ADVERTISEMENT

ಚಿಕ್ಕಬಳ್ಳಾಪುರ | ಸಮೀಕ್ಷೆಯಲ್ಲಿ ತಾಂತ್ರಿಕ ಅವ್ಯವಸ್ಥೆ; ಸಮೀಕ್ಷಕರ ಪ್ರತಿಭಟನೆ

ಚಿಕ್ಕಬಳ್ಳಾಪುರ ತಾಲ್ಲೂಕು ಕಚೇರಿ ಎದುರು ಶಿಕ್ಷಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 6:24 IST
Last Updated 26 ಸೆಪ್ಟೆಂಬರ್ 2025, 6:24 IST
ಲೋಪಗಳನ್ನು ಸರಿಪಡಿಸುವಂತೆ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ನೇಮಕವಾಗಿರುವ ಶಿಕ್ಷಕರು ಚಿಕ್ಕಬಳ್ಳಾಪುರ ತಾಲ್ಲೂಕು ಕಚೇರಿ ಎದುರು ಪ್ರತಿಭಟಿಸಿದರು
ಲೋಪಗಳನ್ನು ಸರಿಪಡಿಸುವಂತೆ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ನೇಮಕವಾಗಿರುವ ಶಿಕ್ಷಕರು ಚಿಕ್ಕಬಳ್ಳಾಪುರ ತಾಲ್ಲೂಕು ಕಚೇರಿ ಎದುರು ಪ್ರತಿಭಟಿಸಿದರು   

ಚಿಕ್ಕಬಳ್ಳಾಪುರ: ದೋಷಪೂರಿತ ತಾಂತ್ರಿಕತೆಯಿಂದ ದಿನಕ್ಕೊಂದು ಬದಲಾವಣೆ ಮಾಡಬೇಕಿದೆ. ಶಿಕ್ಷಕರು ಕರ್ತವ್ಯ ನಿರ್ವಹಿಸುವ ಅಥವಾ ವಾಸಿಸುವ ಸ್ಥಳದಲ್ಲಿಯೇ ಸಮೀಕ್ಷೆಗೆ ನಿಯೋಜಿಸಬೇಕು. ಆದರೆ ಅಪರಿಚಿತ ಪ್ರದೇಶಗಳಿಗೆ ನಿಯೋಜಿಸಲಾಗಿದೆ ಎಂದು ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ನೇಮಕವಾಗಿರುವ ಶಿಕ್ಷಕರು ನಗರದ ತಾಲ್ಲೂಕು ಕಚೇರಿ ಎದುರು ಗುರುವಾರ ಪ್ರತಿಭಟಿಸಿದರು.

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ವೇಳೆ ಎದುರಾಗಿರುವ ಲೋಪಗಳನ್ನು ಸರಿಪಡಿಸಬೇಕು. ಶಿಕ್ಷಕರು ಕೆಲಸ ಮಾಡುವ ಗ್ರಾಮಗಳನ್ನು ಬಿಟ್ಟು ಬೇರೆ ಗ್ರಾಮಗಳಿಗೆ ಗಣತಿ ಕಾರ್ಯಕ್ಕೆ ನಿಯೋಜಿಸಲಾಗಿದೆ. ಮನೆಗಳನ್ನು ಗುರುತಿಸುವಲ್ಲಿ ತೀವ್ರ ತೊಡಕು ಉಂಟಾಗುತ್ತಿದೆ. ಸಮಯ ವ್ಯರ್ಥವಾಗುತ್ತಿದೆ. ಯುಎಚ್‌ಐಡಿ ಮೂಲಕ ಮನೆಗಳನ್ನು ಗುರುತಿಸಲು ಅಸಾಧ್ಯವಾಗಿದೆ. ಜಿಯೊ ಟ್ಯಾಗ್ ಮನೆಗಳ ಬಳಿ ಸರಿಯಾಗಿ ಗುರುತಾಗುತ್ತಿಲ್ಲ ಎಂದು ದೂರಿದರು.

ಮಳೆ ಮತ್ತಿತರ ಕಾರಣದಿಂದ ಯುಎಚ್‌ಐಡಿ ಲಭ್ಯವಾಗುತ್ತಿಲ್ಲ. ಶಿಕ್ಷಕ ಅಥವಾ ವಿಶೇಷ ಶಿಕ್ಷಕರನ್ನು ಅವೈಜ್ಞಾನಿಕವಾಗಿ ನಿಯೋಜಿಸಲಾಗಿದೆ. ಗಣತಿ ಮಾಡುತ್ತಿರುವ ಸ್ಥಳದಿಂದ ಹಲವು ಕಡೆ ಹೋಗಿ ಮತ್ತೆ ಅದೇ ಸ್ಥಳಕ್ಕೆ ಬರಬೇಕಾದ ತಾಂತ್ರಿಕ ಸಮಸ್ಯೆಗಳು ಇವೆ. 

ADVERTISEMENT

ಯುಎಚ್‌ಐಡಿ ಅಥವಾ ಮನೆ ಯಜಮಾನನ ಹೆಸರು, ಜನವಸತಿ ಪ್ರದೇಶ, ಮೊಬೈಲ್ ನಂಬರ್, ಜನವಸತಿ ಪ್ರದೇಶದ ‌ನಕ್ಷೆ ನೀಡಬೇಕು. ತಾಂತ್ರಿಕ ತೊಡಕುಗಳನ್ನು ನಿವಾರಿಸಬೇಕು. ವಿನಾಯಿತಿಗೆ ಅರ್ಹರಿರುವ ಶಿಕ್ಷಕರನ್ನು ಪಟ್ಟಿಯಿಂದ ಕೈ ಬಿಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.