ADVERTISEMENT

ಬಹುತೇಕ ರಸ್ತೆಗಳಲ್ಲಿ ಅಧ್ವಾನ; ಗುಂಡಿಮಯ ಚಿಕ್ಕಬಳ್ಳಾಪುರ ರಸ್ತೆಗಳು...

ಕೆಲವು ಕಡೆ ಕಾಟಾಚಾರಕ್ಕೆ ತೇಪೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 7:13 IST
Last Updated 4 ಆಗಸ್ಟ್ 2025, 7:13 IST
ಬಜಾರ್ ರಸ್ತೆಯಲ್ಲಿನ ಗುಂಡಿ
ಬಜಾರ್ ರಸ್ತೆಯಲ್ಲಿನ ಗುಂಡಿ   

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದ ರಸ್ತೆಗಳು ಗುಂಡಿಮಯವಾಗಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಗುಂಡಿಗಳಿಗೆ ಮುಕ್ತಿ ನೀಡುವ ಇಚ್ಛಾಶಕ್ತಿ ತೋರುತ್ತಿಲ್ಲ. ಕೆಲವು ಕಡೆ ಗುಂಡಿಗಳನ್ನು ಮುಚ್ಚಿದ್ದರೂ ಅದು ಬೇಕಾ ಬಿಟ್ಟಿ ಎನ್ನುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ.

ನಗರವನ್ನು ಸುತ್ತಿದರೆ ರಸ್ತೆಯ ಗುಂಡಿಗಳ ದರ್ಶನವಾಗುತ್ತದೆ. ದ್ವಿಚಕ್ರ ವಾಹನ ಸವಾರರ ವೇಗಕ್ಕೆ ಬ್ರೇಕ್ ಹಾಕುವಲ್ಲಿಯೂ ಇವು ಯಶಸ್ವಿಯಾಗಿವೆ. ನಗರದ ಎಂ.ಜಿ ರಸ್ತೆಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಆ ಕಾರಣದಿಂದ ಈ ಒಂದು ರಸ್ತೆ ಹೊರಗಿಟ್ಟು ಉಳಿದವು ಗಮನಿಸಿದರೂ ಗುಂಡಿಗಳ ಗಂಡಾ ಗುಂಡಿ ಜೋರಾಗಿದೆ.

ನಗರದ ಬಿ.ಬಿ ರಸ್ತೆ, ಗಂಗಮ್ಮನ ಗುಡಿ ರಸ್ತೆ, ಬಜಾರ್ ರಸ್ತೆ, ಕೆಎಸ್‌ಆರ್‌ಟಿಸಿ ಡಿಪೊ ರಸ್ತೆ, ದೊಡ್ಡಬಳ್ಳಾಪುರ ಮಾರ್ಗದ ರಸ್ತೆ, ಲಕ್ಕಮ್ಮ ಕಲ್ಯಾಣ ಮಂಟಪದ ಎದುರಿನ ರಸ್ತೆ, ಸಾಧುಮಠ ರಸ್ತೆ–ಹೀಗೆ ನಗರದ ಬಹುತೇಕ ಹಾದಿಗಳಲ್ಲಿ ಗುಂಡಿಗಳು ದರ್ಶನವಾಗುತ್ತದೆ.

ADVERTISEMENT

ಕೆಲವು ರಸ್ತೆಗಳಲ್ಲಿ ಸಣ್ಣ ಪುಟ್ಟ ಗುಂಡಿಗಳು ಇದ್ದರೆ ಕೆಲವು ಕಡೆಗಳಲ್ಲಿ  ದೊಡ್ಡ ಗುಂಡಿಗಳನ್ನು ಕಾಣಬಹುದು. ಚಾಲಕರು ಬೈಕ್‌ಗಳನ್ನು, ಕಾರುಗಳನ್ನು ಸರಾಗವಾಗಿ ಚಲಾಯಿಸಿಕೊಂಡು ಹೋಗುವಾಗ ತಟ್ಟನೆ ಗುಂಡಿಗಳಿಗೆ ಇಳಿಯುವ ಸನ್ನಿವೇಶಗಳು ಹೇರಳವಾಗಿ ಕಾಣಬಹುದು. ನಗರದ ಪ್ರಮುಖ ಬಡಾವಣೆಗಳ ರಸ್ತೆಗಳೇ ಗುಂಡಿ ಮುಕ್ತವಾಗಿಲ್ಲ. 

ಚಿಕ್ಕಬಳ್ಳಾಪುರದಿಂದ ಮುಷ್ಟೂರು ಕಡೆ ಸಾಗುವ ರಸ್ತೆಯ ಸ್ಥಿತಿಯದ್ದು ಮತ್ತೊಂದು ಕಥೆ. ಇಲ್ಲಿ ಬೃಹತ್ ಗುಂಡಿಗಳಿವೆ. ರಸ್ತೆ ದುರಸ್ತಿಗೆ ಆಗ್ರಹಿಸಿ ಮುಷ್ಟೂರು ಗ್ರಾಮಸ್ಥರು ಇತ್ತೀಚೆಗೆ ಪ್ರತಿಭಟನೆ ಸಹ ನಡೆಸಿದ್ದರು.

ನಗರದ ಪ್ರಮುಖ ರಸ್ತೆಗಳು ಮತ್ತು ಬಡಾವಣೆಗಳಲ್ಲಿ ಅಷ್ಟೇ ಅಲ್ಲ ನಗರವನ್ನು ಹೊರವಲಯದಲ್ಲಿರುವ ರಸ್ತೆಗಳು ಸಹ ತಗ್ಗು ದಿಣ್ಣೆಗಳಿಂದ ಕೂಡಿವೆ. ನಗರವನ್ನು ಪ್ರವೇಶಿಸುವ ವಾಹನ ಸವಾರರು ಸರ್ಕಸ್ ಮಾಡಲೇಬೇಕು.  

ಚಿಕ್ಕಬಳ್ಳಾಪುರದಲ್ಲಿ ಗುಂಡಿಗಳನ್ನು ಮುಚ್ಚಲು ನಗರಸಭೆ ಪ್ರತಿ ವರ್ಷ ಹಣ ಸಹ ಖರ್ಚು ಮಾಡುತ್ತದೆ.  ಆದರೆ ಗುಂಡಿಗಳು ಮಾತ್ರ ಅಪಾಯಕ್ಕೆ ಬಾಯಿ ತೆರೆದೇ ಇವೆ. ಯಾವ ರಸ್ತೆಯು ಗುಂಡಿ ಮುಕ್ತವಾಗಿದೆ, ಜಲ್ಲಿಕಲ್ಲುಗಳು ಮೇಲೆ ಎದ್ದಿಲ್ಲ, ಡಾಂಬರ್ ಕಿತ್ತು ಬಂದಿಲ್ಲ ಎಂದು ನಗರದಲ್ಲಿ ಹುಡುಕಬೇಕು.

ಚಿಕ್ಕಬಳ್ಳಾಪುರದ ವಿಶಾಲ್ ಮಾರ್ಟ್‌ ಮುಂಭಾಗದಿಂದ ಶನೈಶ್ವರ ದೇಗುಲದವರೆಗಿನ ಬಿ.ಬಿ ರಸ್ತೆಯ ಎರಡೂ ಬದಿಗಳಲ್ಲಿ ಮಳೆ ಬಂದರೆ ದೊಡ್ಡ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತದೆ.  

ಮೇಲೆದ್ದ ಜಲ್ಲಿಕಲ್ಲುಗಳು: ರೇಷ್ಮೆಗೂಡು ಮಾರುಕಟ್ಟೆ ಸೇರಿದಂತೆ ಕೆಲವು ರಸ್ತೆಗಳಲ್ಲಿನ ದೊಡ್ಡ ಗುಂಡಿಗಳಿಗೆ ಜಲ್ಲಿಕಲ್ಲು, ಸಿಮೆಂಟ್ ಹಾಕಿ ಮುಚ್ಚಲಾಗಿದೆ. ಆದರೆ ಇಲ್ಲಿ ಕಾಟಾಚಾರಕ್ಕೆ ಮುಚ್ಚಲಾಗಿದೆ ಎನ್ನುವುದನ್ನು ಮೇಲೆದ್ದಿರುವ ಜಲ್ಲಿಕಲ್ಲುಗಳೇ ಸಾರಿ ಹೇಳುತ್ತವೆ.

ನಂದಿಗಿರಿಧಾಮ, ಈಶಾ ಯೋಗ ಕೇಂದ್ರದ ಕಾರಣದಿಂದ ವಾರಾಂತ್ಯದ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಯ ಜನರು ದೊಡ್ಡ ಸಂಖ್ಯೆಯಲ್ಲಿಯೇ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡುವರು. ಚಿಕ್ಕಬಳ್ಳಾಪುರ ಅಭಿವೃದ್ಧಿ ಮತ್ತು ಗುಂಡಿಗಳ ಅಧ್ವಾನದ ಬಗ್ಗೆ ಪ್ರವಾಸಿಗರು ಅಣಕದ ಮಾತುಗಳನ್ನೇ ಆಡುತ್ತಿದ್ದಾರೆ. 

ಡಿವೈಎಸ್‌ಪಿ ಕಚೇರಿ ಮುಂಭಾಗದ ರಸ್ತೆಯ ಗುಂಡಿ ಸುತ್ತ ಕಲ್ಲುಗಳು
ಕೆ.ಟಿ ರಸ್ತೆ
ರೇಷ್ಮೆಗೂಡು ಮಾರುಕಟ್ಟೆ ರಸ್ತೆಯಲ್ಲಿ ಮೇಲೆದ್ದಿರುವ ಜಲ್ಲಿಕಲ್ಲು

ಮಳೆಗಾಲದಲ್ಲಿ ಮತ್ತಷ್ಟು ಅಧ್ವಾನ:

ಮಳೆಗಾಲದಲ್ಲಿ ಈ ಗುಂಡಿಗಳು ನೀರಿನಿಂದ ತುಂಬಿ ಮತ್ತಷ್ಟು ಅಧ್ವಾನಕ್ಕೆ ಕಾರಣವಾಗುತ್ತವೆ. ಈ ಗುಂಡಿಗಳಿಗೆ ಬೈಕ್‌ ಕಾರುಗಳನ್ನು ಇಳಿಸಬೇಕಾದ ಅನಿವಾರ್ಯ ಚಾಲಕರದ್ದು. ಆದರೆ ಪಕ್ಕದಲ್ಲಿಯೇ ಪಾದಚಾರಿಗಳು ಸಹ ನಡೆದು ಹೋಗುವರು. ವಾಹನಗಳು ಗುಂಡಿಗಿಳಿದರೆ ಕೆಸರು ಪಿಚಕ್ಕನೆ ಪಾದಚಾರಿಗಳಿಗೆ ಸಿಡಿಯುತ್ತದೆ.  ಗುಂಡಿಗಳಲ್ಲಿ ನೀರು ತುಂಬಿದ ಕಾರಣ ಹಲವು ಬೈಕ್ ಸವಾರರು ಭಯದಲ್ಲಿಯೇ ವಾಹನಗಳು ಚಲಾಯಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.