ADVERTISEMENT

ಚಿಕ್ಕಬಳ್ಳಾಪುರ: ಗಗನ ಕುಸುಮವಾದ ಜಿಲ್ಲಾ ಗ್ಯಾಸೆಟಿಯರ್ ರಚನೆ!

ಡಿ.ಎಂ.ಕುರ್ಕೆ ಪ್ರಶಾಂತ
Published 27 ಅಕ್ಟೋಬರ್ 2025, 6:55 IST
Last Updated 27 ಅಕ್ಟೋಬರ್ 2025, 6:55 IST
<div class="paragraphs"><p>ಚಿಕ್ಕಬಳ್ಳಾಪುರದಲ್ಲಿ&nbsp;ಗ್ಯಾಸೆಟಿಯರ್ ರಚನೆಗೆ ಸಂಬಂಧಿಸಿದಂತೆ 2021ರ ಫೆಬ್ರುವರಿಯಲ್ಲಿ ನಡೆದಿದ್ದ ಕಾರ್ಯಾಗಾರ (ಸಂಗ್ರಹ ಚಿತ್ರ)</p></div>

ಚಿಕ್ಕಬಳ್ಳಾಪುರದಲ್ಲಿ ಗ್ಯಾಸೆಟಿಯರ್ ರಚನೆಗೆ ಸಂಬಂಧಿಸಿದಂತೆ 2021ರ ಫೆಬ್ರುವರಿಯಲ್ಲಿ ನಡೆದಿದ್ದ ಕಾರ್ಯಾಗಾರ (ಸಂಗ್ರಹ ಚಿತ್ರ)

   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಗ್ಯಾಸೆಟಿಯರ್ ರಚನೆಯ ಪ್ರಕ್ರಿಯೆಗಳಿಗೆ ಚಾಲನೆ ದೊರೆತು ನಾಲ್ಕೂ ಮುಕ್ಕಾಲು ವರ್ಷಗಳಾಗಿವೆ. ಇನ್ನೇನು ಅರ್ಧ ದಶಕ ಸಮೀಪಿಸುತ್ತಿದೆ. ಆದರೂ ಪ್ರಕ್ರಿಯೆಗಳು ಆಮೆಗತಿಯಲ್ಲಿವೆ!

ಅವಿಭಜಿತ ಕೋಲಾರ ಜಿಲ್ಲೆಯಿಂದ ಬೇರ್ಪಟ್ಟು ಚಿಕ್ಕಬಳ್ಳಾಪುರವು ಜಿಲ್ಲೆಯಾಗಿ ಅಸ್ತಿತ್ವ ಪಡೆದು 18 ವರ್ಷಗಳು ಕಳೆದಿವೆ. ಆದರೆ ಈವರೆಗೂ ಜಿಲ್ಲೆಗೆ ಪ್ರತ್ಯೇಕ ಗ್ಯಾಸೆಟಿಯರ್ ಹೊಂದುವ ‘ಭಾಗ್ಯ’ ಚಿಕ್ಕಬಳ್ಳಾಪುರಕ್ಕೆ ದೊರೆತಿಲ್ಲ.

ADVERTISEMENT

2021ರ ಫೆಬ್ರುವರಿಯಲ್ಲಿ ಜಿಲ್ಲಾ ಗ್ಯಾಸೆಟಿಯರ್ ರಚನೆಗೆ ಚಾಲನೆ ದೊರೆತಿತ್ತು. ಹೀಗೆ ಚಾಲನೆ ದೊರೆತು ನಾಲ್ಕೂ ಮುಕ್ಕಾಲು ವರ್ಷ ದಾಟಿದರೂ ಪ್ರಕ್ರಿಯೆಗಳು ಪ್ರಗತಿ ಕಂಡಿಲ್ಲ. ಆರಂಭದಲ್ಲಿ ಹೇಗಿತ್ತೊ ಅದೇ ಸ್ಥಿತಿಯಲ್ಲಿದೆ. 

ಬೆಂಗಳೂರಿನ ಕಾವೇರಿ ಭವನದಲ್ಲಿ ಒಂದು ಸಭೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗ್ಯಾಸೆಟಿಯರ್ ಸಂಬಂಧಿಸಿದಂತೆ ಕಾರ್ಯಾಗಾರ ನಡೆದಿತ್ತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷರೂ ಆದ ಶಿಕ್ಷಣ ತಜ್ಞ ಕೋಡಿ ರಂಗಪ್ಪ, ಲೇಖಕ ರಂಗಾರೆಡ್ಡಿ ಕೋಡಿರಾಂಪುರ, ಚಿಂತಾಮಣಿ ಸರ್ಕಾರಿ ಮಹಿಳಾ ಪದವಿ ಮತ್ತು ಸ್ನಾತಕೋತ್ತರ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯ ಎಂ.ಎನ್.ರಘು ಹೀಗೆ ವಿವಿಧ ಕ್ಷೇತ್ರಗಳ ವಿಷಯ ಪರಿಣತರಿಗೆ ರಚನೆಯ ಜವಾಬ್ದಾರಿ ವಹಿಸಲಾಗಿತ್ತು. 

ಈ ಕಾರ್ಯಕ್ಕಾಗಿ ಇಲಾಖೆಯು 20 ಲೇಖಕರನ್ನು ನಿಯೋಜಿಸಿತ್ತು. ಈ ಲೇಖಕರಿಗಾಗಿಯೇ ಇಲಾಖೆಯು 2021ರ ಫೆಬ್ರುವರಿಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕಾರ್ಯಾಗಾರ ನಡೆಸಿತ್ತು.  

ಜಿಲ್ಲಾ ಗ್ಯಾಸೆಟಿಯರ್ ಒಟ್ಟು 17 ಅಧ್ಯಾಯಗಳನ್ನು ಒಳಗೊಂಡಿರುತ್ತದೆ. ಇದು ಎರಡು-ಮೂರು ಶತಮಾನಗಳಿಗೂ ಹೆಚ್ಚು ಕಾಲ ದಾಖಲೆಯಾಗಿ ಇರಲಿದೆ. ಹಾಗಾಗಿ ಜಿಲ್ಲೆಯ ಇಲಾಖೆಗಳ ಅಧಿಕಾರಿಗಳು ಸಕಾಲಕ್ಕೆ ನಮಗೆ ಪೂರಕ ಮಾಹಿತಿಯನ್ನು ಒದಗಿಸಿದಲ್ಲಿ ಶೀಘ್ರದಲ್ಲೇ ಜಿಲ್ಲಾ ಗ್ಯಾಸೆಟಿಯರ್ ಪೂರ್ಣಗೊಳ್ಳಲಿದೆ ಎಂದು ಕಾರ್ಯಾಗಾರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದ್ದರು.

ಕೊರೊನಾ ಲೇಖಕರ ಕ್ಷೇತ್ರ ಅಧ್ಯಯನಕ್ಕೆ ತಡೆ ನೀಡಿತು. ಮಾಹಿತಿಗಳನ್ನು ಕಲೆಹಾಕುವುದೂ ಕಷ್ಟವಾಯಿತು. ವಿಚಾರಗಳನ್ನು ದಾಖಲಿಸಲು ಕ್ಷೇತ್ರ ಅಧ್ಯಯನ ಪ್ರಮುಖವಾಗುತ್ತದೆ. ಆಯಾ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಬೇಕಾಗುತ್ತದೆ. ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಸಂಗ್ರಹಿಸಬೇಕಾಗುತ್ತದೆ. ಆದರೆ ಈ ಎಲ್ಲ ಅಧ್ಯಯನಗಳಿಗೂ ಲಾಕ್‌ಡೌನ್ ಮತ್ತು ಕೊರೊನಾ ತಡೆ ನೀಡಿತು. ಈ ಕಾರಣದಿಂದ ರಚನೆಗೆ ತಾತ್ಕಾಲಿಕ ಗ್ರಹಣ ತಗುಲಿತು. ಆದರೆ ಕೊರೊನಾ ಸದ್ದು ಅಡಗಿ ಎರಡು ವರ್ಷವಾಗಿದೆ. ಗ್ಯಾಸೆಟಿಯರ್ ರಚನೆ ಪ್ರಕ್ರಿಯೆಗಳು ಮಾತ್ರ ಇದ್ದಲ್ಲಿಯೇ ಇವೆ.

ಗ್ಯಾಸೆಟಿಯರ್ ಇಲಾಖೆಯು ಈ ಪ್ರಕ್ರಿಯೆಗಳಿಗೆ ವೇಗ ನೀಡದಿರುವುದೇ ಆಮೆಗತಿಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಜಿಲ್ಲೆಯ ಸಮಗ್ರ ದರ್ಶನ ಒದಗಿಸಲು ಸಹಕಾರಿಯಾಗುವ ಗ್ಯಾಸೆಟಿಯರ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳು ಮತ್ತು ಸಾರ್ವಜನಿಕರಿಗೆ ಉಪಯುಕ್ತ ಆಕರವಾಗುತ್ತದೆ. ಜತೆಗೆ ಜಿಲ್ಲೆಯ ಆಡಳಿತಕ್ಕೆ ಹೊಸದಾಗಿ ನೇಮಕವಾಗುವ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧಿಕಾರಿ, ತಹಶೀಲ್ದಾರ್‌ ಸೇರಿದಂತೆ ಇತರ ಅಧಿಕಾರಿಗಳಿಗೆ ತಾವು ಆಡಳಿತ ನಡೆಸುವ ಭೂಭಾಗದ ಪೂರ್ಣ ಅರಿವು ಮತ್ತು ಪರಿಚಯ ಹಾಗೂ ಅಲ್ಲಿನ ಸ್ಥಿತಿಗತಿಗಳ ಸಮಸ್ಯೆಗಳ ಪರಿಚಯಿಸುವ ಕೈಪಿಡಿ ಆಗಿರುತ್ತದೆ.

ಆದರೆ, ಇಂದಿಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಮಾಹಿತಿ ಬೇಕಾದರೆ ಅಧಿಕಾರಿಗಳು ಕೋಲಾರದ ಗ್ಯಾಸೆಟಿಯರ್ ಮೊರೆ ಹೋಗಬೇಕಾಗಿದೆ. 1968ರಲ್ಲಿ ಕೋಲಾರ ಗ್ಯಾಸೆಟಿಯರ್ ಆಂಗ್ಲ ಆವೃತ್ತಿ ಮೊದಲ ಬಾರಿಗೆ ಬಿಡುಗಡೆಯಾಗಿತ್ತು. 2012 ರ ಮಾರ್ಚ್‌ನಲ್ಲಿ ಅದರದೇ ಪರಿಷ್ಕೃತ ಆವೃತ್ತಿ ಬಿಡುಗಡೆಯಾಗಿತ್ತು. 2005ರಲ್ಲಿ ಕೋಲಾರ ಗ್ಯಾಸೆಟಿಯರ್ ಕನ್ನಡ ಆವೃತ್ತಿ ಪ್ರಕಟವಾಗಿತ್ತು.

ಬ್ರಿಟಿಷರ ಕಾಲದಲ್ಲಿದ್ದ ಗ್ಯಾಸೆಟಿಯರ್ ಪ್ರಕಟಿಸುವ ಪರಿಪಾಠ ಸ್ವಾತಂತ್ರ್ಯ ಬಂದ ಬಳಿಕವೂ ಮುಂದುವರೆಯಿತು. ಅದಕ್ಕಾಗಿಯೇ ರಾಜ್ಯದಲ್ಲಿ 1958ರಲ್ಲಿ ರಾಜ್ಯ ಗ್ಯಾಸೆಟಿಯರ್ ಇಲಾಖೆ ಅಸ್ತಿತ್ವಕ್ಕೆ ಬಂತು. 

ಗ್ಯಾಸೆಟಿಯರ್ ಅನುಕೂಲ: ಆ ಜಿಲ್ಲೆಗೆ ಸಂಬಂಧಿಸಿದ ವಿವಿಧ ಕ್ಷೇತ್ರಗಳ ಸಮಗ್ರ ಚಿತ್ರಣ ಇರುತ್ತದೆ. ಇತಿಹಾಸ, ಜನ, ಜೀವನ, ಭಾಷೆಗಳು, ಕೃಷಿ ಮತ್ತು ನೀರಾವರಿ, ಅರಣ್ಯ, ಕೈಗಾರಿಕೆಗಳು, ಬ್ಯಾಂಕಿಂಗ್, ವಾಣಿಜ್ಯ, ಸಾರಿಗೆ, ಸಂಪರ್ಕ, ಆರ್ಥಿಕ ಪ್ರವೃತ್ತಿಗಳು, ಸಾಮಾನ್ಯ ಆಡಳಿತ, ಶಿಕ್ಷಣ ಮತ್ತು ಸಂಸ್ಕೃತಿ, ವೈದ್ಯ, ಸಾರ್ವಜನಿಕ ಆರೋಗ್ಯ, ಐತಿಹಾಸಿಕ, ರಾಜಕಾರಣ ಹಾಗೂ ಪ್ರೇಕ್ಷಣೀಯ ಸ್ಥಳಗಳು, ವ್ಯಾಪಾರ ಕೇಂದ್ರಗಳ ಮಾಹಿತಿ ಸೇರಿದಂತೆ ಹತ್ತು ಹಲವು ವಿವರಗಳು ದಾಖಲಾಗುತ್ತವೆ.

ಗ್ಯಾಸೆಟಿಯರ್ ವ್ಯಕ್ತಿಗಳ ಕುರಿತ ಮಾಹಿತಿ, ಭೌಗೋಳಿಕ ನಿಘಂಟು, ಪ್ರಾಂತ್ಯದ ಜನಜೀವನ ಸೇರಿದಂತೆ ಹಲವು ಆಯಾಮಗಳ ವಾಸ್ತವ ಜ್ಞಾನದ ಸಮೃದ್ಧ ಭಂಡಾರವಾಗಿದೆ. ಇದನ್ನು ‘ಪ್ರಾದೇಶಿಕ ವಿಶ್ವಕೋಶ’ ಎಂದೂ ಕರೆಯುವರು. 

ಜಿಲ್ಲೆಯ ಸಮಗ್ರ ದರ್ಶನ ಒದಗಿಸಲು ಸಹಕಾರಿಯಾಗುವ ಗ್ಯಾಸೆಟಿಯರ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯರ್ಥಿಗಳು ಮತ್ತು ಸಾರ್ವಜನಿಕರಿಗೆ ಉಪಯುಕ್ತ ಆಕರವಾಗುತ್ತದೆ. ಅಧಿಕಾರಿಗಳು ಜಿಲ್ಲೆಯ ಭೌಗೋಳಿಕ ಅರಿವು, ಸ್ಥಿತಿಗತಿಯ ಮಾಹಿತಿ ದೊರೆಯಲಿದೆ. ಇಷ್ಟೆಲ್ಲ ಮಹತ್ವದ ಆಕರವಾಗುವ ಗ್ಯಾಸೆಟಿಯರ್ ರಚನೆ ಜಿಲ್ಲೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಗಮನವಹಿಸಿ ಪ್ರಕ್ರಿಯೆಗೆ ವೇಗ ನೀಡಬೇಕು ಎನ್ನುವುದು ಪ್ರಜ್ಞಾವಂತರ ಒತ್ತಾಯ. 

‘ಚಾಲನೆಯಲ್ಲಿ ಪ್ರಕ್ರಿಯೆ’

‘ಗ್ಯಾಸೆಟಿಯರ್ ರಚನೆಯಿಂದ ಜಿಲ್ಲೆಯ ಸಮಗ್ರ ಮಾಹಿತಿ ದೊರೆಯುತ್ತದೆ. ಇಲಾಖೆಯ ನೇತೃತ್ವದಲ್ಲಿ ಈ ಪ್ರಕ್ರಿಯೆಗಳು ನಡೆಯುತ್ತಿದೆ. ಆದಷ್ಟು ಬೇಗ ಗ್ಯಾಸೆಟಿಯರ್ ರಚನೆಯಾಗಬೇಕು ಎನ್ನುವುದು ನಮ್ಮ ಮನವಿ ಎನ್ನುತ್ತಾರೆ ಪ್ರೊ.ಕೋಡಿ ರಂಗಪ್ಪ.