ADVERTISEMENT

ಚಿಕ್ಕಬಳ್ಳಾಪುರ | ಸಾಮಾಜಿಕ, ಆರ್ಥಿಕ ಸಮೀಕ್ಷೆ: 3.20 ಲಕ್ಷ ಕುಟುಂಬ ಜಿಯೊ ಟ್ಯಾಗ್

ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ; ಜಿಲ್ಲೆಯಲ್ಲಿ 3073 ಸಿಬ್ಬಂದಿ ನೇಮಕ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 7:04 IST
Last Updated 21 ಸೆಪ್ಟೆಂಬರ್ 2025, 7:04 IST
ಪಿ.ಎನ್.ರವೀಂದ್ರ
ಪಿ.ಎನ್.ರವೀಂದ್ರ   

ಚಿಕ್ಕಬಳ್ಳಾಪುರ: ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಪ್ರಯುಕ್ತ ಜಿಲ್ಲೆಯ 3,69,000 (ಆರ್.ಆರ್ ಸಂಖ್ಯೆ ಹೊಂದಿರುವ) ಕುಟುಂಬಗಳ ಪೈಕಿ 3,20,882 ಆರ್.ಆರ್ ಸಂಖ್ಯೆಯನ್ನು ಜಿಯೊ ಟ್ಯಾಗ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.

ಪ್ರತಿ ಗಣತಿದಾರರಿಗೆ 120 ರಿಂದ 150 ಕುಟುಂಬಗಳಂತೆ ಬ್ಲಾಕ್ ವಿಂಗಡಿಸಿ ಹಂಚಿಕೆ ಮಾಡಲಾಗುವುದು. ಪ್ರತಿ 20 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರು ಇರುತ್ತಾರೆ. ಎಲ್ಲಾ ಮೇಲ್ವಿಚಾರಕರು ಸಮೀಕ್ಷೆಯ ಪ್ರಗತಿಯ ವಿವರವನ್ನು ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರಿಗೆ ಪ್ರತಿ ದಿನ ವರದಿ ಮಾಡಬೇಕು ಎಂದು ಸೂಚಿಸಿದ್ದಾರೆ.

ಸಮೀಕ್ಷೆ ಸುಗಮವಾಗಿ ನಡೆಯಲು ಗ್ರಾಮ ಪಂಚಾಯಿತಿವಾರು ಮತ್ತು ನಗರ ಪ್ರದೇಶವಾರು ಪ್ರತ್ಯೇಕ ತಂಡ ರಚಿಸಿ ಈ ತಂಡವು ಮೇಲುಸ್ತುವಾರಿ ಕಾರ್ಯ ನಿರ್ವಹಿಸಲು ಕ್ರಮವಹಿಸಲಾಗಿದೆ ಎಂದಿದ್ದಾರೆ.

ADVERTISEMENT

ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22ರಿಂದ ಅ.7ರ ವರೆಗೆ ಸಮೀಕ್ಷೆ ನಡೆಯಲಿದೆ. ಈ ಸಂಬಂಧ ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಎರಡು ಸುತ್ತಿನ ತರಬೇತಿ ಸಹ ನೀಡಲಾಗಿದೆ ಎಂದಿದ್ದಾರೆ.

ಗ್ರಾಮ ಪಂಚಾಯಿತಿಗಳಲ್ಲಿ ಸಮೀಕ್ಷೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ. ನಗರ ಪ್ರದೇಶದಲ್ಲಿ ಯೋಜನಾ ನಿರ್ದೇಶಕರು, ನಗರಾಭಿವೃದ್ಧಿ ಕೋಶ ಇವರಿಂದ ಸಮೀಕ್ಷೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 974 ಆಶಾ ಕಾರ್ಯಕರ್ತೆಯರಿಂದ ಸಮೀಕ್ಷೆಯ ನಮೂನೆ ಪ್ರತಿ ಮನೆಗೆ ತಲುಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

‘ಸಮೀಕ್ಷೆ ಪೂರ್ಣವಾಗುವವರೆಗೆ ರಜೆ ಇಲ್ಲ’

ಸಮೀಕ್ಷೆ ಪೂರ್ಣಗೊಳ್ಳುವವರೆಗೆ ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಿರುವ ಶಿಕ್ಷಕರು ಅಧಿಕಾರಿಗಳು ಸಿಬ್ಬಂದಿ ಯಾವುದೇ ರಜೆ ಪಡೆಯಬಾರದು. ಸಾರ್ವತ್ರಿಕ ರಜಾ ದಿನಗಳಲ್ಲಿಯೂ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.