ADVERTISEMENT

‘ಕ್ರೀಡೆ; ಸೌಲಭ್ಯ, ಅಂಕಣಗಳ ಕೊರತೆ’

ಕ್ರೀಡಾ ಸಂಸ್ಥೆಗಳು, ತರಬೇತುದಾರರು, ಕ್ರೀಡಾಪಟುಗಳ ಜೊತೆ ಸಭೆ; ಜಿಲ್ಲಾಧಿಕಾರಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 5:20 IST
Last Updated 20 ಜನವರಿ 2026, 5:20 IST
ಚಿಕ್ಕಬಳ್ಳಾಪುರದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರೇತರ ಕ್ರೀಡಾ ಸಂಸ್ಥೆಗಳ ಮುಖ್ಯಸ್ಥರು, ತರಬೇತುದಾರರು, ಕ್ರೀಡಾಪಟುಗಳ ಜೊತೆ ಜಿಲ್ಲಾಧಿಕಾರಿ ಜಿ.ಪ್ರಭು ಸಭೆ ನಡೆಸಿದರು 
ಚಿಕ್ಕಬಳ್ಳಾಪುರದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರೇತರ ಕ್ರೀಡಾ ಸಂಸ್ಥೆಗಳ ಮುಖ್ಯಸ್ಥರು, ತರಬೇತುದಾರರು, ಕ್ರೀಡಾಪಟುಗಳ ಜೊತೆ ಜಿಲ್ಲಾಧಿಕಾರಿ ಜಿ.ಪ್ರಭು ಸಭೆ ನಡೆಸಿದರು     

ಚಿಕ್ಕಬಳ್ಳಾಪುರ: ಫುಟ್‌ಬಾಲ್, ಕೊಕ್ಕೊ ಸೇರಿದಂತೆ ಪ್ರಮುಖ ಕ್ರೀಡೆಗಳಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಅಂಕಣಗಳು ಇಲ್ಲದಿರುವುದು ಮತ್ತು ಮೂಲಸೌಕರ್ಯಗಳ ಕೊರತೆಯ ಬಗ್ಗೆ ಜಿಲ್ಲಾಧಿಕಾರಿ ಜಿ.ಪ್ರಭು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಸೋಮವಾರ ಸರ್ಕಾರೇತರ ಕ್ರೀಡಾ ಸಂಸ್ಥೆಗಳ ಮುಖ್ಯಸ್ಥರು, ತರಬೇತುದಾರರು, ಕ್ರೀಡಾಪಟುಗಳ ಜೊತೆ ಅವರು ಸಭೆ ನಡೆಸಿದರು. ಅಹವಾಲು ಹಾಗೂ ಸಲಹೆಗಳನ್ನು ಸ್ವೀಕರಿಸಿದರು.

ಜಿಲ್ಲಾ  ಕೇಂದ್ರದಲ್ಲಿ ವಾಲಿಬಾಲ್, ಬಾಸ್ಕೆಟ್ ಬಾಲ್, ಕಬಡ್ಡಿ, ಥ್ರೋಬಾಲ್ ಹಾಗೂ ಅಥ್ಲೆಟಿಕ್ಸ್‌ಗಳಿಗೆ ಅಗತ್ಯ ಮೂಲ ಸೌಕರ್ಯಗಳು ಇಲ್ಲ. ತಾಲ್ಲೂಕು ಕೇಂದ್ರಗಳಲ್ಲಿಯೂ ಕೊರತೆಯಲ್ಲಿರುವುದು ಗಮನಕ್ಕೆ ಬಂದಿದೆ ಎಂದರು.

ADVERTISEMENT

ಯಾವ ಕ್ರಮಗಳನ್ನು ಕೈಗೊಂಡರೆ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಬಹುದು. ಕ್ರೀಡಾ ಅಭಿಮಾನಿಗಳು, ಕ್ರೀಡಾಪಟುಗಳು, ಕ್ರೀಡಾ ತರಬೇತುದಾರರು ಹಾಗೂ ಸರ್ಕಾರೇತರ ಸಂಸ್ಥೆಗಳು ಈ ಬಗ್ಗೆ ಲಿಖಿತವಾಗಿ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಿಗೆ ಎರಡು ದಿನಗಳ ಒಳಗೆ ಮನವಿ ಸಲ್ಲಿಸಬೇಕು ಎಂದರು.

ಮನವಿಗಳು ಸಮರ್ಪಕವಾಗಿದ್ದಲ್ಲಿ ನೈಜ ಕ್ರೀಡೆಗಳಿಗೆ ಉತ್ತೇಜನ ನೀಡುವ ಕೆಲಸವನ್ನು ಜಿಲ್ಲಾಡಳಿತ ಪ್ರಾಮಾಣಿಕವಾಗಿ ಮಾಡಲಿದೆ. ಕ್ರೀಡಾ ಸಾಮಾಗ್ರಿಗಳನ್ನು ಖರೀದಿಸಲು, ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ಹಾಗೂ ಇನ್ನಿತರ ಕ್ರೀಡಾ ಚಟುವಟಿಕೆಗಳಿಗೆ ಅನುದಾನವನ್ನು ಒದಗಿಸಲು ಅವಕಾಶಗಳಿವೆ. ಆದ್ದರಿಂದ ನಿಮ್ಮ ಅಗತ್ಯಗಳು ಏನಿವೆ, ಎಷ್ಟು ಅನುದಾನ ಬೇಕು. ಕ್ರೀಡಾಂಗಣಗಳಿಗೆ ಜಾಗ ಎಷ್ಟು ಬೇಕು ಎಂಬುದರ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಲ್ಲಿ ಅದಕ್ಕೆ ಪೂರಕವಾಗಿ ಅಗತ್ಯ ಕ್ರಮ ವಹಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಅನುದಾನದ ಕೊರತೆ ಆದಲ್ಲಿ ಸಿ.ಎಸ್.ಆರ್ ನಿಧಿಯಿಂದ ಅನುದಾನವನ್ನು ತರಲು ಪ್ರಯತ್ನ ಮಾಡಬಹುದು. ಆದ್ದರಿಂದ ಕ್ರೀಡಾ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿರುವ ತಾವೆಲ್ಲರೂ ಈ ಕಾರ್ಯಕ್ಕೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು. ಈ ಮೂಲಕ ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಪೂರಕ ವಾತಾವರಣ ಸೃಷ್ಟಿಸೋಣ ಎಂದರು.

ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೆ ₹10 ಕೋಟಿ, ಚಿಂತಾಮಣಿ ಕ್ರೀಡಾಂಗಣ ಅಭಿವೃದ್ಧಿಗೆ ₹9.25 ಕೋಟಿ ಬಂದಿದೆ. ₹7 ಕೋಟಿಯಲ್ಲಿ ಚಿಂತಾಮಣಿಯಲ್ಲಿ ಕ್ರಿಕೆಟ್ ಅಂಕಣ ನಿರ್ಮಿಸಲು ಕ್ರಮವಹಿಸಲಾಗಿದೆ ಎಂದರು.

ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ವೇಳೆ ಯಾವ ಕ್ರೀಡೆಗಳನ್ನು ಆಡಲು ಅಗತ್ಯವಿರುವ ಎಲ್ಲಾ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.

ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ, ಸರ್ಕಾರೇತರ ಕ್ರೀಡಾ ಸಂಸ್ಥೆಗಳ ಮುಖ್ಯಸ್ಥರು, ತರಬೇತುದಾರರು, ಕ್ರೀಡಾಸಕ್ತರು, ಕ್ರೀಡಾಪಟುಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

‘ಅನಗತ್ಯ ವಿಳಂಬ ಸಹಿಸಲ್ಲ’

ಕ್ರೀಡಾ ಚಟುವಟಿಕೆಗಳ ಅಭಿವೃದ್ಧಿಗೆ ಯಾವುದೇ ಅನುದಾನ ಬಿಡುಗಡೆ ಆದರೂ ಸಮರ್ಪಕವಾಗಿ ವಿನಿಯೋಗ ಆಗಬೇಕು. ಅನಗತ್ಯ ವಿಳಂಬ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು. ಸರ್ಕಾರೇತರ ಕ್ರೀಡಾ ಸಂಸ್ಥೆಗಳ ಮನವಿಗಳು ಅಹವಾಲುಗಳು ಹಾಗೂ ಬೇಡಿಕೆಗಳನ್ನು ಸಂಗ್ರಹಿಸಿ ಪರಿಶೀಲಿಸಬೇಕು. ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಲು ಅಗತ್ಯವಿರುವ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕಡತಗಳನ್ನು ತ್ವರಿತವಾಗಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕು ಎಂದು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.