವಿಚಾರವಾಗಿ ಒಮ್ಮತ ಮೂಡದ ಕಾರಣ ಅನರ್ಹ ಮತದಾರರ ಪಟ್ಟಿಯಲ್ಲಿವೆ.

ಚುನಾವಣೆಗಳು ನಡೆದು ಆಡಳಿತ ಮಂಡಳಿಗಳು ಆಯ್ಕೆಯಾಗದ ಡೇರಿಗಳಿಗೆ ವಿಶೇಷಾಧಿಕಾರಿ ಮತ್ತು ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಈ ಪೈಕಿ 10 ಡೇರಿಗಳಲ್ಲಿ ವಿಶೇಷಾಧಿಕಾರಿ ಮತ್ತು 25 ಡೇರಿಗಳಲ್ಲಿ ಆಡಳಿತಾಧಿಕಾರಿ ಇದ್ದಾರೆ. 

ADVERTISEMENT

ಪ್ರತಿ ಹಾಲು ಉತ್ಪಾದಕರ ಸಹಕಾರ ಸಂಘ (ಡೇರಿ)ಗಳ ನಿರ್ದೇಶಕರ ಪೈಕಿ ಒಬ್ಬರು ನಿರ್ದೇಶಕ ಚುನಾವಣೆಯಲ್ಲಿ ಮತದಾನಕ್ಕೆ ಅರ್ಹರಾಗಿರುತ್ತಾರೆ. ಈ ಹಿಂದೆ ಡೇರಿ ಅಧ್ಯಕ್ಷರೇ ನಿರ್ದೇಶಕರ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿದ್ದರು. ಆದರೆ ಈಗ ನಿಯಮಗಳು ಬದಲಾಗಿವೆ. ಡೇರಿ ನಿರ್ದೇಶಕರು ಸಭೆ ನಡೆಸಿ ಬಹುಮತದ ಆಧಾರದಲ್ಲಿ ಒಬ್ಬ ನಿರ್ದೇಶಕರನ್ನು
(ಡೆಲಿಗೇಟ್‌) ಮತದಾರರನ್ನಾಗಿ ಆಯ್ಕೆ ಮಾಡಬಹುದು. ಈಗ ಈ ಆಯ್ಕೆ
ಪ್ರಕ್ರಿಯೆಗಳೆಲ್ಲ ಮುಗಿದು ಕರಡು ಮತದಾರರ ಪಟ್ಟಿ ‌ಪ್ರಕಟವಾಗಿದೆ.

ಹೀಗೆ ಡೆಲಿಗೇಟ್ ಆಯ್ಕೆ ವಿಚಾರವಾಗಿ ಡೇರಿಗಳಲ್ಲಿ ದೊಡ್ಡ ಗೊಂದಲಗಳು ಮುಂದುವರಿದಿವೆ. ಆಡಳಿತಾಧಿಕಾರಿ ಮತ್ತು ವಿಶೇಷಾಧಿಕಾರಿಗಳಿರುವ ಡೇರಿಗಳಿಗೆ ಚುನಾವಣೆ ನಡೆಸಿ ಡೆಲಿಗೇಟ್ ಆಯ್ಕೆ ಮಾಡಿ ಜ.7ರವರೆಗೆ ಚಿಮುಲ್‌ಗೆ ಸಲ್ಲಿಸಲು ಅವಕಾಶವಿದೆ. 

ಕಾಂಚಾಣದ ಸದ್ದು: ಕೆಲವು ಡೇರಿಗಳಲ್ಲಿ ಡಿಲಿಗೇಟ್‌ಗಳಾಗಲು ನಿರ್ದೇಶಕರು ಕೈ ಬಿಚ್ಚಿ ಹಣವನ್ನೂ ಖರ್ಚು ಮಾಡಿದ್ದಾರೆ ಎನ್ನುತ್ತವೆ ಮೂಲಗಳು. ಇದನ್ನು ಡೇರಿ ನಿರ್ದೇಶಕರೊಬ್ಬರೇ ಖಚಿತಪಡಿಸುವರು.

ಚಿಮುಲ್ ಚುನಾವಣೆ ಜಿಲ್ಲೆಯ ಸಹಕಾರ ವಲಯದಲ್ಲಿ ಪ್ರಮುಖವಾಗಿದೆ. ಕಾಂಗ್ರೆಸ್ ಮತ್ತು ಎನ್‌ಡಿಎ (ಬಿಜೆಪಿ, ಜೆಡಿಎಸ್) ಬೆಂಬಲಿತರ ನಡುವೆ ನೇರಹಣಾ ಹಣಿ ನಡೆಯುವುದು ಖಚಿತ. ಈ ಹಿನ್ನೆಲೆಯಲ್ಲಿ ಮತದಾರರು ಎನಿಸುವ ‘ಡಿಲಿಗೇಟ್‌’ಗಳ ಮನವೊಲಿಕೆಗೆ ಸಹಕಾರಿ ಧುರೀಣರು, ಸ್ಪರ್ಧಿಗಳು ಮುಂದಾಗುವರು.

ಕೆಲವು ಡೇರಿಗಳಲ್ಲಿ ಒಮ್ಮತದಿಂದ ಡಿಲಿಗೇಟ್‌ಗಳ ಆಯ್ಕೆ ನಡೆದಿವೆ. ಕೆಲವು ಕಡೆ ಹಣವೇ ಪ್ರಧಾನವಾಗಿ ಡಿಲಿಗೇಟ್‌ಗಳ ಆಯ್ಕೆ ನಡೆದಿದೆ. 

ಅನರ್ಹ ಮತದಾರರಪಟ್ಟಿಯಲ್ಲಿರುವ ಸಂಘಗಳು: ಕೈವಾರ ಕ್ಷೇತ್ರದ ಭಕ್ತರಹಳ್ಳಿಯ ಡೇರಿಯಿಂದ ಡಿಲಿಗೇಟ್ ಸಲ್ಲಿಕೆ ಆಗಿಲ್ಲ. ವೆಂಕಟಾಪುರ ಮತ್ತು ಅಟ್ಟೂರಿನಲ್ಲಿ ವಿಶೇಷಾಧಿಕಾರಿ ಇದ್ದಾರೆ.

ಗೌರಿಬಿದನೂರು ಕ್ಷೇತ್ರದ ಕಡಬೂರು, ಜಗರೆಡ್ಡಿಹಳ್ಳಿ, ಮುದಲೋಡು, ಹಿರೇನಾಗವಲ್ಲಿ,
ಚಿಗಟಗೆರೆ, ದಿನ್ನೆಮೇಲಿನಹಳ್ಳಿ ಹಾಲು ಉತ್ಪಾದಕರ ಸಂಘಗಳಲ್ಲಿ ಆಡಳಿತ ಮಂಡಳಿ ಇದ್ದರೂ ಡೆಲಿಗೇಟ್ ಸಲ್ಲಿಕೆಯಾಗಿಲ್ಲ. ಚಂದನದೂರು, ನಂಜಯ್ಯಗಾರಹಳ್ಳಿಯಲ್ಲಿ ವಿಶೇಷಾಧಿಕಾರಿ ಮತ್ತು ಮುದುಗೆರೆ, ಬೈಚಾಪುರದಲ್ಲಿ ಆಡಳಿತಾಧಿಕಾರಿ ಕೆಲಸ ನಿರ್ವಹಿಸುತ್ತಿದ್ದಾರೆ.

ಗುಡಿಬಂಡೆ ಕ್ಷೇತ್ರದಲ್ಲಿ ಪುರದಹಳ್ಳಿ, ಕಮ್ಮಡಿಕೆ, ಗೆದ್ದಿಲಾರಲಾಳ್ಳಹಳ್ಳಿ, ಅಪ್ಪಿರೆಡ್ಡಿಹಳ್ಳಿ ಮತ್ತು
ಲಕ್ಷ್ಮಿಸಾಗರದಲ್ಲಿ ಆಡಳಿತಾಧಿಕಾರಿ, ಚೌಟತಿಮ್ಮನಹಳ್ಳಿಯಲ್ಲಿ ವಿಶೇಷಾಧಿಕಾರಿ ಇದ್ದಾರೆ. ಮಲ್ಲೇನಹಳ್ಳಿ, ಗುಮ್ಮರೆಡ್ಡಿಹಳ್ಳಿ, ಪೋಲಂಪಲ್ಲಿ, ರಾಮಗಾನಹಳ್ಳಿ ಆಡಳಿತ ಮಂಡಳಿ ಇದ್ದರೂ ಒಮ್ಮತದಕ್ಕೆ ಬಾರದ ಕಾರಣ ಡಿಲಿಗೇಟ್ ಸಲ್ಲಿಕೆ ಆಗಿಲ್ಲ.

ಮಂಚೆನಹಳ್ಳಿ ಕ್ಷೇತ್ರದಲ್ಲಿ ಬಂಡಿರಾಮನಹಳ್ಳಿ, ಬಾಲರೆಡ್ಡಿಹಳ್ಳಿ, ಕಾಮಗಾನಹಳ್ಳಿ, ಬಂದ್ರಹಳ್ಳಿ ಡೇರಿಗಳೂ ಡಿಲಿಗೇಟ್ ಸಲ್ಲಿಕೆ ಆಗಿಲ್ಲ. ಜಿ.ಬೊಮ್ಮಸಂದ್ರ, ಚಿಕ್ಕಹನುಮೇನಹಳ್ಳಿ, ರೆಡ್ಡಿದೇವರಹಳ್ಳಿ, ಮಿಣಗನಗುರ್ಕಿ, ಗುಣಿಬೀಡಿನಲ್ಲಿ ಆಡಳಿತಾಧಿಕಾರಿ ಇದ್ದಾರೆ.

ಚಿಂತಾಮಣಿ ಕಸಬಾದ ಗೋಪಲ್ಲಿ ಡೇರಿಯಲ್ಲಿಯೂ ಡಿಲಿಗೇಟ್ ಸಲ್ಲಿಸಿಲ್ಲ. ಗೋ‍ಪಸಂದ್ರದಲ್ಲಿ ವಿಶೇಷಾಧಿಕಾರಿ ಇದ್ದಾರೆ. ಚಿಂತಾಮಣಿ ಮಹಿಳಾ ಕ್ಷೇತ್ರದಲ್ಲಿನ ಚಿಂತಮಾಕಲಹಳ್ಳಿ,  ಯಲ್ಲಂಪಲ್ಲಿ, ಗುರ್ಲಾಲದಿನ್ನೆ ಮತ್ತು ಸೋಮಕಲಪಲ್ಲಿ ಡೇರಿಗಳಲ್ಲಿ ಆಡಳಿತ ಮಂಡಳಿ ಇದ್ದರೂ ಮತದಾನದ ಹಕ್ಕು ಪಡೆದಿಲ್ಲ.

ಚಿಕ್ಕಬಳ್ಳಾಪುರ ಕ್ಷೇತ್ರದ ಸುಲ್ತಾನ್‌ಪೇಟೆ, ಗಿಡ್ನಹಳ್ಳಿ, ಬೊಮ್ಮನಹಳ್ಳಿಯ ಡೇರಿಗಳಲ್ಲಿಯೂ ಡಿಲಿಗೇಟ್ ಆಯ್ಕೆಯಾಗಿಲ್ಲ. ‌ಅಜ್ಜವಾರದಲ್ಲಿ ಆಡಳಿತಾಧಿಕಾರಿ ಇದ್ದಾರೆ. ಚಿಕ್ಕಬಳ್ಳಾಪುರ ಮಹಿಳಾ ಕ್ಷೇತ್ರ ವ್ಯಾಪ್ತಿಯ ಮಂಚೇನಹಳ್ಳಿ, ಪಡಿಚಲಹಳ್ಳಿ, ರಾಮಚಂದ್ರಪುರ ಡೇರಿಗಳು ಪ್ರತಿನಿಧಿ ಆಯ್ಕೆ ಮಾಡಿಲ್ಲ. ಗುಟ್ಟೇನಹಳ್ಳಿಯಲ್ಲಿ ವಿಶೇಷಾಧಿಕಾರಿ, ಆವುಲನಾಗೇನಹಳ್ಳಿಯಲ್ಡಿ ಆಳಿತಾಧಿಕಾರಿ ಇದ್ದಾರೆ.

ಚೇಳೂರು ಕ್ಷೇತ್ರದ ಚೊಕ್ಕನಹಳ್ಳಿ, ಟಿ.ದೇವಪಲ್ಲಿ, ಕೊನೆಪಲ್ಲಿ ಡೇರಿ ಆಡಳಿತ ಮಂಡಳಿಯೂ ಪ್ರತಿನಿಧಿತ್ವ ಸಲ್ಲಿಸಿಲ್ಲ. ಬಚ್ಚಗಾನಹಳ್ಳಿಯಲ್ಲಿ ಆಡಳಿತಾಧಿಕಾರಿ,  ಗುಂಟೂರು,  ಕೆ.ದೇವಗಾನಹಳ್ಳಿಯಲ್ಲಿ ವಿಶೇಷಾಧಿಕಾರಿ ಇದ್ದಾರೆ.

ಜಂಗಮಕೋಟೆ ಕ್ಷೇತ್ರವು ಹೊಸದಾಗಿ ಸೃಷ್ಟಿಯಾಗಿದೆ. ಈ ಕ್ಷೇತ್ರದ ಎಂ.ಕಾಚಹಳ್ಳಿ, ಹೆಣ್ಣೂರು,
ಹಾರಡಿ, ಕೆ.ಹೊಸೂರು, ಬೈರಸಂದ್ರ, ಹರಳಹಳ್ಳಿ, ಅಪ್ಪೇಗೌಡನಹಳ್ಳಿ, ತುಮ್ಮನಹಳ್ಳಿ,
ಗೆಜ್ಜಗಾನಹಳ್ಳಿ ಡೇರಿಗಳೂ ಸಹ ಅನರ್ಹ ಮತದಾರರಪಟ್ಟಿಯಲ್ಲಿವೆ. ಹೆಣ್ಣಂಗೂರಿನಲ್ಲಿ ಆಡಳಿತಾಧಿಕಾರಿ ಇದ್ದಾರೆ.

ಪೆರೇಸಂದ್ರ ಕ್ಷೇತ್ರದ ದಿನ್ನೇಹೊಸಹಳ್ಳಿ, ಮುಷ್ಟೂರು, ಕರಿಗಾನಹಳ್ಳಿ, ರೆಡ್ಡಿಗೊಲ್ಲಾರಹಳ್ಳಿ
ಕಟಾರಿ ಕದಿರೇನಹಳ್ಳಿ ಡೇರಿಗಳದ್ದೂ ಇದೇ ಸ್ಥಿತಿ, ಆರೂರಿನಲ್ಲಿ ವಿಶೇಷಾಧಿಕಾರಿ, 
ದೊಡ್ಡಪೈಲಗುರ್ಕಿ ಡೇರಿಯಲ್ಲಿ ಆಡಳಿತಾಧಿಕಾರಿ ಇದ್ದಾರೆ.

ಬಾಗೇಪಲ್ಲಿ ಕ್ಷೇತ್ರದ ದಿಂಬಾರ್ಲಹಳ್ಳಿ, ಆಚೆಪಲ್ಲಿ, ಬಿಳ್ಳೂರು, ಮೊಟಕಪಲ್ಲಿ, ಪೋತೇಪಲ್ಲಿ ಡೇರಿಗಳಲ್ಲಿ ಆಡಳಿತಾಧಿಕಾರಿ ಕೆಲಸ ನಿರ್ವಹಿಸುತ್ತಿದ್ದಾರೆ. ಪೆನುಮಲ, ಕಾಮಸಾನಪಲ್ಲಿ,
ಪೆದ್ದರೆಡ್ಡಿಪಲ್ಲಿ ಡೇರಿಗಳು ಡಿಲಿಗೇಟ್ ಆಯ್ಕೆ ಮಾಡಲು ಸಾಧ್ಯವಾಗಿಲ್ಲ.

ಶಿಡ್ಲಘಟ್ಟ ಕ್ಷೇತ್ರದ ತಿಮ್ಮನಾಯಕನಹಳ್ಳಿ, ಸೊಣ್ಣೇನಹಳ್ಳಿ ಹಾಲು ಉತ್ಪಾದಕರು ಸಂಘಗಳೂ ಡಿಲಿಗೇಟ್ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಒಂಟೂರಿನಲ್ಲಿ ವಿಶೇಷಾಧಿಕಾರಿ, ಚಿಕ್ಕತೇಕಹಳ್ಳಿ, ಟಿ.ಪೆದ್ದನಹಳ್ಳಿಯಲ್ಲಿ ಆಡಳಿತಾಧಿಕಾರಿ ಇದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.