ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಪಿಎಸ್‌ಐ ಅಮರ್ ಎಸ್.ಮುಗಳೆ ಅವರ ಪಾಸ್ ದುರುಪಯೋಗದ ಆರೋಪದ ಮೇಲೆ ಚಿಕ್ಕಬಳ್ಳಾಪುರದ ಗುತ್ತಿಗೆದಾರ ಅಶೋಕ್ ಎಂಬುವವರ ವಿರುದ್ದ ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಐಪಿಎಸ್ ಅಧಿಕಾರಿ ಅರುಣ್ ಚಕ್ರವರ್ತಿ ಅವರೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಇತ್ತೀಚೆಗೆ ಅರುಣ್ ಚಕ್ರವರ್ತಿ ಅವರು ಚಿಕ್ಕಬಳ್ಳಾಪುರದ ನಂದಿಗಿರಿಧಾಮ ಠಾಣೆಗೆ ಭೇಟಿ ನೀಡಿದ್ದರು. ಅಲ್ಲಿನ ಕಟ್ಟಡ ಪರಿಶೀಲಿಸಿದ್ದರು. ಈ ವೇಳೆ ಕಟ್ಟಡದ ಸುತ್ತಲಿನ ಉದ್ಯಾನದ ಬಗ್ಗೆ ವಿಚಾರಿಸಿದ್ದರು. ಅಶೋಕ್ ಎಂಬುವವರು ಈ ಉದ್ಯಾನ ನಿರ್ಮಿಸಿದ್ದು ಅವರು ಬೇರೆ ಬೇರೆ ಕಡೆಗಳಲ್ಲಿಯೂ ಉದ್ಯಾನ ನಿರ್ಮಿಸಿರುವುದಾಗಿ ತಿಳಿಯಿತು.
ಮರು ದಿನ ಬೆಂಗಳೂರಿನ ಜೆ.ಪಿ ನಗರಕ್ಕೆ ಹೋದ ಅಶೋಕ್ ತಾನು ನಿರ್ಮಿಸಿರುವ ಉದ್ಯಾನಗಳನ್ನು ತೋರಿಸಲು ಅರುಣ್ ಚಕ್ರವರ್ತಿ ಅವರನ್ನು ತನ್ನ ವಾಹನದಲ್ಲಿಯೇ ಕರೆದೊಯ್ದರು. ಈ ವೇಳೆ ನೈಸ್ ರೋಡ್ ಟೋಲ್ ಸಿಕ್ಕಿದೆ.
ಟೋಲ್‌ನಲ್ಲಿ ಅಶೋಕ್ ಒಂದು ಕಾರ್ಡ್ ತೋರಿಸಿದರು. ಆಗ ಅರುಣ್ ಚಕ್ರವರ್ತಿ, ‘ಯಾವ ಕಾರ್ಡ್ ತೋರಿಸುತ್ತಿದ್ದೀರಿ’ ಎಂದು ಕೇಳಿದ್ದರು. ಆಗ ಅಶೋಕ್ ‘ಎಂ.ಪಿ ಕಾರ್ಡ್’ ಎಂದರು.
ಅರುಣ್ ಚಕ್ರವರ್ತಿ ಅವರು ಕಾರ್ಡ್ ಪರಿಶೀಲಿಸಿದಾಗ ‘ಕರ್ನಾಟಕ ರಾಜ್ಯ ಪೊಲೀಸ್, ಅಮರ್ ಎಸ್.ಮುಗಳೆ, ಪಿಎಸ್‌ಐ ಎಂದಿತ್ತು. ಕೆಜಿಐಡಿ ನಂಬರ್ ಸಹ ಇತ್ತು. ಈ ಬಗ್ಗೆ ಅರುಣ್ ಚಕ್ರವರ್ತಿ ಅವರು ಪ್ರಶ್ನಿಸಿದಾಗ ಅಶೋಕ್ ಸಮಂಜಸ ಉತ್ತರ ನೀಡಿಲ್ಲ.
‘ಪೊಲೀಸ್ ಅಧಿಕಾರಿಯ ಪಾಸ್ ಪಡೆದು ಮೋಸ್ ಮಾಡಿ ಟೋಲ್ ದುರುಪಯೋಗಪಡಿಸಿಕೊಂಡಿದ್ದಾನೆ. ಒಬ್ಬ ಹಿರಿಯ ಅಧಿಕಾರಿಯಾಗಿ ಆತನ ಜೊತೆ ಕಾರ್ಯ ನಿಮಿತ್ತ ಹೋಗುವಾಗ ಪೊಲೀಸ್ ಅಧಿಕಾರಿಯ ಐಡಿ ಕಾರ್ಡ್ ತೋರಿಸಿ ತಾನೇ ಪೊಲೀಸ್ ಅಧಿಕಾರಿ ಎಂದು ನಂಬಿಸಿ ಕಾರ್ಡ್ ದುರುಪಯೋಗಪಡಿಸಿ ಕೊಂಡಿದ್ದಾನೆ. ಇದು ಅಪರಾಧ. ಈತನ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಅರುಣ್ ಚಕ್ರವರ್ತಿ ತಲಘಟ್ಟಪುರ ಠಾಣೆಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.