ಚೇಳೂರು: ಚೇಳೂರು ತಾಲ್ಲೂಕಿನಲ್ಲಿ ಹಾಸ್ಟೆಲ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಪತ್ರ ಚಳವಳಿ ಶನಿವಾರ ನಡೆಯಿತು.
ಎಸ್ಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ್ ಮಾತನಾಡಿ, ‘ತಾಲ್ಲೂಕಿನಲ್ಲಿ ಶೈಕ್ಷಣಿಕ ಸವಾಲುಗಳನ್ನು ಪ್ರತಿನಿತ್ಯ ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ. ಚೇಳೂರು ಪಟ್ಟಣದಲ್ಲಿ ಒಂದು ಸರ್ಕಾರಿ ಪ್ರೌಢಶಾಲೆ, ಮೂರು ಅನುದಾನಿತ ಶಾಲೆ, ನಾಲ್ಕು ಖಾಸಗಿ ಶಾಲೆ ಇವೆ. ಒಂದು ಸರ್ಕಾರಿ ಮತ್ತು ಒಂದು ಖಾಸಗಿ ಪಿಯು ಕಾಲೇಜು ಇವೆ. ಬಹುತೇಕ ವಿದ್ಯಾರ್ಥಿಗಳು 20 ಕಿ.ಮೀ ಗಿಂತಲೂ ಹೆಚ್ಚಿನ ದೂರದ ಹಾಗೂ ಸಂಪರ್ಕರಹಿತ ಹಳ್ಳಿಗಳಿಂದ ಪ್ರಯಾಣಿಸಿ ಶಾಲಾ ಕಾಲೇಜುಗಳಿಗೆ ಹಾಜರಾಗುತ್ತಾರೆ ಎಂದರು.
ಇಡೀ ತಾಲ್ಲೂಕಿನಲ್ಲಿ ಕೇವಲ ಒಂದು ಹಿಂದುಳಿದ ವರ್ಗದ ಬಾಲಕರ ಮೆಟ್ರಿಕ್ ಪೂರ್ವ ಹಾಗೂ ವಿದ್ಯಾರ್ಥಿನಿಯರ ಮೆಟ್ರಿಕ್ ನಂತರದ ಹಾಸ್ಟೆಲ್ ಇದೆ. ಅವುಗಳಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆಯನ್ನು ಮಿತಿಗೊಳಿಸಲಾಗಿದೆ. ಹಾಗಾಗಿ ಸಾವಿರಾರು ವಿದ್ಯಾರ್ಥಿಗಳು ಹಾಸ್ಟೆಲ್ ವಂಚಿತರಾಗಿದ್ದಾರೆ. ಹಿಂದುಳಿದ, ಬಡತನ ರೇಖೆಗಿಂತ ಕಡಿಮೆ ಇರುವ ನೂರಾರು ವಿದ್ಯಾರ್ಥಿನಿಯರು ಸರಿಯಾದ ಸಮಯಕ್ಕೆ ಶಾಲಾ- ಕಾಲೇಜುಗಳಿಗೆ ಹಾಜರಾಗಲು ಕಷ್ಟ ಎಂದರು.
ರಾಜ್ಯ ಕಾರ್ಯದರ್ಶಿ ಭೀಮನಗೌಡ ಮಾತನಾಡಿ, ‘ಮುಖ್ಯಮಂತ್ರಿ ಗಡಿ ಭಾಗದ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಚೇಳೂರು ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿನಿಲಯ ಹಾಗೂ ಹಿಂದುಳಿದ ವರ್ಗದ ಇಲಾಖೆಯಿಂದ ಬಾಲಕರ ಹಾಗೂ ಬಾಲಕಿಯರ ಮೆಟ್ರಿಕ್ ನಂತರದ ಹಾಸ್ಟೆಲ್ ಆರಂಭಿಸಬೇಕು’ ಎಂದು ಮನವಿ ಮಾಡಿದರು.
‘ಎಸ್ಎಫ್ಐ ಸಂಘಟನೆ ನೇತೃತ್ವದಲ್ಲಿ ಹೋರಾಟ ಮಾಡಿ ನೂರಾರು ಪತ್ರ ಮೂಲಕ ಸಮಸ್ಯೆಯನ್ನು ಗಮನಕ್ಕೆ ತರುತ್ತಿದ್ದೇವೆ. ಸಮಸ್ಯೆ ಪರಿಗಣಿಸದೇ ಇದ್ದರೆ ಅನಿರ್ದಿಷ್ಟಾವಧಿ ಸತ್ಯಾಗ್ರಹಕ್ಕೆ ತಾಲ್ಲೂಕಿನ ಎಲ್ಲಾ ವಿದ್ಯಾರ್ಥಿಗಳು ಮುಂದಾಗುತ್ತೇವೆ’ ಎಂದು ಎಚ್ಚರಿಸಿದರು.
ಮದನ್ ಮೋಹನ್, ಅರುಣಾವತಿ, ನಂದೀಶ್ , ವರಲಕ್ಷಿ, ವಾಣಿಶ್ರೀ, ನವತೇಜರೆಡ್ಡಿ, ಇರ್ಫಾನ್, ಪೋಷಕರು, ಶಿಕ್ಷಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.