
ಚಿಕ್ಕಬಳ್ಳಾಪುರ: ನಗರದ ಬಿಬಿ ರಸ್ತೆಯ ಎಯು ಚಿನ್ನಾಭರಣ ಮಾರಾಟ ಅಂಗಡಿಯಲ್ಲಿ ಡಿಸೆಂಬರ್‌ನಲ್ಲಿ ನಡೆದಿದ್ದ 78 ಕೆ.ಜಿ ಬೆಳ್ಳಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ಹನುಮಂತ್ ಸಿಂಗ್ ಚೌಹಾಣ್ (26) ಮತ್ತು ಬೈರು ಸಿಂಗ್ ಚೌಹಾಣ್ (26) ಬಂಧಿತರು. ಮತ್ತೊಬ್ಬ ಆರೋಪಿ ರಮೇಶ್ ಕುಮಾರ್ ಪಂಡಿತ್ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ನಗರದಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದರು.
ಮೊದಲ ಆರೋಪಿ ಹನುಮಂತ್ ಸಿಂಗ್ ವಿರುದ್ಧ ಈ ಹಿಂದೆ ದಾವಣಗೆರೆಯಲ್ಲಿಯೂ ಕಳ್ಳತನ ಪ್ರಕರಣ ದಾಖಲಾಗಿದೆ. ಆರೋಪಿಗಳಿಂದ 20 ಕೆ.ಜಿ ಬೆಳ್ಳಿ, ಕಾರು ವಶಕ್ಕೆ ಪಡೆದಿದ್ದೇವೆ. 10 ಕೆ.ಜಿ ಬೆಳ್ಳಿಯನ್ನು ಕರಗಿಸಿ ಮಾರಾಟ ಮಾಡಿದ್ದು ಇದರಿಂದ ಗಳಿಸಿದ್ದ ₹13 ಲಕ್ಷವನ್ನೂ ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದರು.
ಮೂರು ದಿನ ಎಯು ಚಿನ್ನಾಭರಣ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನ ನಡೆಸಿದ್ದಾರೆ. ಪೊಲೀಸರಿಗೆ ಮೊದಲ ದಿನ ಆರೋಪಿಗಳು ಎದುರಾಗಿದ್ದಾರೆ. ಆಗ ‘ಯಾರು ನೀವು’ ಎಂದು ಪ್ರಶ್ನಿಸಿದಾಗ ‘ನಾವು ಈಶಾ ಯೋಗ ಕೇಂದ್ರಕ್ಕೆ ಬಂದಿದ್ದೇವೆ’ ಎಂದು ತಿಳಿಸಿದ್ದರು. ಎರಡನೇ ದಿನ ಪೊಲೀಸ್ ವಾಹನ ನೋಡಿ ವಾಪಸ್ಸಾಗಿದ್ದರು. ಮೂರನೇ ಬಾರಿ ಕೃತ್ಯ ಎಸಗಿದ್ದಾರೆ ಎಂದು ಹೇಳಿದರು.
ಚಿನ್ನಾಭರಣ ಅಂಗಡಿಯ ಸುತ್ತಮುತ್ತ ಯಾವ ರೀತಿಯ ವ್ಯವಸ್ಥೆ ಇದೆ. ಸಿಸಿಟಿವಿ ಕ್ಯಾಮೆರಾಗಳು ಎಲ್ಲಿವೆ ಎನ್ನುವ ಎಲ್ಲ ಮಾಹಿತಿ ಸಹ ಕಲೆ ಹಾಕಿದ್ದಾರೆ. ಆ ಸುತ್ತಮುತ್ತ ಓಡಾಟ ಸಹ ನಡೆಸಿದ್ದಾರೆ ಎಂದು ತಿಳಿಸಿದರು.
ಎಎಸ್‌ಪಿ ಜಗನ್ನಾಥ್ ರೈ, ಡಿವೈಎಸ್‌ಪಿ ಪ್ರಕಾಶ್ ಆರ್., ಶಿವಕುಮಾರ್ ಎಸ್. ಮಾರ್ಗದರ್ಶನದಲ್ಲಿ ಸಿಪಿಐ ರಂಜನ್ ಕುಮಾರ್, ಸೂರ್ಯಪ್ರಕಾಶ್, ಸುರೇಶ್ ಎಂ.ಎನ್., ಶ್ರೀನಿವಾಸ್, ಪಿಎಸ್‌ಐ ಅಮರ್ ಎಂ.ಎಸ್., ಶರಣಪ್ಪ ಕೆ.ಬಿ., ಹರೀಶ್ ಕುಮಾರ್ ಡಿ., ಜಗದೀಶ್ ರೆಡ್ಡಿ, ಪುನೀತ್ ನಂಜರಾಯ್, ಹರೀಶ್, ರತ್ನಾಬಾಯಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.