ADVERTISEMENT

ಹಾಡು ಹಗಲಲ್ಲೇ ಮನೆಯ ಬೀಗ ಮುರಿದು ₹3 ಲಕ್ಷ, ₹3.4 ಲಕ್ಷ ಮೌಲ್ಯದ ಆಭರಣ ಕಳುವು

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 8:15 IST
Last Updated 4 ಜೂನ್ 2023, 8:15 IST

ಚಿಂತಾಮಣಿ: ತಾಲ್ಲೂಕಿನ ಕಸಬಾ ಹೋಬಳಿಯ ಸೀಕಲ್ ಗ್ರಾಮದಲ್ಲಿ ಶುಕ್ರವಾರ ಹಾಡು ಹಗಲಲ್ಲೇ ಮನೆಯ ಬೀಗ ಮುರಿದು ₹3 ಲಕ್ಷ ನಗದು ಹಾಗೂ ₹3.4 ಲಕ್ಷ ಮೌಲ್ಯದ ಬೆಲೆ ಬಾಳುವ ಆಭರಣಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.

ಗ್ರಾಮದ ನಿವಾಸಿ ನಾರಾಯಣಸ್ವಾಮಿ ಶುಕ್ರವಾರ ಬೆಳಿಗ್ಗೆ 9.30 ಗಂಟೆಗೆ ಎಂದಿನಂತೆ ಕುರಿ ಮೇಯಿಸಲು ಹೋಗಿದ್ದರು. ಪತ್ನಿ ಪಾರ್ವತಮ್ಮ ಮನೆಗೆ ಬೀಗ ಹಾಕಿಕೊಂಡು ಸಮೀಪವೇ ಇರುವ ಚೌಡೇಶ್ವರಿ ದೇವಾಲಯಕ್ಕೆ ಹೋಗಿದ್ದರು.

ಮನೆಯವರು ಹೊರ ಹೋಗುವುದನ್ನು ಕಾದಿದ್ದ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ. ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಮನೆಯ ಹಾಲ್‌ನಲ್ಲಿದ್ದ ಬೀರುವಿನ ಬೀಗ ಒಡೆದು ಅದರಲ್ಲಿದ್ದ ₹3 ಲಕ್ಷ ನಗದು, ಆಭರಣ ಹಾಗೂ ಒಂದು ಮೊಬೈಲ್ ಫೋನ್ ಕಳ್ಳತನ ಮಾಡಿದ್ದಾರೆ.

ADVERTISEMENT

ಪಾರ್ವತಮ್ಮ ಅವರು ಬೆಳ್ಳಿಗೆ 10.30ಕ್ಕೆ ಮನೆಗೆ ವಾಪಸ್‌ ಆದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ.

ತಮ್ಮ ಬಳಿ 100 ಕುರಿಗಳಿದ್ದವು. ಮನೆ ಕಟ್ಟುವ ಸಲುವಾಗಿ ಈಚೆಗೆ 75 ಕುರಿ ಮಾರಾಟ ಮಾಡಿ, ₹2.70 ಲಕ್ಷ ಹಾಗೂ ಮಾವಿನ ತೋಪು ಮಾರಾಟದಿಂದ ₹1.80 ಲಕ್ಷ ಹಣ ಬಂದಿತ್ತು. ಇವೆರಡನ್ನು ಸೇರಿಸಿ ಮನೆಕಟ್ಟುವ ಉದ್ದೇಶದಿಂದ ಮನೆಯ ಬೀರುವಿನಲ್ಲಿ ಇಟ್ಟಿದ್ದೇವು ಎಂದು ನಾರಾಯಣಸ್ವಾಮಿ ತಿಳಿಸಿದ್ದಾರೆ.

ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.