ADVERTISEMENT

ಚಿಕ್ಕಬಳ್ಳಾಪುರ| ಕೇಂದ್ರದಿಂದ ಕಾರ್ಮಿಕರ ಹಕ್ಕಿನ ದಮನ: ಎಸ್‌. ವರಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 6:56 IST
Last Updated 1 ಫೆಬ್ರುವರಿ 2026, 6:56 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಮಿಕ ರೈತ ಸಮಾವೇಶದಲ್ಲಿ ಪಾಲ್ಗೊಂಡಿದ್ದವರು
ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಮಿಕ ರೈತ ಸಮಾವೇಶದಲ್ಲಿ ಪಾಲ್ಗೊಂಡಿದ್ದವರು   

ಚಿಕ್ಕಬಳ್ಳಾಪುರ: ನಾಲ್ಕು ಕಾರ್ಮಿಕ ಕೋಡ್‌ಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು. ವಿ.ಬಿ. ಜಿ ರಾಮ್ ಜಿ, ವಿಮಾ ತಿದ್ದುಪಡಿ ಕಾಯ್ದೆ, ಶಾಂತಿ ಕಾಯ್ದೆಗಳನ್ನು ರದ್ದುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಫೆ.12ರಂದು ಟ್ರೇಡ್‌ ಯುನಿಯನ್‌ ಜಂಟಿ ಸಮಿತಿ (ಜೆಸಿಟಿಯು)- ಸಂಯುಕ್ತ ಹೋರಾಟ ಕರ್ನಾಟಕ (ಎಸ್‌ಎಚ್‌ಕೆ)ದಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ. 

ಈ ಹಿನ್ನೆಲೆಯಲ್ಲಿ ಶನಿವಾರ ನಗರದಲ್ಲಿ ರೈತ ಕಾರ್ಮಿಕರ ಜಿಲ್ಲಾ ಸಮಾವೇಶ ನಡೆಯಿತು.

ಸಮಾವೇಶ ಉದ್ಘಾಟಿಸಿದ ಸಿಐಟಿಯು ಅಧ್ಯಕ್ಷೆ ಎಸ್‌. ವರಲಕ್ಷ್ಮಿ ಮಾತನಾಡಿ, ‘ಮನುಷ್ಯ ಸ್ವತಂತ್ರ ಜೀವಿ. ಪ್ರತಿಭಟಿಸುವುದು ನೈಸರ್ಗಿಕ ಹಕ್ಕು. ಆದರೆ ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆಗಳ ಮೂಲಕ ಪ್ರತಿಭಟನೆಯ ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ ಎಂದು ಆರೋಪಿಸಿದರು.

ADVERTISEMENT

ಈ ಕಾರ್ಮಿಕ ಕಾಯ್ದೆಗಳಲ್ಲಿ ಶೋಷಣೆ ಮಾಡುವವರಿಗೆ ಇರುವ ದಂಡನೆಗಳನ್ನು ವಾಪಸ್ ಪಡೆಯಲಾಗಿದೆ. ಕಾರ್ಮಿಕರ ವಿರುದ್ಧವೇ ಕ್ರಮಕೈಗೊಳ್ಳಲು ಅವಕಾಶವಿದೆ. ಪ್ರತಿಭಟಿಸುವ ಕಾರ್ಮಿಕರನ್ನು ಜೈಲಿಗೂ ಹಾಕುವರು ಎಂದರು.

ಉತ್ಪಾದನಾ ಕ್ಷೇತ್ರದಲ್ಲಿ ಶಾಂತಿ ಇರಬೇಕು ಎನ್ನುವ ದೃಷ್ಟಿಯಿಂದ ಈ ಕಾಯ್ದೆಗಳನ್ನು ಜಾರಿಗೊಳಿಸಲಾಗುತ್ತಿದೆ. ಇದರಿಂದ ಬಂಡವಾಳಶಾಹಿಗಳಿಗೆ ಅನುಕೂಲ. ಈ ಕೋಡ್‌ಗಳನ್ನು ಅಂಗೀಕರಿಸಬಾರದು ಎಂದು ರಾಜ್ಯ ಸರ್ಕಾರವನ್ನೂ ಕೋರಿದ್ದೆವು.  ಆದರೆ ಕಾರ್ಮಿಕರ ವಿಷಯ ಬಂದಾಗ ರಾಜ್ಯ ಸರ್ಕಾರ ಸಹ ಬಂಡವಾಳಶಾಹಿಗಳ ಪರ ನಿಲ್ಲುತ್ತಿದೆ. ಈ ವಿಚಾರವಾಗಿ ಯಾವುದೇ ಟ್ರೇಡ್ ಯೂನಿಯಗಳ ಜೊತೆಯೂ ಮಾತನಾಡಲಿಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರ ಈ ಕೋಡ್‌ಗಳ ಮೂಲಕ ಮೆದುಳಿಗೆ ಕೈ ಹಾಕಿದರೆ ರಾಜ್ಯ ಸರ್ಕಾರವು ಕಾರ್ಮಿಕರ ಬೆನ್ನು ಮೂಳೆಯನ್ನೇ ಮುರಿಯುತ್ತಿದೆ ಎಂದು ದೂರಿದರು.

ಬಂಡವಾಳಗಾರರ ಹಿತ ರಕ್ಷಣೆಯೇ ಈ ಕೋಡ್‌ಗಳ ಏಕೈಕ ಗುರಿ. ನಮ್ಮ ಹಿತರಕ್ಷಣೆ ಅಲ್ಲ. ಕಾರ್ಮಿಕ ನ್ಯಾಯಾಲಯಗಳ ಬದಲಿಗೆ ನ್ಯಾಯ ಮಂಡಳಿಗಳು ರಚನೆಯಾಗುತ್ತವೆ. ಇಲ್ಲಿ ನೇಮಕವಾಗುವವರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪ್ರತಿನಿಧಿಗಳೇ ಎಂದರು.

ದೇಶದಲ್ಲಿ ಯಾವುದೇ ಕೆಲಸ ಕಾಯಂ ಇಲ್ಲ. ಅಂದರೆ ಶಕ್ತಿ ಇದ್ದರೆ ದುಡಿಯಬೇಕು.‌ ಶಕ್ತಿ ಅನುಸಾರ ದುಡಿಯಬೇಕು ಅಷ್ಟೇ. ಕೆಲಸ ಮಾಡುವ ಫಲವನ್ನು ಅಪೇಕ್ಷಿಸಬೇಡ ಎನ್ನುವುದು ಈ ಕೋಡ್‌ಗಳ ಉದ್ದೇಶ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಮಿಕರ ರಕ್ತ ಬಸಿಯುವಂತೆ ಮಾಡುತ್ತಿವೆ ಎಂದು ದೂರಿದರು.

12ರಂದು ದೇಶದಾದ್ಯಂತ ಹಮ್ಮಿಕೊಂಡಿರುವ ಮುಷ್ಕರವನ್ನು ಚಿಕ್ಕಬಳ್ಳಾಪುರದಲ್ಲಿಯೂ ಯಶಸ್ವಿಗೊಳಿಸಬೇಕು. ಮುಷ್ಕರವನ್ನು ಬಂದ್ ಸ್ವರೂಪದಲ್ಲಿ ಮಾಡಬೇಕು ಎಂದರು.

ಸಿಪಿಎಂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರವು ಧರ್ಮದ ಆಧಾರದಲ್ಲಿ ಸಮಾಜದವನ್ನು ವಿಭಜಿಸಿದೆ. ದುಡಿಯುವ ವರ್ಗವನ್ನು ಶೋಷಿಸುವ ಕಾನೂನು ಜಾರಿಗೊಳಿಸುತ್ತಿದೆ ಎಂದರು.

ಗ್ರಾಮೀಣ ಭಾರತದಲ್ಲಿ ಬಡವರಿಗೆ ಆಸರೆ ಆಗಿದ್ದ ನರೇಗಾ ಯೋಜನೆ ರದ್ದುಗೊಳಿಸಿದರು. ಅದರ ಸ್ವರೂಪ ಬದಲಿಸಿದರು. ಇದರಿಂದ ಬಡವರಿಗೆ ಅನನುಕೂಲವಾಗಿದೆ ಎಂದರು.

ವಿದ್ಯುತ್ ಖಾಸಗೀಕರಣಕ್ಕೆ ಕೇಂದ್ರ ತೀರ್ಮಾನಿಸಿದೆ. ಇದರಿಂದ ಎಲ್ಲ ವರ್ಗದ ಜನರು ಕಷ್ಟ ಅನುಭವಿಸುವರು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

ಸಿಐಟಿಯು ಜಿಲ್ಲಾ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಸಂಘಟನೆಯ ಮುಖಂಡ ಚನ್ನರಾಯಪ್ಪ, ಸಿದ್ದಗಂಗಪ್ಪ, ಮುನಿಸ್ವಾಮಿ, ಪಾಪಣ್ಣ, ಮುನಿಯಪ್ಪ ವೇದಿಕೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.