ಚಿಕ್ಕಬಳ್ಳಾಪುರ: ‘ಇ’ ಖಾತೆ, ‘ಬಿ’ ಖಾತೆ ವಿಚಾರವಾಗಿ ಇಲ್ಲಿನ ನಗರಸಭೆ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯ ಬಗ್ಗೆ ನಾಗರಿಕರಿಂದ ವ್ಯಾಪಕವಾದ ಆರೋಪಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಗುರುವಾರ ನಗರಸಭೆಗೆ ದಿಢೀರ್ ಭೇಟಿ ನೀಡಿ, ಪರಿಶೀಲಿಸಿದರು.
ನಗರಸಭೆಯ ಗೊಂದಲಗಳ ಬಗ್ಗೆ ಅಸಮಾಧಾನ ಸಹ ವ್ಯಕ್ತಪಡಿಸಿದರು. ಜುಲೈ ಅಂತ್ಯದೊಳಗೆ ಎಲ್ಲ ಖಾತೆ ಅರ್ಜಿಗಳನ್ನು ಕಾನೂನು ರೀತಿ ವಿಲೇವಾರಿ ಮಾಡಲೇಬೇಕು ಎಂದು ಖಡಕ್ ಸೂಚನೆ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಸರ್ಕಾರದ ಆದೇಶದಂತೆ ಖಾತಾ ಆಂದೋಲನದಡಿ ನಗರಸಭೆಯಲ್ಲಿ ಒಟ್ಟು 2,120 ‘ಬಿ’ ಖಾತಾ ಮತ್ತು 7,697 ‘ಎ’ ಖಾತೆ ಸಿದ್ಧವಾಗಿವೆ. ಸಿದ್ಧವಾಗಿರುವ ಖಾತೆ ಏಕೆ ವಿತರಿಸುತ್ತಿಲ್ಲ. ಅರ್ಜಿ ಸ್ವೀಕಾರದ ವೇಳೆ ನೀಡಿರುವ ಹಿಂಬರದ ಚೀಟಿಗಳು ಎಲ್ಲೆಂದರಲ್ಲಿ ಬಿದ್ದಿವೆ ಎನ್ನುವ ದೂರುಗಳು ನಾಗರಿಕರಿಂದ ಬಂದಿವೆ ಎಂದರು.
ಅರ್ಜಿ ನೀಡಿದವರಿಗೆ ತಮ್ಮ ಅರ್ಜಿ ಎಲ್ಲಿದೆ ಎಂಬುದೇ ಗೊತ್ತಿಲ್ಲ ಎಂಬ ಗೊಂದಲ ಸೃಷ್ಟಿಯಾಗಿತ್ತು. ಹಾಗಾಗಿ ಭೇಟಿ ನೀಡಿ ಎಲ್ಲ ಅರ್ಜಿಗಳನ್ನು ವಾರ್ಡು ವಾರು ಜೋಡಿಸಲು ಸೂಚಿಸಲಾಗಿದೆ. ಈಗ ಯಾವುದೇ ಅರ್ಜಿ ಕೇಳಿದರೂ ವಾರ್ಡಿನ ಕಡತದಿಂದ ತರಲು ಸುಲಭವಾಗಿದೆ ಎಂದರು.
ರಾಜ್ಯ ಸರ್ಕಾರದಿಂದ ‘ಇ’ ಖಾತಾ ಆಂದೋಲನ ನಡೆಸಲಾಗುತ್ತಿದೆ. ಇ ಆಸ್ತಿ ತಂತ್ರಾಂಶದಲ್ಲಿ ‘ಎ’ ಮತ್ತು ‘ಬಿ’ ಖಾತೆ ಸೇರುತ್ತವೆ. ‘ಬಿ’ ಖಾತೆ ನೀಡಲು ಸರ್ಕಾರ ಸೂಚಿಸಿದೆ ಎಂದರು.
2025ರ ಫೆಬ್ರವರಿ 18ಕ್ಕೆ 6,923 ‘ಎ’ ಖಾತೆ, 1,218 ‘ಬಿ’ ಖಾತೆಯಾಗಿತ್ತು. ನಗರ ಸ್ಥಳೀಯ ಸಂಸ್ಥೆಗಳ ಸಭೆ ನಡೆಸಿ, ಖಾತೆ ಆಂದೋಲನಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಲಾಗುವುದು. ಈ ತಿಂಗಳಲ್ಲಿ ಖಾತೆ ಮುಗಿಸಲು ಗುರಿ ಹೊಂದಲಾಗಿದೆ ಎಂದರು.
ಅರ್ಜಿಗಳನ್ನು ಸಕಾಲದಲ್ಲಿ ಸ್ವೀಕರಿಸಬೇಕು ಎಂದು ಪೌರಾಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ಎಲ್ಲ ವಾರ್ಡಿಗೂ ಪ್ರತ್ಯೇಕ ರಿಜಿಸ್ಟಾರ್ ಬಳಸಿ ಅರ್ಜಿ ಸ್ವೀಕರಿಸಬೇಕು. ಮಾರ್ಚ್‌ನಲ್ಲಿ ಕೆಲ ನಾಗರಿಕರು ಎರಡು ಪಟ್ಟು ತೆರಿಗೆ ಪಾವತಿಸಿದ್ದಾರೆ. ಆದರೆ ಆರ್ಥಿಕ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈಗ ಮತ್ತೆ ಎರಡು ಪಟ್ಟು ತೆರಿಗೆ ಪಾವತಿಸಬೇಕಿದೆ. ಇದು ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಜುಲೈ ಅಂತ್ಯದೊಳಗೆ ಅರ್ಜಿಗಳನ್ನು ಪರಿಶೀಲಿಸಿ ದಾಖಲೆ ಸರಿಯಿದ್ದರೆ ಖಾತೆ ನೀಡಬೇಕು. ಇಲ್ಲವೇ ಹಿಂಬರಹ ನೀಡಲು ಸೂಚಿಸಲಾಗಿದೆ. ಎಲ್ಲ ಅರ್ಜಿಗಳು ಜುಲೈ ಅಂತ್ಯದೊಳಗೆ ವಿಲೇವಾರಿ ಆಗಲಿವೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಗಜೇಂದ್ರ, ಉಪಾಧ್ಯಕ್ಷ ಜೆ.ನಾಗರಾಜ್, ಪೌರಾಯುಕ್ತ ಮನ್ಸೂರ್ ಅಲಿ ಈ ವೇಳೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.