ಬಂಧನ (ಸಾಂದರ್ಭಿಕ ಚಿತ್ರ)
ಚಿಕ್ಕಬಳ್ಳಾಪುರ: ‘ಮನೆಗೆ ಕರೆದುಕೊಂಡು ಹೋಗಿ ಬಿಡುತ್ತೇವೆ’ ಎಂದು ನಂಬಿಸಿ ಯುವತಿಯನ್ನು ನಿರ್ಜನ ಪ‍್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ ಆರೋಪಿಗಳನ್ನು ಚಿಕ್ಕಬಳ್ಳಾಪುರ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಸಿಖಂದರ್ ಮತ್ತು ಜನಾರ್ದನಾಚಾರಿ ಬಂಧಿತರು. ಮಂಚೇನಹಳ್ಳಿ ತಾಲ್ಲೂಕಿನ ವರವಣಿ ಗ್ರಾಮದ ಯುವತಿಯು ಮನೆಯವರಿಂದ ಅನಾದರಕ್ಕೆ ಒಳಗಾಗಿದ್ದರು ಎನ್ನಲಾಗುತ್ತಿದೆ.
ತಾಲ್ಲೂಕಿನ ಶ್ರೀನಿವಾಸ ಸಾಗರ ಬಳಿ ಶನಿವಾರ ಸಂಜೆ ಯುವತಿ ನಡೆದುಕೊಂಡು ಬರುತ್ತಿದ್ದಾಗ ಆರೋಪಿಗಳು ‘ಚಿಕ್ಕಬಳ್ಳಾಪುರಕ್ಕೆ ತಲುಪಿಸುತ್ತೇವೆ’ ಎಂದು ಬೈಕ್‌ನಲ್ಲಿ ಕರೆ ತಂದಿದ್ದಾರೆ. ಗೊಲ್ಲಹಳ್ಳಿ ಕ್ರಾಸ್ ಬಳಿ ಆರೋಪಿಗಳು ಯುವತಿ ಮೇಲೆ ಅತ್ಯಾಚಾರ ನಡೆಸಿ ಚಿಕ್ಕಬಳ್ಳಾಪುರಕ್ಕೆ ಕರೆತಂದು ಬಿಟ್ಟಿದ್ದಾರೆ. ಯುವತಿ ಬಸ್ ನಿಲ್ದಾಣದಲ್ಲಿ ಮಲಗಿದ್ದಾರೆ.
ನಂತರ ಮತ್ತೆ ಬಸ್ ನಿಲ್ದಾಣಕ್ಕೆ ಬಂದ ಆರೋಪಿಗಳು, ‘ನಿಮ್ಮ ಸ್ವಗ್ರಾಮಕ್ಕೆ ಕರೆದುಕೊಂಡು ಹೋಗುತ್ತೇವೆ’ ಎಂದು ನಂಬಿಸಿದ್ದಾರೆ. ಗೌರಿಬಿದನೂರು ಮಾರ್ಗದ ಕಣಿವೆ ಪ್ರದೇಶದಲ್ಲಿ ಮತ್ತೆ ಅತ್ಯಾಚಾರ ನಡೆಸಿ ಸಮೀಪದ ಪೆಟ್ರೋಲ್ ಬಂಕ್ ಬಳಿ ಯುವತಿಯನ್ನು ಬಿಟ್ಟಿದ್ದಾರೆ. ಪೆಟ್ರೋಲ್ ಬಂಕ್‌ನವರು ಯುವತಿಯಿಂದ ಮಾಹಿತಿ ತಿಳಿದು ಪೊಲೀಸರಿಗೆ ವಿಷಯ ತಲುಪಿಸಿದ್ದಾರೆ.
ಪೆಟ್ರೋಲ್ ಬಂಕ್ ಬಳಿಯ ಸಿಸಿ ಟಿವಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಪೊಲೀಸರು ಭಾನುವಾರ ಆರೋಪಿಗಳನ್ನು ಬಂಧಿಸಿದ್ದಾರೆ.
‘ಯುವತಿಯು ಕುಟುಂಬದಿಂದ ಅನಾದರಕ್ಕೆ ಒಳಗಾಗಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.