
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆ ಗುರುವಾರ ನಡೆಯಲಿದೆ. ಶುಕ್ರವಾರ ನಾಮಪತ್ರಗಳ ವಾಪಸ್ ಪಡೆಯಲು ಅವಕಾಶವಿದೆ. ಒಟ್ಟು 13 ಸ್ಥಾನಗಳಿಗೆ 43 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.
ಚಿಮುಲ್ ಅಧಿಕಾರ ಹಿಡಿಯಲು ಸಮರ ಜೋರಾಗಿದೆ. ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು ಅಸ್ತಿತ್ವಕ್ಕೆ ಬಂದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಈ ಕಾರಣದಿಂದ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ ಶಾಸಕರು ಮತ್ತು ಸಂಸದರು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. ತಮ್ಮ ಅಭ್ಯರ್ಥಿಗಳ ಗೆಲುವಿಗೆ ತಂತ್ರ ರೂಪಿಸುತ್ತಿದ್ದಾರೆ.
ಈ ಹಿಂದಿನ ಅವಧಿಯಲ್ಲಿ ಕೋಚಿಮುಲ್ ನಿರ್ದೇಶಕರಾಗಿದ್ದವರು ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಚಿಮುಲ್ ಅಸ್ತಿತ್ವಕ್ಕೆ ಬಂದ ನಂತರ ಜಿಲ್ಲೆಯಲ್ಲಿ 13 ನಿರ್ದೇಶಕ ಸ್ಥಾನಗಳು ಅಸ್ತಿತ್ವಕ್ಕೆ ಬಂದಿವೆ. ಸಹಕಾರ ಕ್ಷೇತ್ರಗಳಲ್ಲಿ ತಮ್ಮದೇ ಆದ ಪ್ರಭಾವ ಮತ್ತು ಸಂಪರ್ಕ ಹೊಂದಿರುವ ಮುಖಂಡರು ಈ ಬಾರಿ ಕಣಕ್ಕೆ ಇಳಿಯಲು ಅವಕಾಶವಾಗಿದೆ.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳನ್ನು ಡಾ.ಕೆ.ಸುಧಾಕರ್ ಅಂತಿಮಗೊಳಿಸಿ ಕಣಕ್ಕೆ ಇಳಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಗೊಂದಲಗಳು ಎದ್ದು ಕಾಣುತ್ತಿವೆ. ಕಾಂಗ್ರೆಸ್‌ನ ಪ್ರಮುಖ ಮುಖಂಡರಾದ ಎನ್.ಸಿ.ವೆಂಕಟೇಶ್ ಮತ್ತು ಯಲುವಳ್ಳಿ ರಮೇಶ್ ಉಮೇದುವಾರಿಕೆ ಸಲ್ಲಿಸಿದ್ದಾರೆ. ರಮೇಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿದ್ದಾರೆ. ವೆಂಕಟೇಶ್ ಕೋಚಿಮುಲ್ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ.
ಈ ಇಬ್ಬರು ಕಣದಲ್ಲಿ ಉಳಿದರೆ ಚಿಕ್ಕಬಳ್ಳಾಪುರ ಕ್ಷೇತ್ರದ ಕಣದ ರಾಜಕೀಯ ಚಿತ್ರಣವೇ ಬೇರೆ ಆಗಲಿದೆ. ಶಾಸಕ ಪ್ರದೀಪ್ ಈಶ್ವರ್ ಬೆಂಬಲಿತರಾಗಿ ಯಲುವಳ್ಳಿ ರಮೇಶ್ ಮತ್ತು ಸಚಿವ ಡಾ.ಎಂ.ಸಿ.ಸುಧಾಕರ್ ಬೆಂಬಲಿತರಾಗಿ ಎನ್.ಸಿ.ವೆಂಕಟೇಶ್ ಕಣದಲ್ಲಿ ಉಳಿಯುವರು ಎನ್ನುವ ಮಾತುಗಳು ಕಾಂಗ್ರೆಸ್ ಪಾಳಯದಲ್ಲಿದೆ. ಶುಕ್ರವಾರ ನಾಮಪತ್ರ ವಾಪಸ್ ಪಡೆಯುವವರು ಯಾರು ಎನ್ನುವುದರ ಮೇಲೆ ಕಣದ ಚಿತ್ರಣ ಸ್ಪಷ್ಟವಾಗಲಿದೆ.
ಪೆರೇಸಂದ್ರದಿಂದ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಜಿಲ್ಲೆಯ ಹಿರಿಯ ಸಹಕಾರ ಧುರೀಣ ಎನಿಸಿದ್ದಾರೆ.
ಗೌರಿಬಿದನೂರಿನಲ್ಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಮತ್ತು ಮಾಜಿ ಸಚಿವ ಶಿವಶಂಕರ ರೆಡ್ಡಿ ಈಗಾಗಲೇ ತಮ್ಮ ಅಭ್ಯರ್ಥಿಗಳ ಉಮೇದುವಾರಿಕೆ ಸಲ್ಲಿಸಿ ತೊಡೆ ತಟ್ಟಿದ್ದಾರೆ. ಗುಡಿಬಂಡೆ, ಬಾಗೇಪಲ್ಲಿ ಕ್ಷೇತ್ರ ಅಭ್ಯರ್ಥಿಗಳನ್ನು ಸಂಸದ ಡಾ.ಕೆ.ಸುಧಾಕರ್ ಅಂತಿಮಗೊಳಿಸಿದ್ದಾರೆ.
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ನಿರ್ದೇಶಕ ಸ್ಥಾನಗಳಿವೆ. ಶಾಸಕ ಸುಬ್ಬಾರೆಡ್ಡಿ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿಗಳು ಮತ್ತು ಎನ್‌ಡಿಎ ಮೈತ್ರಿಕೂಟದ ನಡುವೆ ಇಲ್ಲಿ ಕದನ. ಸಂಸದ ಡಾ.ಕೆ.ಸುಧಾಕರ್ ಅವರು ಗುಡಿಬಂಡೆ, ಬಾಗೇಪಲ್ಲಿ ಕ್ಷೇತ್ರದ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಕಣಕ್ಕೆ ಇಳಿಸಿದ್ದಾರೆ.
ಶಿಡ್ಲಘಟ್ಟದಲ್ಲಿಯೂ ಶಾಸಕ ಬಿ.ಎನ್.ರವಿಕುಮಾರ್ ನೇತೃತ್ವದಲ್ಲಿ ಎನ್‌ಡಿಎ ಸಭೆ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಚಿಂತಾಮಣಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಮುಲ್ ಕ್ಷೇತ್ರಗಳಷ್ಟೇ ಅಲ್ಲ ಜಿಲ್ಲೆಯ ಉಳಿದ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಬೇಕಾಗುತ್ತದೆ.
ಸದ್ಯ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಚುನಾವಣೆ ಜಿಲ್ಲೆಯ ರಾಜಕೀಯ ರಂಗದಲ್ಲಿ ಕಾವೇರಿದೆ.
ರಮೇಶ್ ಮನವೊಲಿಕೆಗೆ ಕಸರತ್ತು ?
ಜಿಲ್ಲೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಸದ್ಯ ಚರ್ಚೆಯಲ್ಲಿ ಇರುವ ಕ್ಷೇತ್ರ ಚಿಕ್ಕಬಳ್ಳಾಪುರ (ನಂದಿ). ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ರಮೇಶ್ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ವಾಪಸ್ ಪಡೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮನವೊಲಿಕೆಗೆ ಪ್ರಯತ್ನಿಸುತ್ತಿದ್ದಾರೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.