
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಭಾಗದ ಅಭಿವೃದ್ಧಿಗೆ ಕೊಡುಗೆ ನೀಡಿ ವಿಶಿಷ್ಟ ಪರಂಪರೆ ಕಟ್ಟಿಕೊಟ್ಟಿರುವ ಜಿಲ್ಲೆಯ ಹಿರಿಯರಿಗೆ ನಾವು ಋಣಿಗಳಾಗಿದ್ದೇವೆ ಎಂದು ದೇವರಾಜು ಅರಸು ವೈದ್ಯಕೀಯ ಶಿಕ್ಷಣ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಜಿ.ಎಚ್. ನಾಗರಾಜ್ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗುರುವಾರ ತಾಲ್ಲೂಕಿನ ಹಾರೋಬಂಡೆಯ ಸಾಯಿ ಮಂದಿರದಲ್ಲಿ ಆಯೋಜಿಸಿದ್ದ ಸಂಜೀವಮ್ಮ, ಹನುಮಂತೇಗೌಡರ ದತ್ತಿ, ಕೆ.ಬಿ ಪಿಳ್ಳಪ್ಪ ಸ್ಮಾರಕ ದತ್ತಿ, ಸಿ.ವಿ ವೆಂಕಟರಾಯಪ್ಪ, ಸಿ.ವಿ ಕಮಲಮ್ಮ ದತ್ತಿ ಮತ್ತು ಅಂಗಡಿ ನಾರಾಯಣಪ್ಪ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜಕೀಯ ಮತ್ತು ರೈತ ಹೋರಾಟಗಳನ್ನು ಕಟ್ಟಿ ಬೆಳೆಸಿದ ಕೆ.ಬಿ ಪಿಳ್ಳಪ್ಪ ಮತ್ತು ಸಿ.ವಿ ವೆಂಕಟರಾಯಪ್ಪ ಅವರು ಸಾಕ್ಷಿ ಪ್ರಜ್ಞೆಗಳಾಗಿದ್ದಾರೆ. ಅಂತಹ ಮಹನೀಯರ ದಾರಿಯಲ್ಲಿ ನಡೆಯಬೇಕು. ಜನಪರವಾಗಿ ಬಾಳುವುದನ್ನು ಸಮಕಾಲೀನ ನಾಯಕರು ಕಲಿಯಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯ ಮಹನೀಯರ ಹೆಸರಿನಲ್ಲಿ ದತ್ತಿ ಕಾರ್ಯಕ್ರಮಗಳ ಮೂಲಕ ಅವರ ಜೀವನ ಮತ್ತು ಕಾರ್ಯಗಳನ್ನು ಇಂದಿನ ಯುವಕರಿಗೆ ಪರಿಚಯಿಸುವ ಕಾರ್ಯವನ್ನು ಸಾಹಿತ್ಯ ಪರಿಷತ್ತಿನ ಸ್ನೇಹಿತರು ನಡೆಸುತ್ತಿರುವುದು ಅಭಿನಂದನೀಯ. ಮನುಷ್ಯನ ಜೀವನ ಕ್ಷಣಿಕ. ಅವರು ಮಾಡಿದ ಜನಪರ ಕಾರ್ಯಗಳು, ಬಿಟ್ಟು ಹೋದ ಮೌಲ್ಯಗಳನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಟೀಕೆ ಟಿಪ್ಪಣಿಗಳು ಸಹಜ, ಅವುಗಳಿಗೆ ತಲೆಕೆಡಿಸಿಕೊಳ್ಳದೆ ಕೆಲಸ ಮಾಡುವ ಮೂಲಕ ಟೀಕಾಕಾರರಿಗೆ ನಮ್ಮ ಕೆಲಸವನ್ನು ಪರಿಚಯಿಸೋಣ. ಜಿಲ್ಲೆಗೆ ಹೋರಾಟದ ಪರಂಪರೆ ಇದೆ. ಭಾರತರತ್ನ ಗೌರವ ಪಡೆದವರು, ಅನುಭಾವಿಗಳು, ಕೃಷಿ ತಜ್ಞರು, ಹೋರಾಟಗಾರರು ಮತ್ತು ಶ್ರಮಜೀವಿಗಳು ಬಾಳಿ ಬೆಳಗಿದ್ದಾರೆ ಎಂದು ಹೇಳಿದರು.
ಕೆ.ಬಿ ಪಿಳ್ಳಪ್ಪ ಮತ್ತು ಸಿ.ವಿ ವೆಂಕಟರಾಯಪ್ಪ ಅವರು ನಮ್ಮಂತಹ ನೂರಾರು ಜನರನ್ನು ಜನಪರ ಹೋರಾಟಗಳಲ್ಲಿ ತೊಡಗಿಸಿದ ಪರಿಣಾಮ ಇಂದು ನಮಗೆ ಒಂದು ಸ್ಥಾನಮಾನ, ಜವಾಬ್ದಾರಿ ಹಾಗೂ ಗೌರವ ಲಭಿಸಿದೆ ಎಂದು ಸ್ಮರಿಸಿದರು.
ಮಾಜಿ ಶಾಸಕ ಕೆ.ಪಿ ಬಚ್ಚೇಗೌಡ ಮಾತನಾಡಿ, ನಮ್ಮ ತಂದೆಯವರು ರೈತ ಪರವಾಗಿದ್ದರು ಜನಪರವಾಗಿದ್ದರು. ಈ ಭಾಗದಲ್ಲಿ ಶಿಕ್ಷಣ ಕೇಂದ್ರಗಳನ್ನು ಮಾಡುವವರಿಗೆ ವಿಶೇಷ ನೆರವು ನೀಡಿದರು. ಮುದ್ದೇನಹಳ್ಳಿಯ ಸಾಯಿಬಾಬಾ ವಸತಿ ಶಾಲೆಯನ್ನು ನಿರ್ಮಿಸುವ ಹಂತದಲ್ಲಿ ತಂದೆಯವರು ಅವರಿಗೆ ಅಗತ್ಯ ಜಮೀನು, ನೀರು ಮತ್ತು ನೈತಿಕ ಸಹಕಾರ ನೀಡಿದ್ದಾರೆ. ಆ ಸಂಸ್ಥೆ ಇಂದು ಜಾಗತಿಕವಾಗಿ ಗುರುತಿಸಿಕೊಂಡಿರುವುದು ನನಗೆ ಆನಂದ ತಂದಿದೆ ಎಂದರು.
ರಾಜಕೀಯದಲ್ಲೂ ತನಗಿಂತ ಚಿಕ್ಕವರಿಗೆ ನಿರಂತರ ಶಿಸ್ತಿನ ಪಾಠ ಮಾಡುತ್ತಿದ್ದರು. ಅವರ ಆಶೀರ್ವಾದವೇ ನಮ್ಮನ್ನು ಇಲ್ಲಿವರೆಗೆ ಬೆಳೆಸಿದೆ. ಅವರ ಶಿಸ್ತು ಮತ್ತು ಹೋರಾಟಗಳನ್ನು ನಾವು ಗೌರವಿಸಿದ್ದೇವೆ. ಶಕ್ತಿಮೀರಿ ಪ್ರಾಮಾಣಿಕತೆ ಉಳಿಸಿಕೊಂಡಿದ್ದೇವೆ. ಇಂದು ರಾಜಕೀಯ ತುಂಬಾ ಕಲ್ಮಶವಾಗಿದೆ. ಸ್ವಾರ್ಥಪರ, ಅಧಿಕಾರ, ಹಣ ಇವುಗಳು ರಾಜಕೀಯವನ್ನು ದಿಕ್ಕು ತಪ್ಪಿಸುತ್ತಿವೆ ಎಂದರು.
ಪುಸ್ತಕ ಪ್ರೀತಿ ಮತ್ತು ಅಧ್ಯಯನ ಸಂಸ್ಕೃತಿ ಎಂಬ ವಿಷಯದ ಬಗ್ಗೆ ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನ ಎಂ ಶಂಕರ್ ಹಾಗೂ ಸಮಾಜ ಪರಿವರ್ತನೆಯಲ್ಲಿ ನಾರಾಯಣ ಗುರು ಅವರ ಕೊಡುಗೆ ವಿಷಯದ ಬಗ್ಗೆ ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ. ಕೋಡಿ ರಂಗಪ್ಪ ಉಪನ್ಯಾಸ ನೀಡಿದರು.
ಜಿಲ್ಲಾ ಕಾರ್ಯದರ್ಶಿ ಎಸ್.ಎನ್ ಅಮೃತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಡಾ. ಕೆ ಬಿ ಶ್ರೀನಿವಾಸ ಮೂರ್ತಿ, ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಜಿ.ಪಿ. ಬಾಹುಬಲಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೈ.ಎಲ್ ಹನುಮಂತ ರಾವ್, ಸಾಹಿತಿ ಗೋಪಾಲಗೌಡ ಕಲ್ವಮಂಜಲಿ, ಜಿಲ್ಲಾ ಕಸಾಪದ ಚನ್ನಮಲ್ಲಿಕಾರ್ಜುನಯ್ಯ, ಟಿ ನಾರಾಯಣಸ್ವಾಮಿ, ಸರ್ದಾರ್ ಚಾಂದ್ ಪಾಷ, ಪ್ರೇಮ ಲೀಲಾ ವೆಂಕಟೇಶ್, ಮಂಚನಬಲೆ ಶ್ರೀನಿವಾಸ್, ಟಿ.ವಿ ಚಂದ್ರಶೇಖರ್, ಮುನಿನಾರಾಯಣಪ್ಪ, ಕೆ.ಎಂ ರೆಡ್ಡಪ್ಪ, ಅಣ್ಣಮ್ಮ ಮತ್ತಿತರರು ಪಾಲ್ಗೊಂಡಿದ್ದರು.
ನಗರ ನಿರ್ಮಾಣದ ರೂವಾರಿ
ಸಿ.ವಿ ವೆಂಕಟರಾಯಪ್ಪ ಮತ್ತು ಕಮಲಮ್ಮ ದತ್ತಿ ದಾನಿ ನಿರ್ಮಲ ಪ್ರಭು ಮಾತನಾಡಿ ಸಿ.ವಿ ವೆಂಕಟರಾಯಪ್ಪ ಹಾಗೂ ಕೆ.ಬಿ ಪಿಳ್ಳಪ್ಪ ಅವರು ಚಿಕ್ಕಬಳ್ಳಾಪುರ ಜಿಲ್ಲೆಗೆ ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ. ಸಿವಿವಿ ಅಂತಹ ತಂದೆ ನವೀನ್ ಕಿರಣ್ ಅಂತಹ ಮಗನನ್ನು ಪಡೆದಿರುವ ಸಾರ್ಥಕತೆ ನನ್ನಲ್ಲಿದೆ ಎಂದರು. ಚಿಕ್ಕಂದಿನಿಂದಲೇ ತಂದೆಯವರಿಂದ ಶಿಸ್ತು ಸಮಯಪಾಲನೆ ದೂರದೃಷ್ಟಿ ತೀಕ್ಷ್ಣ ತಿಳಿವಳಿಕೆಯನ್ನು ಬೆಳೆಸಿಕೊಂಡೆ. ಅಂತಹ ತಂದೆ ಸಿಗದಿದ್ದರೆ ನಾನು ಯಾವ ಸಾಧನೆ ಮಾಡಲಾಗುತ್ತಿರಲಿಲ್ಲ. ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ನಗರಸಭೆಯ ಅಧ್ಯಕ್ಷರಾಗಿ ನಗರ ನಿರ್ಮಾಣ ಶಿಕ್ಷಣ ಹಾಗೂ ಜನಪರ ಸೌಲಭ್ಯಗಳನ್ನು ಉತ್ತಮವಾಗಿ ರೂಪಿಸಿದ್ದಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.