ADVERTISEMENT

‘ಅಸಲು, ಬಡ್ಡಿ ದೇಗುಲದ ನಿಧಿಗೆ ಜಮೆ ಮಾಡಿ’

ಮಿಣಕಿನಗುರ್ಕಿ ದೇಗುಲದ ಜಮೀನಿನಲ್ಲಿ ಅಕ್ರಮ ಟವರ್ ಪ್ರಕರಣ: ಜಿಲ್ಲಾಡಳಿತ ಆದೇಶ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 2:38 IST
Last Updated 2 ಆಗಸ್ಟ್ 2022, 2:38 IST
..
..   

ಮಂಚೇನಹಳ್ಳಿ: ತಾಲ್ಲೂಕಿನ ಮಿಣಕಿನಗುರ್ಕಿ ಗ್ರಾಮದ ಚೌಡೇಶ್ವರಿ ದೇವಾಲಯಕ್ಕೆ ಸೇರಿದ ಇನಾಂತಿ ಜಮೀನಿನಲ್ಲಿ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಮೊಬೈಲ್ ಟವರ್ ನಿರ್ಮಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ.ಕೃಷ್ಣಪ್ಪ ಎಂಬುವವರು ಬಾಡಿಗೆ ರೂಪದಲ್ಲಿ ಪಡೆದಿದ್ದ ₹ 3,31,600 ಹಾಗೂ ಇದಕ್ಕೆ ವಾರ್ಷಿಕ ಶೇ 6ರಂತೆ ಬಡ್ಡಿಯನ್ನು ಜಿಲ್ಲಾಡಳಿತ ವಿಧಿಸಿದೆ. ‌ಬಾಡಿಗೆ ಹಣ ಮತ್ತು ಬಡ್ಡಿಯನ್ನು ವಸೂಲಿ ಮಾಡಿ ಚೌಡೇಶ್ವರಿ ದೇವಾಲಯದ ನಿಧಿಗೆ ಜಮೆ ಮಾಡುವಂತೆ ಗೌರಿಬಿದನೂರು ತಹಶೀಲ್ದಾರರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಕೃಷ್ಣಪ್ಪ ಅವರು 2015ರ ಜೂನ್‌ನಿಂದ 2021ರ ಡಿಸೆಂಬರ್‌ವರೆಗೆ ಬಾಡಿಗೆ ಇನ್ನಿತರ ರೂಪದಲ್ಲಿ ಪಡೆದಿದ್ದಾರೆ. ಈ ಮೊತ್ತಕ್ಕೆ ವಾರ್ಷಿಕ ಶೇ 6ರಷ್ಟು ಬಡ್ಡಿಯನ್ನು ವಿಧಿಸಿ ಅಸಲನ್ನು ವಸೂಲಿ ಮಾಡಬೇಕು. 2022ರ ಜನವರಿಯಿಂದಹಿಂದೂಸ್ ಟವರ್ ಲಿಮಿಟೆಡ್ ಕಂಪನಿಯಿಂದ ಕೃಷ್ಣಪ್ಪ ಬಾಡಿಗೆ ವಸೂಲಿ ಮಾಡಿದ್ದಲ್ಲಿ ಸದರಿ ಮೊತ್ತಕ್ಕೂ ಶೇ 6ರ ಬಡ್ಡಿಯನ್ನು ವಿಧಿಸಿ ಅಸಲು, ಬಡ್ಡಿ ವಸೂಲಿಗೆ ಆದೇಶಿಸಿದೆ.

ಏನಿದು ಅಕ್ರಮ: ಮಿಣಕಿನಗುರ್ಕಿಯ ಎಂ. ಕೃಷ್ಣಪ್ಪ ಎಂಬುವವರು ಗ್ರಾಮದ ಸರ್ವೆ ನಂ 69/1ರ 1.03 ಎಕರೆ ಜಮೀನು ಹೊಂದಿದ್ದಾರೆ. ಇಲ್ಲಿ 40*60 ಸುತ್ತಳತೆಯ 2,400 ಅಡಿಗಳ ವ್ಯಾಪ್ತಿಯಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ 2015ರ ಜೂನ್‌ನಲ್ಲಿ ಕಂಪನಿ ಜತೆ ಕರಾರು ಮಾಡಿಕೊಂಡಿದ್ದರು. ಆ ಜಮೀನಿನ ದಾಖಲೆಗಳನ್ನು ಹಿಂದೂಸ್ ಟವರ್ ಲಿಮಿಟೆಡ್ ಕಂಪನಿಗೆ
ನೀಡಿದ್ದಾರೆ.

ADVERTISEMENT

ಆದರೆ, ಇಲ್ಲಿ ಟವರ್ ಅವಳವಡಿಸುವ ಬದಲು ಗ್ರಾಮದ ಸರ್ವೆ ನಂ. 1ರಲ್ಲಿರುವ ಮುಜುರಾಯಿ ಇಲಾಖೆಗೆ ಸೇರಿದ ಚೌಡೇಶ್ವರಿ ದೇಗುಲದ ಇನಾಂತಿ ಜಮೀನಿನಲ್ಲಿ ಟವರ್ ನಿರ್ಮಿಸಲಾಗಿದೆ. ಟವರ್ ನಿರ್ಮಾಣಕ್ಕೆ ಯಾವುದೇ ಇಲಾಖೆಯಿಂದಲೂ ಅನುಮತಿ ಪಡೆದಿಲ್ಲ.

ಚಿಕ್ಕಬಳ್ಳಾಪುರದ ಆರ್‌ಟಿಐ ಕಾರ್ಯಕರ್ತ ಸಿ. ಮೋಹನ್ ಕುಮಾರ್ ಈ ಅಕ್ರಮ ಮೊಬೈಲ್ ಟವರ್‌ಗೆ ಸಂಬಂಧಿಸಿದಂತೆ ಮುಜುರಾಯಿ ಇಲಾಖೆ, ತಹಶೀಲ್ದಾರ್ ಕಚೇರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಪ್ರಧಾನಿ ಕಚೇರಿಗೆ ದೂರು ನೀಡಿದ್ದರು. ಸ್ಥಳ ಮಹಜರು ನಂತರ ಟವರ್‌ಗೆ ನೀಡಿದ್ದ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ಕಡಿತಗೊಳಿಸಿತ್ತು.

ಮೋಹನ್ ಕುಮಾರ್ ದೂರು ಆಧರಿಸಿ 2021ರ ಡಿಸೆಂಬರ್‌ನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದರು. ದೇಗುಲದ ಜಾಗದಲ್ಲಿ ಅಕ್ರಮವಾಗಿ ಟವರ್ ನಿರ್ಮಿಸಲಾಗಿದೆ ಎಂದು ತಹಶೀಲ್ದಾರರಿಗೆ ವರದಿ ನೀಡಿದರು. ಆ ವರದಿಯನ್ನು ತಹಶೀಲ್ದಾರರು ಕ್ರಮಕ್ಕೆ ಕೋರಿ ಜಿಲ್ಲಾಧಿಕಾರಿಗೆ
ಸಲ್ಲಿಸಿದ್ದರು.

ಹೀಗೆ ಆರ್‌ಟಿಐ ಕಾರ್ಯಕರ್ತ ಮೋಹನ್ ಹೋರಾಟದ ಫಲವಾಗಿ ದೇಗುಲದ ಜಮೀನಿನಲ್ಲಿ ಅಕ್ರಮವಾಗಿ ಟವರ್ ನಿರ್ಮಿಸಿದ್ದ ಪ್ರಕರಣವು ಬಯಲಿಗೆ ಬಂದಿತ್ತು. ಈ ಅಕ್ರಮದ ಬಗ್ಗೆ ಮಾರ್ಚ್ 30ರಂದು ‘ಪ್ರಜಾವಾಣಿ‘ಯಲ್ಲಿ ‘ದೇಗುಲ ಜಮೀನಿನಲ್ಲಿ ಟವರ್’ ಎನ್ನುವ ವರದಿ ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.