ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಕೌಶಲ ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ ಹೊಲಿಗೆ ತರಬೇತಿ ಪಡೆದ ಅಭ್ಯರ್ಥಿಗಳ ಪೈಕಿ ಕೆಲವರು ನೀಡಿದ ಸುಳ್ಳು ಮಾಹಿತಿಯಿಂದ ‘ಅರ್ಹ’ರು ಇಂದಿಗೂ ಹೊಲಿಗೆ ಯಂತ್ರದ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ!
ತರಬೇತಿ ಪಡೆದು ಒಂದೂವರೆ ವರ್ಷ ಪೂರ್ಣವಾಗಿದೆ. ತರಬೇತಿ ಪಡೆದ ಅರ್ಹರಿಗೆ ವಿತರಿಸಬೇಕಾದ ಹೊಲಿಗೆ ಯಂತ್ರಗಳು ಒಂದೂವರೆ ವರ್ಷದಿಂದ ಜಿಲ್ಲಾಡಳಿತ ಭವನದ ಕೌಶಲಾಭಿವೃದ್ಧಿ ಇಲಾಖೆ ಕಚೇರಿಯಲ್ಲಿವೆ.
ಅಷ್ಟಕ್ಕೂ ನಡೆದಿರುವುದೇನು: ಮುಖ್ಯಮಂತ್ರಿ ಕೌಶಲ ಕರ್ನಾಟಕ ಯೋಜನೆಯಡಿ 2022–23ನೇ ಸಾಲಿನಲ್ಲಿ ಜಿಲ್ಲೆಯ 240 ಮಂದಿಗೆ ಹೊಲಿಗೆ ತರಬೇತಿ ನೀಡಲಾಗಿದೆ. ನೋಂದಾಯಿತ ಮೂರು ಸಂಸ್ಥೆಗಳು ಇವರಿಗೆ 240ರಿಂದ 340 ಗಂಟೆಗಳ ತರಬೇತಿ ನೀಡಿವೆ. ಹೀಗೆ ತರಬೇತಿ ನೀಡಿದ ಸಂಸ್ಥೆಗೆ ಸರ್ಕಾರವೇ ನೇರವಾಗಿ ಒಬ್ಬ ಅಭ್ಯರ್ಥಿಗೆ ಇಂತಿಷ್ಟು ಹಣ ಎಂದು ನೀಡುತ್ತದೆ.
ಹೊಲಿಗೆ ತರಬೇತಿಗೆ ಅರ್ಹರು ಆನ್‌ಲೈನ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳ ಬೇಕು. ಇಲ್ಲಿ ನೋಂದಾಯಿಸಿಕೊಳ್ಳುವವರು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ನೋಂದಣಿ ಆಗಿರಬಾರದು. ಈ ಯೋಜನೆಯಡಿ ಸೌಲಭ್ಯವನ್ನೂ ಪಡೆದಿರಬಾರದು. ಹೀಗಿದ್ದಾಗ ಮಾತ್ರ ಅವರು ಮುಖ್ಯಮಂತ್ರಿ ಕೌಶಲ ಕರ್ನಾಟಕ ಕಾರ್ಯಕ್ರಮದ ಹೊಲಿಗೆ ಯಂತ್ರ ಸೌಲಭ್ಯ ಪಡೆಯಲು ಅರ್ಹರಾಗುವರು.
ಆದರೆ ಜಿಲ್ಲೆಯಲ್ಲಿ ಹೊಲಿಗೆ ತರಬೇತಿ ಪಡೆದಿರುವ 240 ಮಂದಿಯ ಪೈಕಿ ಶೇ 50ರಷ್ಟು ಮಂದಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ನೋಂದಣಿ ಆಗಿದ್ದಾರೆ. ಹೀಗೆ ಸುಳ್ಳು ಮಾಹಿತಿ ನೀಡಿ ಮುಖ್ಯಮಂತ್ರಿ ಕೌಶಲ ಕರ್ನಾಟಕ ಯೋಜನೆಯಡಿ ಹೊಲಿಗೆ ತರಬೇತಿ ಪಡೆದಿದ್ದಾರೆ.
‘ಅರ್ಹ’ ಅಲ್ಲದಿದ್ದರೂ ಹೊಲಿಗೆ ಯಂತ್ರದ ಸೌಲಭ್ಯ ಪಡೆಯಲು ಸುಳ್ಳು ಮಾಹಿತಿ ನೀಡಿರುವವರನ್ನು ಪತ್ತೆ ಮಾಡಲು ಕೌಶಲಾಭಿವೃದ್ಧಿ ಇಲಾಖೆ ಮುಂದಾಗಿದೆ. ಈ ಕಾರಣದಿಂದಲೇ ‘ಅರ್ಹ’ರಿಗೂ ಹೊಲಿಗೆ ಯಂತ್ರ ವಿತರಣೆ ತಡವಾಗುತ್ತಿದೆ.
‘ತರಬೇತಿ ಪಡೆದಿರುವ ಎಲ್ಲರ ಮಾಹಿತಿ ಕಲೆ ಹಾಕಿದ್ದೇವೆ. ತರಬೇತಿ ಪಡೆದ ಎಲ್ಲರಿಗೂ ಪ್ರಮಾಣ ಪತ್ರ ಸಹ ನೀಡಲಾಗಿದೆ. ಸಂಸ್ಥೆಗಳು ಸಹ ತಮ್ಮ ತರಬೇತಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ವಿವರಗಳನ್ನು ಪರಿಶೀಲಿಸಬೇಕಾಗಿತ್ತು’ ಎಂದು ಜಿಲ್ಲಾ ಕೌಶಾಲಾಭಿವೃದ್ಧಿ ಇಲಾಖೆ ಮೂಲಗಳು ತಿಳಿಸುತ್ತವೆ.
110 ಹೊಲಿಗೆ ಯಂತ್ರಗಳು ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆಗೆ ಈಗಾಗಲೇ ಬಂದಿವೆ. ಮೀಸಲಾತಿ ಮಾನದಂಡ ಅನುಸರಿಸಿ ವಿತರಿಸಬೇಕು. ಪರಿಶಿಷ್ಟ ಜಾತಿ, ಪಂಗಡ, ಅಂಗವಿಕಲರು ಹೀಗೆ ನಿಯಮದ ಅನುಸಾರ ವಿತರಿಸಬೇಕು. ಸುಳ್ಳು ಮಾಹಿತಿ ನೀಡಿದವರನ್ನು ಪತ್ತೆ ಮಾಡಿ ಅವರನ್ನು ಕೈಬಿಡಲಾಗುತ್ತದೆ. ಈ ಕಾರಣದಿಂದ ಅರ್ಹರೂ ಸಹ ಹೊಲಿಗೆ ಯಂತ್ರ ಸೌಲಭ್ಯವನ್ನು ಪಡೆಯಲು ತಡವಾಗುತ್ತಿದೆ’ ಎಂದು ಇಲಾಖೆ ಅಧಿಕಾರಿಗಳು ತಿಳಿಸುವರು.
ಯಾವುದೇ ಒಂದು ಯೋಜನೆಗೆ ಸುಳ್ಳು ಮಾಹಿತಿ ನೀಡಿದರೆ ಅದರ ಪರಿಣಾಮ ‘ಅರ್ಹ’ರ ಮೇಲೂ ಆಗುತ್ತದೆ ಎನ್ನುವುದಕ್ಕೆ ತಾಜಾ ನಿದರ್ಶನವಾಗಿದೆ ಈ ಪ್ರಕರಣ.
‘ಕೇಂದ್ರ ಕಚೇರಿಗೆ ಪತ್ರ; ಡಿ.ಸಿ ಜೊತೆ ಸಭೆ’
ಹೊಲಿಗೆ ತರಬೇತಿ ಪಡೆದಿರುವವರಲ್ಲಿ ಯಾರು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಸೌಲಭ್ಯ ಪಡೆದಿದ್ದಾರೆ ಎನ್ನುವ ಮಾಹಿತಿ ಪಡೆಯಲು ಕೌಶಲಾಭಿವೃದ್ಧಿ ಇಲಾಖೆಯ ಕೇಂದ್ರ ಕಚೇರಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಕೆಲವರು ಸುಳ್ಳು ಮಾಹಿತಿ ನೀಡಿರುವ ಕಾರಣ ಹೊಲಿಗೆ ಯಂತ್ರ ವಿತರಣೆ ಸಾಧ್ಯವಾಗಿಲ್ಲ ಎಂದು ಜಿಲ್ಲಾ ಕೌಶಾಲಾಭಿವೃದ್ಧಿ ಇಲಾಖೆ ಅಧಿಕಾರಿ ಎಂ.ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ನಾವು ಮಾಹಿತಿ ಕಲೆ ಹಾಕಿರುವ ಪ್ರಕಾರ ಶೇ 50ರಷ್ಟು ಮಂದಿ ಸುಳ್ಳು ಮಾಹಿತಿ ನೀಡಿದ್ದಾರೆ. 240 ಮಂದಿ ತರಬೇತಿ ಪಡೆದಿದ್ದರೂ 110 ಯಂತ್ರಗಳು ಬಂದಿವೆ. ಶೀಘ್ರದಲ್ಲಿಯೇ ಜಿಲ್ಲಾಧಿಕಾರಿ ಅವರ ನೇತೃತ್ವದ ಜಿಲ್ಲಾ ಕೌಶಾಲಾಭಿವೃದ್ಧಿ ಸಮಿತಿ ಸಭೆಯ ನಡೆಸಿ ಅಲ್ಲಿ ಚರ್ಚಿಸಿ ‘ಅರ್ಹ’ರಿಗೆ ಸೌಲಭ್ಯ ದೊರಕಿಸಿಕೊಡಲಾಗುವುದು ಎಂದರು. ಅರ್ಹ ಫಲಾನುಭವಿಗಳು ಹೆಚ್ಚು ಜನರು ಇದ್ದರೆ ಲಕ್ಕಿ ಡಿಪ್ ಮೂಲಕ ಆಯ್ಕೆ ಮಾಡಲಾಗುತ್ತದೆ. ‘ಅರ್ಹ’ರನ್ನು ಕಂಡು ಹಿಡಿದ ನಂತರವೇ ಈ ಪ್ರಕ್ರಿಯೆಗಳು ನಡೆಯುತ್ತವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.