ADVERTISEMENT

ಚಿಕ್ಕಬಳ್ಳಾಪುರದಲ್ಲಿ ಮುಸ್ಲಿಮರ ಪ್ರತಿಭಟನೆ

‘ಐ ಲವ್ ಮಹಮ್ಮದ್’ ಬ್ಯಾನರ್‌ ವಿರುದ್ಧ ಎಫ್‌ಐಆರ್‌ಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 5:32 IST
Last Updated 20 ಸೆಪ್ಟೆಂಬರ್ 2025, 5:32 IST
ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಸೈಯದ್ ನಗರದಲ್ಲಿ ‘ಐ ಲವ್ ಮಹಮ್ಮದ್’ ಬ್ಯಾನರ್‌ ಅಳವಡಿಸಿದ್ದಕ್ಕೆ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ ಚಿಕ್ಕಬಳ್ಳಾಪುರದಲ್ಲಿ ಮುಸ್ಲಿಮರು ಪ್ರತಿಭಟಿಸಿದರು
ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಸೈಯದ್ ನಗರದಲ್ಲಿ ‘ಐ ಲವ್ ಮಹಮ್ಮದ್’ ಬ್ಯಾನರ್‌ ಅಳವಡಿಸಿದ್ದಕ್ಕೆ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ ಚಿಕ್ಕಬಳ್ಳಾಪುರದಲ್ಲಿ ಮುಸ್ಲಿಮರು ಪ್ರತಿಭಟಿಸಿದರು   

ಚಿಕ್ಕಬಳ್ಳಾಪುರ: ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಸೈಯದ್ ನಗರದಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಅಳವಡಿಸಿದ್ದ ‘ಐ ಲವ್ ಮಹಮ್ಮದ್’ ಬ್ಯಾನರ್‌ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ ನಗರದಲ್ಲಿ ಮುಸ್ಲಿಮರು ಶುಕ್ರವಾರ ಪ್ರತಿಭಟಿಸಿದರು.

ಎಂ.ಜಿ. ರಸ್ತೆಯ ಮಿಸ್ಕೀನ್ ಶಾ ಸೈಲಾನಿ ದರ್ಗಾ ಎದುರು ಮುಸ್ಲಿನರು ಶಾಂತಿಯುತ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಎ.ಪಿ.ಜೆ. ಅಬ್ದುಲ್ ಕಲಾಂ ಫೌಂಡೇಶನ್ ಅಧ್ಯಕ್ಷ  ಎಂ.ಎಂ.ಭಾಷಾ ಮಾತನಾಡಿ, ‘ಪ್ರವಾದಿ ಮಹಮ್ಮದ್ ಅವರು ವಿಶ್ವಕ್ಕೆ ಶಾಂತಿ, ಸಹಿಷ್ಣುತೆ, ಮನುಷ್ಯತ್ವದ ಸಂದೇಶ ನೀಡಿದರು. ನಾವು ನಮ್ಮ ಪ್ರವಾದಿ ಅವರನ್ನು ಪ್ರೀತಿಸುತ್ತೇವೆ ಎಂದರೆ ಅದು ಅಪರಾಧವೇ? ವಿವಿಧ ಧರ್ಮ-ಜಾತಿ-ಭಾಷೆಗಳ ಜನರು ಒಗ್ಗಟ್ಟಿನಿಂದ ಬದುಕುತ್ತಿರುವ ವೈವಿಧ್ಯಮಯ ದೇಶ ಭಾರತ. ಆದರೆ ಕೆಲ ಮತೀಯವಾದಿಗಳು ಈ ಸಾಮರಸ್ಯವನ್ನು ಸಹಿಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಮುಸ್ಲಿಮರು ಈ ದೇಶದ ಮೂಲ ನಿವಾಸಿಗಳು. ನಮಗೆ ರಾಷ್ಟ್ರದ ಮೇಲೆ ಅಪಾರ ಪ್ರೀತಿ ಇದೆ. ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ. ಆದರೆ ಕೆಲವರು ಪದೇ ಪದೇ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತಿದ್ದಾರೆ. ಇಂತಹ ಅಂಶಗಳ ವಿರುದ್ಧ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

 ಪ್ರತಿಭಟನೆಯಲ್ಲಿ ಎಚ್.ಕೆ.ಜಿ.ಎನ್. ಸಾಧಿಕ್, ಶಾಹಿದ್ ಅಬ್ಬಾಸ್, ಹಾಶಿಂ ಬನ್ನೂರು, ಬಾಬಾ ಜಾನ್, ನೂರ್, ಇಮ್ತಿಯಾಜ್, ಅಬುಬಕರ್, ರಹಮತುಲ್ಲಾ, ದಾವೂದ್, ಇಮ್ರಾನ್, ಶಾಬಾಜ್, ಪರ್ವೇಜ್ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.