ADVERTISEMENT

‘ನಿವೇಶನ: ಕಾನೂನು, ಜನರ ನಡುವೆ ಹೋರಾಟ; ಡಾ.ಕೆ.ಸುಧಾಕರ್

ಸಚಿವ ಮತ್ತು ಶಾಸಕರ ವಿರುದ್ಧ ಸಂಸದ ಡಾ.ಕೆ.ಸುಧಾಕರ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2025, 15:51 IST
Last Updated 3 ಮಾರ್ಚ್ 2025, 15:51 IST
ಚಿಕ್ಕಬಳ್ಳಾಪುರದಲ್ಲಿನ ನಿವೇಶನಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಮಾಧ್ಯಮಗಳಿಗೆ ತೋರಿಸಿದ ಸಂಸದ ಡಾ.ಕೆ.ಸುಧಾಕರ್
ಚಿಕ್ಕಬಳ್ಳಾಪುರದಲ್ಲಿನ ನಿವೇಶನಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಮಾಧ್ಯಮಗಳಿಗೆ ತೋರಿಸಿದ ಸಂಸದ ಡಾ.ಕೆ.ಸುಧಾಕರ್   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಅವಧಿಯಲ್ಲಿ ನೀಡಿರುವ 22 ಸಾವಿರ ನಿವೇಶನಗಳ ವಿಚಾರವಾಗಿ ಕಾನೂನಾತ್ಮಕವಾಗಿ ಮತ್ತು ಜನರ ನಡುವೆ ಹೋರಾಟ ರೂಪಿಸಲಾಗುವುದು ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು. 

ನಗರದಲ್ಲಿ ಸೋಮವಾರ ನಡೆದ ಜನತಾದರ್ಶನದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರಿಗೆ ಪ್ರಚಾರ ಮುಖ್ಯ, ಕೆಲವರಿಗೆ ಕೆಲಸ ಮುಖ್ಯ. ಬಿಜೆಪಿ ಸರ್ಕಾರ ಮತ್ತು ನಾನು ಶಾಸಕನಾಗಿದ್ದ ಅವಧಿಯಲ್ಲಿ 22 ಸಾವಿರ ನಿವೇಶನ ವಿತರಿಸಿದ್ದೇವೆ. ಲೇಔಟ್‌ಗಳು ನಿರ್ಮಾಣವಾಗಿವೆ. ಕಲ್ಲುಗಳನ್ನು ಹಾಕಲಾಗಿದೆ. ಖಾತೆ ಕೊಡಬೇಕಿದೆ. ಆದರೆ ಇಲ್ಲಿನ ಜನಪ್ರತಿನಿಧಿಗಳು ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಈ ವಿಚಾರವಾಗಿ ತಾರ್ಕಿಕ ಅಂತ್ಯ ಕಾಣಿಸುವೆ. ಶೀಘ್ರದಲ್ಲಿಯೇ ಹೋರಾಟದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡುವೆ. ಗ್ರಾಮಸಭೆಗಳನ್ನು ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದೇವೆ. ಎಲ್ಲ ಕಡೆಯೂ ಕಾನೂನು ರೀತಿ ನಡೆದುಕೊಂಡಿದ್ದೇವೆ. ಚಿಕ್ಕಬಳ್ಳಾಪುರದಲ್ಲಿ 22 ಸಾವಿರ ನಿವೇಶನ ನೀಡಿಯೂ 300 ಎಕರೆ ಜಮೀನು ಉಳಿಯುತ್ತದೆ. ರಾಜೀವ್ ಗಾಂಧಿ ವಸತಿ ನಿಗಮವು ನಿವೇಶನಗಳನ್ನು ವಾಪಸ್ ಪಡೆದಿಲ್ಲ. ಇದೆಲ್ಲವೂ ಸುಳ್ಳು. ರಾಜಕೀಯ ದುರುದ್ದೇಶದಿಂದ ನಿವೇಶನಗಳನ್ನು ನೀಡುತ್ತಿಲ್ಲ ಎಂದು ಹೇಳಿದರು.

ADVERTISEMENT

ನೀರಾವರಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಹಾಗೂ ಸಚಿವರಿಗೆ ಪತ್ರ ಬರೆದಿದ್ದೇನೆ. ಸೌಜನ್ಯಕ್ಕೂ ಪ್ರತಿಕ್ರಿಯಿಸಿಲ್ಲ. ನಮ್ಮ ಆಡಳಿತದಲ್ಲಿ ಈ ರೀತಿ ಇರಲಿಲ್ಲ. ರಾಜ್ಯದ ಬಜೆಟ್ ಬಗ್ಗೆ ಯಾವ ನಿರೀಕ್ಷೆಯನ್ನೂ ಇಟ್ಟುಕೊಂಡಿಲ್ಲ. ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟು ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದಾರೆ. ಈ ಬಗ್ಗೆ ಉಗ್ರಪ್ಪ ಅವರಂತಹ ಕಾಂಗ್ರೆಸ್ ನಾಯಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇಂತಹವರು ದಲಿತ ಸಮುದಾಯದ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.

ನಂದಿಬೆಟ್ಟಕ್ಕೆ ರೋಪ್ ವೇ ನಿರ್ಮಾಣದ ಬಗ್ಗೆ ನಾವು ಭೂಮಿ ಪೂಜೆ ನೆರವೇರಿಸಿದ್ದೆವು. ಇವರು ಅನುದಾನ ನೀಡಿ ಕಾಮಗಾರಿಗೆ ವೇಗ ನೀಡಬೇಕಾಗಿತ್ತು. ಆದರೆ ಇಚ್ಛಾಶಕ್ತಿ ಕೊರತೆಯಿಂದ ಅನುದಾನ ನೀಡಲಿಲ್ಲ. ಈಗ ಪರಿಸರವಾದಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದರು.

ರಂಗ ಮಂದಿರದ ಹೆಸರನ್ನು ಕನ್ನಡ ಭವನ ಎಂದು ಬದಲಾವಣೆ ಮಾಡಿದ್ದೇ ಉಸ್ತುವಾರಿ ಸಚಿವರ ಸಾಧನೆ. ಈಗ ಬಣ್ಣ ಹೊಡೆಸಿ, ಹೆಸರು ಬದಲಾಯಿಸಿ ಉದ್ಘಾಟಿಸುತ್ತಿದ್ದಾರೆ. ಇದು ಚಿಕ್ಕಬಳ್ಳಾಪುರವನ್ನು ಅಭಿವೃದ್ಧಿ ಮಾಡುವ ವಿಧಾನ ಎಂದು ವ್ಯಂಗ್ಯವಾಡಿದರು.

ನಮ್ಮ ಅವಧಿಯಲ್ಲಿ ನಗರೋತ್ಥಾನ ಯೋಜನೆಗೆ ಹಣ ನೀಡಿದ್ದೇವೆ. ಆದರೆ ಇಂದಿಗೂ ಕಾಮಗಾರಿ ನಡೆಸಲು ಇಲ್ಲಿನ ಶಾಸಕರು ಮತ್ತು ಸಚಿವರಿಗೆ ಯೋಗ್ಯತೆ ಇಲ್ಲ.  ನಗರೋತ್ಥಾನ ನಮ್ಮ ಯೋಜನೆ ಎಂದು ಪ್ರಚಾರ ಪಡೆಯುತ್ತಾರೆ ಎಂದರು. 

‘ಶಾಸಕರು ಗುತ್ತಿಗೆದಾರ ಸೇರಿ ಹಣ ಮಾಡುತ್ತಿದ್ದಾರೆ’

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ₹ 6 ಕೋಟಿ ಸಿಆರ್‌ಎಫ್ ಅನುದಾನ ನೀಡಿದೆ. ಬಾಗೇಪಲ್ಲಿ ಮತ್ತು ಗೌರಿಬಿದನೂರು ಶಾಸಕರು ಹೊಸ ರಸ್ತೆ ನಿರ್ಮಾಣಕ್ಕೆ ಈ ಹಣ ಮೀಸಲಿಟ್ಟಿದ್ದಾರೆ. ಆದರೆ ಚಿಕ್ಕಬಳ್ಳಾಪುರ ಶಾಸಕರು ಉತ್ತಮವಾಗಿರುವ ರಸ್ತೆಯ ಮೇಲೆಯೇ ಡಾಂಬರ್ ಹಾಕಿಸುತ್ತಿದ್ದಾರೆ. ಶಾಸಕರು ಮತ್ತು ಗುತ್ತಿಗೆದಾರರು ಸೇರಿ ಹಣ ಮಾಡುತ್ತಿದ್ದಾರೆ ಎಂದು ಡಾ.ಕೆ.ಸುಧಾಕರ್ ಆರೋಪಿಸಿದರು. ನಾಮಗೊಂಡ್ಲು ಗ್ರಾಮದಿಂದ ಮಂಚೇನಹಳ್ಳಿವರೆಗಿನ ರಸ್ತೆ ಅಭಿವೃದ್ಧಿಗೆ ₹ 6 ಕೋಟಿ ನೀಡಿದ್ದಾರೆ. ಆದರೆ ಇಲ್ಲಿ ಎರಡೂವರೆ ಕೋಟಿಗೆ ರಸ್ತೆ ಆಗುತ್ತದೆ. ಉತ್ತಮವಾಗಿರುವ ರಸ್ತೆಯ ಮೇಲೆಯೇ ಡಾಂಬರ್ ಹಾಕಿಸುತ್ತಿದ್ದಾರೆ. ನಾವು ಇಂತಹ ಕೆಲಸಗಳನ್ನು ಮಾಡಿಲ್ಲ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.