ADVERTISEMENT

ಭಾರಿ ಮಳೆಗೆ ತತ್ತರಿಸಿದ ಚಿಕ್ಕಬಳ್ಳಾಪುರ

ತುಂಬಿದ ಕೆರೆಗಳು, ಜಲಾಶಯಗಳು; ಮಳೆಗೆ ಮುಳುಗಿದ ತೋಟಗಳು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 5:25 IST
Last Updated 20 ಸೆಪ್ಟೆಂಬರ್ 2025, 5:25 IST
ಮಳೆ ನೀರಿನಲ್ಲಿ ಸಿಲುಕಿದ ಕಾರು
ಮಳೆ ನೀರಿನಲ್ಲಿ ಸಿಲುಕಿದ ಕಾರು   

ಚಿಕ್ಕಬಳ್ಳಾಪುರ: ಗುರುವಾರ ರಾತ್ರಿ ಸುರಿದ ಮಳೆಗೆ ಜಿಲ್ಲೆಯ ಜನಜೀವನ ತತ್ತರಿಸಿದೆ. ವಿಶೇಷವಾಗಿ ಚಿಕ್ಕಬಳ್ಳಾಪುರದ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚಾರ ವ್ಯತ್ಯಯವಾಯಿತು. ಅಲ್ಲದೆ ತೋಟಗಳು, ರಸ್ತೆಗಳು ಮುಳುಗಡೆಯಾಗಿವೆ.

ಗುರುವಾರ ರಾತ್ರಿ 11ರ ಸುಮಾರಿಗೆ ಆರಂಭವಾದ ಮಳೆ ಶುಕ್ರವಾರ ಬೆಳಗಿನ ಜಾವದವರೆಗೂ ಸುರಿಯಿತು. ಮುಸ್ಟೂರು ಕೆರೆ ಕೋಡಿ ಬಿದ್ದ ಪರಿಣಾಮ ಆ ನೀರು ನಗರದ ಕೆಲವು ಪ್ರದೇಶಗಳ ಕಡೆಗೆ ಹರಿಯಿತು.

ವಿಶೇಷವಾಗಿ ವಾಪಸಂದ್ರ ಭಾಗದಲ್ಲಿ ರಸ್ತೆಗಳು, ದೊಡ್ಡ ಮೋರಿಗಳೇ ಮಳೆಯಿಂದ ಮುಚ್ಚಿ ಹೋಗಿವೆ. ನಗರಸಭೆ ಸಿಬ್ಬಂದಿ ಇಲ್ಲಿನ ರಸ್ತೆಗಳಲ್ಲಿ ಮೋಟರ್ ಇಟ್ಟು ನೀರನ್ನು ರಸ್ತೆಯಿಂದ ಹೊರ ಹಾಕಿದರು. ಜೆಸಿಬಿ ಮೂಲಕ ನೀರು ತೆರವುಗೊಳಿಸಿದರು.

ADVERTISEMENT

ಈ ಹಿಂದಿನಿಂದಲೂ ಜೋರು ಮಳೆ ಬಂದರೆ ವಾಪಸಂದ್ರದ ಕೆಳಸೇತುವೆ ಮಳೆಯಿಂದ ಮುಳುಗುತ್ತದೆ. ಒಂದೇ ರಾತ್ರಿ ಸುರಿದ ಮಳೆಗೆ ಇಡೀ ಕೆಳಸೇತುವೆ ಜಲಾವೃತವಾಯಿತು. ಕಾರು, ಓಮ್ನಿ, ಬೈಕ್‌ಗಳು ಈ ನೀರಿನಲ್ಲಿ ಸಿಲುಕಿದವು. ಕಾರುಗಳ ತಳ್ಳಾಟ, ಬೈಕ್‌ಗಳ ನೂಕಾಟ ಸಾಮಾನ್ಯವಾಗಿತ್ತು. ಇಲ್ಲಿನ ಅವ್ಯವಸ್ಥೆಗೆ ಜನರು ಆಡಳಿತಕ್ಕೆ ಶಪಿಸುತ್ತಲೇ ಸಾಗಿದರು. 

ಕೆಳಸೇತುವೆ ಸುತ್ತಮುತ್ತಲಿನ ದ್ರಾಕ್ಷಿ, ಹೂ ಮತ್ತಿತರ ತೋಟಗಳಿಗೆ ಅಪಾರವಾಗಿ ನೀರು ನುಗ್ಗಿತ್ತು. ಇಡೀ ತೋಟಗಳೇ ನೀರಿನಿಂದ ಮುಳಗಿದ್ದವು. ವಾಪಸಂದ್ರದಲ್ಲಿರುವ ರೈತ ಕಿರಣ್ ಅವರ ಮೂರು ಎಕರೆ ದ್ರಾಕ್ಷಿ ತೋಟ ಸಂಪೂರ್ಣ ನೀರಿನಲ್ಲಿ ಮುಳುಗಿದೆ.

ಚಿಕ್ಕಬಳ್ಳಾಪುರದ ಬಿಬಿ ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ನಿಂತಿತ್ತು. 24ನೇ ವಾರ್ಡ್ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. 

ತಾಲ್ಲೂಕಿನ ಗ್ರಾಮೀಣ ಭಾಗಗಳ ತೋಟಗಳಿಗೆ ನೀರು ನುಗ್ಗಿ ಬೆಳೆಗಳು ಹಾನಿಯಾಗಿವೆ. 

ವಾಪಸಂದ್ರ ಕೆಳಸೇತುವೆ ಮುಳುಗಡೆ ಆಗಿರುವುದು
ನಗರಸಭೆ ಸಿಬ್ಬಂದಿ  ಮಳೆ ನೀರು ಹರಿಯುವಂತೆ ಮಾಡುತ್ತಿರುವುದು
ಮಳೆ ನೀರಿನಲ್ಲಿ ಸಿಲುಕಿದ ಬೈಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.