ADVERTISEMENT

ಚಿಕ್ಕಬಳ್ಳಾಪುರ: ಸಂದೀಪ್ ರೆಡ್ಡಿಗೆ ಕಾಂಗ್ರೆಸ್ ಗಾಳ?

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ರಾಜಕೀಯ ವಲಯದಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 18 ಮೇ 2025, 14:22 IST
Last Updated 18 ಮೇ 2025, 14:22 IST
ಸಂದೀಪ್ ರೆಡ್ಡಿ
ಸಂದೀಪ್ ರೆಡ್ಡಿ   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂದೀಪ್‌ ರೆಡ್ಡಿ ಅವರ ಆಯ್ಕೆಯನ್ನು ವರಿಷ್ಠರು ತಡೆ ಹಿಡಿದಿದ್ದಾರೆ. ಇಂದಿಗೂ ಬಿಜೆಪಿ ಜಿಲ್ಲಾ ಅಧ್ಯಕ್ಷರ ಆಯ್ಕೆ ವಿಚಾರವು ಕಗ್ಗಂಟಾಗಿದೆ.

ಈ ನಡುವೆಯೇ ಬಿಜೆಪಿಯ ಈ ಯುವ ಮುಖಂಡ ಕಾಂಗ್ರೆಸ್ ಸೇರುತ್ತಾರೆಯೇ ಎನ್ನುವ ಚರ್ಚೆಗಳು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಆರಂಭವಾಗಿವೆ. ವಿಶೇಷವಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಪ್ರದೀಪ್ ಈಶ್ವರ್ ವಿರುದ್ಧದ ಗುಂಪಿನಲ್ಲಿರುವ ಕೆಲವು ಮುಖಂಡರು ಸಂದೀಪ್ ರೆಡ್ಡಿ ಅವರನ್ನು ಕಾಂಗ್ರೆಸ್‌ಗೆ ಕರೆ ತರುವ ಬಗ್ಗೆ ಉತ್ಸಾಹದಲ್ಲಿ ಇದ್ದಾರೆ ಎನ್ನುತ್ತವೆ ಕಾಂಗ್ರೆಸ್ ಪಕ್ಷದ ಮೂಲಗಳು.

ಈ ಹಿಂದೆ ಸಂದೀಪ್ ರೆಡ್ಡಿ ಅವರ ತಾಯಿ ಕಾಂಗ್ರೆಸ್‌ನಿಂದ ಮಂಡಿಕಲ್ಲು ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಸಂದೀಪ್ ರೆಡ್ಡಿ ಅವರ ಕುಟುಂಬದ ರಾಜಕೀಯ ಆರಂಭವಾಗಿದ್ದು ಸಹ ಕಾಂಗ್ರೆಸ್ ಮೂಲದಿಂದಲೇ. 

ADVERTISEMENT

ಸಂದೀಪ್ ರೆಡ್ಡಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ. ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅವರು ಕಣಕ್ಕೆ ಇಳಿಯಲಿದ್ದಾರೆ ಎನ್ನುವ ಮಾತುಗಳು ಈಗಲೇ ಕೇಳಿ ಬರುತ್ತಿವೆ. 

ಜ.29ರಂದು ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಸಂದೀಪ್ ರೆಡ್ಡಿ ಅವರನ್ನು ಪಕ್ಷವು ನೇಮಿಸಿತ್ತು. ಡಾ.ಕೆ.ಸುಧಾಕರ್, ಸಂದೀಪ್ ರೆಡ್ಡಿ ನೇಮಕಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ವಿಜಯೇಂದ್ರ ವಿರುದ್ಧ  ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು. ಬಿಜೆಪಿ ಕೇಂದ್ರ ನಾಯಕರಿಗೆ ದೂರು ಸಹ ನೀಡಿದ್ದರು. ಇದಕ್ಕೆ ಪ್ರತಿಯಾಗಿ ವಿಜಯೇಂದ್ರ ಬಣದ ನಾಯಕರು ಸಹ ಸುಧಾಕರ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. 

ಫೆ.10ರಂದು ವರಿಷ್ಠರು ಜಿಲ್ಲಾ ಅಧ್ಯಕ್ಷರ ನೇಮಕಕ್ಕೆ ತಡೆ ನೀಡಿದ್ದರು. ನಂತರ ಅಲ್ಲಿಂದ ಇಲ್ಲಿಯವರೆಗೆ ಬಿಜೆಪಿ ಜಿಲ್ಲಾ ಅಧ್ಯಕ್ಷರ ಆಯ್ಕೆ ನಡೆದಿಲ್ಲ. ಸಂದೀಪ್ ರೆಡ್ಡಿ ಅವರೇ ಮುಂದುವರಿಯೊವರೊ, ಡಾ.ಕೆ.ಸುಧಾಕರ್ ಬೆಂಬಲಿಗರು ಅಧ್ಯಕ್ಷರಾಗುವರೊ ಅಥವಾ ತಟಸ್ಥನಾಯಕ ಜಿಲ್ಲಾ ಅಧ್ಯಕ್ಷ ಸ್ಥಾನದ ಸಾರಥ್ಯವಹಿಸುವರೊ ಎನ್ನುವ ಕುತೂಹಲ ಇಂದಿಗೂ ಇದೆ.

ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಮುನ್ನ ಸಂದೀಪ್ ರೆಡ್ಡಿ ಅವರು ತಮ್ಮ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಮೂಲಕ ಕ್ಷೇತ್ರದಲ್ಲಿ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಜಿಲ್ಲಾ ಅಧ್ಯಕ್ಷ ಆಯ್ಕೆಗೆ ತಡೆ ಬಿದ್ದ ನಂತರವೂ ಈ ಕಾರ್ಯಕ್ರವನ್ನು ಮುಂದುವರಿಸಿದ್ದಾರೆ. ತಮ್ಮದೇ ಆದ ಯುವ ಪಡೆಯನ್ನು ಕಟ್ಟುತ್ತಿದ್ದಾರೆ. 

ಹೀಗೆ ಗ್ರಾಮೀಣ ಭಾಗಗಳಲ್ಲಿ ತಮ್ಮದೇ ಆದ ಬೆಂಬಲಿಗರ ಪಡೆಯನ್ನು ಹೊಂದಿರುವ ಸಂದೀಪ್ ರೆಡ್ಡಿ ಅವರನ್ನು ಕಾಂಗ್ರೆಸ್‌ಗೆ ಕರೆ ತರಬೇಕು ಎನ್ನುವ ಚರ್ಚೆಗಳು ಸಹ ಜೋರಾಗಿದೆ.

ಅಲ್ಲದೆ ಸಂದೀಪ್ ರೆಡ್ಡಿ ಅವರು ನಗರದ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ನಿತ್ಯ ಮಧ್ಯಾಹ್ನದ ಊಟ ನೀಡಲು ಮುಂದಾಗಿದ್ದರು. ಇದಕ್ಕೆ ನಾನಾ ಕಾರಣಗಳನ್ನು ಮುಂದಿಟ್ಟು ತಡೆ ನೀಡಲಾಗಿತ್ತು. ಈ ವಿಚಾರವಾಗಿ ರಾಜಕೀಯವೂ ಪ್ರವಹಿಸಿತ್ತು. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಮುತುವರ್ಜಿ ಮತ್ತು ಸಹಕಾರದ ಪರಿಣಾಮ ಭಗತ್ ಸಿಂಗ್ ಟ್ರಸ್ಟ್ ಊಟ ನೀಡುವಂತೆ ಆಗಿದೆ.

ಜಿಲ್ಲಾ ಅಧ್ಯಕ್ಷ ಸ್ಥಾನದ ಕಗ್ಗಂಟು ಬಿಜೆಪಿಯಲ್ಲಿ ಮುಂದುವರಿದಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಆಪ್ತರಾಗಿರುವ ಸಂದೀಪ್ ರೆಡ್ಡಿ ಒಂದು ವೇಳೆ ಬಿಜೆಪಿಯಲ್ಲಿಯೇ ಉಳಿದರೆ ಅವರಿಗೆ ಪಕ್ಷದಲ್ಲಿ ಯಾವ ಜವಾಬ್ದಾರಿ ನೀಡಲಾಗುತ್ತದೆ ಎನ್ನುವ ಕುತೂಹಲವೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.