ADVERTISEMENT

ಚಿಕ್ಕಬಳ್ಳಾಪುರ: 2025ರಲ್ಲಿ ಘಟಿಸಿದ ಪ್ರಮುಖ ವಿದ್ಯಮಾನಗಳಿವು

2025ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಪ್ರಮುಖ ವಿದ್ಯಮಾನಗಳು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 7:22 IST
Last Updated 24 ಡಿಸೆಂಬರ್ 2025, 7:22 IST
ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಮೆರವಣಿಗೆ
ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಮೆರವಣಿಗೆ   

ಚಿಕ್ಕಬಳ್ಳಾಪುರ: ಪ್ರಸಿದ್ಧ ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆ, ಜಿಲ್ಲಾ 10ನೇ ಸಾಹಿತ್ಯ ಸಮ್ಮೇಳನ, ಕನ್ನಡ ಭವನ ಉದ್ಘಾಟನೆ...2025ರ ಚಿಕ್ಕಬಳ್ಳಾಪುರ ತಾಲ್ಲೂಕಿನ ಹಿನ್ನೋಟವನ್ನು ನೋಡುವಾಗ ಕಂಡು ಬರುವ ಪ್ರಮುಖ ವಿದ್ಯಮಾನ. 

2025ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರದಲ್ಲಿ ಸಿಹಿ ಕಹಿಯ ನಾನಾ ವಿದ್ಯಮಾನಗಳು ನಡೆದಿವೆ. 

ತಾಲ್ಲೂಕಿನ ಆವಲಗುರ್ಕಿ ಬಳಿಯ ಈಶಾ ಯೋಗ ಕೇಂದ್ರದಲ್ಲಿ 2025ರ ಮಕರ ಸಂಕ್ರಾಂತಿಯ ದಿನ 54 ಅಡಿ ಎತ್ತರದ ಮಹಾಶೂಲ ಅನಾವರಣಗೊಂಡಿತು. ಸದ್ಗುರು ಜಗ್ಗಿ ವಾಸುದೇವ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳ ಭಕ್ತರು ಮತ್ತು ಗಣ್ಯರು ಸಾಕ್ಷಿಯಾದರು.

ADVERTISEMENT

ಮುದ್ದೇನಹಳ್ಳಿಯ ಸತ್ಯಸಾಯಿ ಆಸ್ಪತ್ರೆಯಲ್ಲಿ ನಡೆದ ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಯ ಐದನೇ ಶಿಬಿರದಲ್ಲಿ 45ಕ್ಕೂ ಹೆಚ್ಚು ಮಕ್ಕಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಚಿಕ್ಕಬಳ್ಳಾಪುರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಯಲುವಳ್ಳಿ ರಮೇಶ್ ನೇಮಕವಾದರು.

ವರ್ಷದ ಆರಂಭದಲ್ಲಿಯೇ ಅಂದರೆ ಜನವರಿಯಲ್ಲಿ ಜಿಲ್ಲಾ ಬಿಜೆಪಿಯಲ್ಲಿ  ರಾಜಕಾರಣ ಕದಡಿತು. ಯುವ ಮುಖಂಡ ಸಂದೀಪ್ ರೆಡ್ಡಿ ಅವರನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಇದು ಒಂದೆಡೆ ಸಂಭ್ರಮಾಚರಣೆ, ಮತ್ತೊಂದು ಕಡೆ ಧಿಕ್ಕಾರದ ಘೋಷಣೆಗೂ ಕಾರಣವಾಯಿತು.

ಸಂದೀಪ್ ಬಿ.ರೆಡ್ಡಿ ಅವರ ನೇಮಕಕ್ಕೆ ಸಂಸದ ಡಾ.ಕೆ.ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದರು. ಹೀಗೆ ಬಿಜೆಪಿಯಲ್ಲಿನ ಪರ ವಿರೋಧದ ಬಣ ರಾಜಕಾರಣ ತಾರಕಕ್ಕೇರಿತು. ಪಕ್ಷದ ವರಿಷ್ಠರು ನೇಮಕದ ಆದೇಶ ತಡೆಹಿಡಿದರು. ಕೆಲವು ತಿಂಗಳ ತರುವಾಯ ಜಿಲ್ಲಾ ಅಧ್ಯಕ್ಷರಾಗಿ ಸೀಕಲ್ ರಾಮಚಂದ್ರ ಗೌಡ ನೇಮಕವಾದರು. ಹೀಗೆ 2025ರ ಜಿಲ್ಲಾ ಬಿಜೆಪಿಯ ಬಣಗಳ ಜಗಳ ಬೀದಿಗೆ ಬಂದಿತು.

ಜಿಲ್ಲೆಯಲ್ಲಿ ದಲಿತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯು ಜ.20ರಿಂದ ನಗರದ ಉಪವಿಭಾಗಾಧಿಕಾರಿ ಕಚೇರಿ ಸೇರಿದಂತೆ 7 ತಾಲ್ಲೂಕು ಕೇಂದ್ರಗಳಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಿತು.

ಚಿತ್ರಾವತಿ ನದಿ ಪುನಶ್ಚೇತನ ತಂಡವು ಜಿಲ್ಲೆಯ ಪ್ರಮುಖ ನದಿಗಳಲ್ಲಿ ಒಂದಾಗಿದ್ದ ಚಿತ್ರಾವತಿ ನದಿ  ಪಾತ್ರದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಿದ್ಧಗೊಳಿಸಲು ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅವರ ನೇತೃತ್ವದ ತಂಡ ರಚಿಸಿತು. ‌ಜೆಡಿಎಸ್ ಮುಖಂಡ ತಾಲ್ಲೂಕಿನ ತಮ್ಮನಾಯಕನಹಳ್ಳಿಯ ವೆಂಕಟೇಶ್ ಕೊಲೆ ಸಹ ಜರುಗಿತು.

ಫೆಬ್ರುವರಿಯಲ್ಲಿ ತಾಲ್ಲೂಕಿನ ವರದಹಳ್ಳಿಯ ಹಕ್ಕಿಜ್ವರ ರಾಜ್ಯ ಮಟ್ಟದಲ್ಲಿ ಸದ್ದು ಮಾಡಿತು. ಗ್ರಾಮದ ಕೋಳಿಗಳಲ್ಲಿ ಹಕ್ಕಿಜ್ವರ ಕಂಡು ಬಂದಿತು. ಈ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಹಕ್ಕಿಜ್ವರ ಕಾಣಿಸಿಕೊಂಡಿತು. ಗ್ರಾಮದಲ್ಲಿನ ಕೋಳಿಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಲಾಯಿತು.

ಬಾಗೇಪಲ್ಲಿ ತಾಲ್ಲೂಕಿನ ಸಹಾಯಕ ಕೃಷಿ ಅಧಿಕಾರಿ ಶಂಕರಯ್ಯನನ್ನು ಲೋಕಾಯುಕ್ತ ಪೊಲೀಸರು ಚಿಕ್ಕಬಳ್ಳಾಪುರ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯಲ್ಲಿ ದಾಳಿ ನಡೆಸಿ ವಶಕ್ಕೆ ಪಡೆದರು. ಅವರ ಬ್ಯಾಗಿನಲ್ಲಿ ₹ 13 ಲಕ್ಷ ಪತ್ತೆಯಾಯಿತು.

30 ವರ್ಷಗಳಿಂದ ನಡೆಯದ ನಗರದ ಸಂತೆ ಮಾರುಕಟ್ಟೆಯಲ್ಲಿನ ನಗರಸಭೆ ಮಳಿಗೆಗಳ ಹರಾಜು ಪ್ರಕ್ರಿಯೆಯು ಈ ವರ್ಷ ನಡೆಯಿತು.

ಮೇ ಕನ್ನಡ ಭವನ ಉದ್ಘಾಟನೆ: ಸುಮಾರು ಒಂದು ದಶಕದಿಂದಲೂ ಕುಂಟುತ್ತ ಸಾಗುತ್ತಿದ್ದ ಜಿಲ್ಲಾ ಕನ್ನಡ ಭವನವು ಮೇನಲ್ಲಿ ಉದ್ಘಾಟನೆ ಆಯಿತು. ಕನ್ನಡ ಭವನ ಉದ್ಘಾಟನೆಯ ಜೊತೆಗೆ ಸಾಹಿತಿ ಗೋಪಾಲಗೌಡ ಕಲ್ಪಮಂಜಲಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವೂ ನಡೆಯಿತು.

ಜಿಲ್ಲೆಯು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 63.20 ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ 22ನೇ ಸ್ಥಾನಕ್ಕೆ ಕುಸಿಯಿತು. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಫಲಿತಾಂಶದಲ್ಲಿ ಭಾರಿ ಕುಸಿತ ಕಂಡಿತು. 2025ರಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿನ ಕಳಪೆ ಫಲಿತಾಂಶ ತೀವ್ರ ಚರ್ಚೆಗೆ ಕಾರಣವಾಯಿತು.  

ಜು.2ರಂದು ಐತಿಹಾಸಿಕ ನಂದಿಗಿರಿಧಾಮದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಬೆಂಗಳೂರು ವಿಭಾಗಕ್ಕೆ ಸಂಬಂಧಿಸಿದಂತೆ ನಡೆದ ಸಭೆ ಇದಾಗಿತ್ತು. ಈ ಸಭೆಯು ಮೂಲಕ ನಂದಿಗಿರಿಧಾಮ ಪ್ರಮುಖ ಸಭೆಗೆ ಸಾಕ್ಷಿ ಆಯಿತು. ಇದೇ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ಗಿರಿಧಾಮದಲ್ಲಿ ನಡೆಯಿತು. 

ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ 100 ದಿನಗಳ ವಿಶ್ವಸಾಂಸ್ಕೃತಿಕ ಉತ್ಸವ, ನಂದಿಗಿರಿಧಾಮದ ಪ್ರಸಿದ್ಧ ಟಿಪ್ಪು ಬೇಸಿಗೆ ಅರಮನೆಯ ಮೇಲೆ ಅಂತರರಾಷ್ಟ್ರೀಯ ಪಾತಕಿ ಲಾರೆನ್ಸ್ ಬಿಷ್ಣೋಯ್ ಹೆಸರು ಬರೆದದ್ದು, ಅರೂರು ಬಳಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರ ಬಳಿ ಇದ್ದ ₹ 55 ಲಕ್ಷ ದರೋಡೆ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಮೊದಲ ಸಾಮಾನ್ಯ ಸಭೆ, ಕಾರ್ಯಕ್ರಮ ಅನುಷ್ಠಾನದ ಹಿನ್ನೆಲೆಯಲ್ಲಿ ಜಿಲ್ಲಾ ಪಶುಸಂಗೋಪನಾ ಇಲಾಖೆ ರಾಜ್ಯ ಮಟ್ಟದಲ್ಲಿ ಮೊದಲ ಸ್ಥಾನ ಪಡೆದುದು 2025ರ ಪ್ರಮುಖ ಹೆಜ್ಜೆ ಗುರುತುಗಳು.

140 ಕೆ.ಜಿ ಬೆಳ್ಳಿ ಕಳ್ಳತನ

ವರ್ಷಾಂತ್ಯದ ಡಿ.23ರಂದು ಚಿಕ್ಕಬಳ್ಳಾಪುರ ಬಿ.ಬಿ ರಸ್ತೆಯಲ್ಲಿರುವ ಎಯು ಚಿನ್ನಾಭರಣ ಮಾರಾಟ ಮಳಿಗೆ ಅಂಗಡಿಗೆ ಕನ್ನ ಹಾಕಿದ ದುಷ್ಕರ್ಮಿಗಳು 140 ಕೆ.ಜಿ ಬೆಳ್ಳಿ ಕಳ್ಳತನ ಮಾಡಿದರು. ಇದರ ಮೌಲ್ಯ ₹3 ಕೋಟಿ ಎಂದು ಅಂದಾಜಿಸಲಾಗಿದೆ. ಚಿಕ್ಕಬಳ್ಳಾಪುರ ಇತಿಹಾಸದಲ್ಲಿಯೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳ್ಳಿ ಕಳ್ಳತನ ನಡೆದಿರುವುದು ಇದೇ ಮೊದಲು.

ಹೆಲ್ಮೆಟ್‌ ಕಡ್ಡಾಯ

ಜಿಲ್ಲೆಯಾದ್ಯಂತ ಡಿ.12ರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ.  ಜಿಲ್ಲೆಯಾದ್ಯಂತ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುವವರಿಗೆ ದಂಡ ಸಹ ವಿಧಿಸಲಾಗುತ್ತಿದೆ.

ಹಕ್ಕಿಜ್ವರ ಹಿನ್ನೆಲೆಯಲ್ಲಿ ವರದಹಳ್ಳಿಯಲ್ಲಿ ಕೋಳಿಗಳನ್ನು ಸಾಮೂಹಿಕವಾಗಿ ಹೂಳಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.