ADVERTISEMENT

ಚಿಂತಾಮಣಿ: ಕೈವಾರದಲ್ಲಿ ನಾದಲೋಕ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 5:02 IST
Last Updated 10 ಜುಲೈ 2025, 5:02 IST
ಕೈವಾರದ ಸಂಗೀತೋತ್ಸವದಲ್ಲಿ ಪರಿಮಳ ಅರುಳು ಮಲ್ಲಿಗೆ ತಂಡದ ಭರತನಾಟ್ಯ
ಕೈವಾರದ ಸಂಗೀತೋತ್ಸವದಲ್ಲಿ ಪರಿಮಳ ಅರುಳು ಮಲ್ಲಿಗೆ ತಂಡದ ಭರತನಾಟ್ಯ   

ಚಿಂತಾಮಣಿ: ಕೈವಾರದಲ್ಲಿ ನಡೆಯುತ್ತಿರುವ ಗುರುಪೂಜಾ ಸಂಗೀತೋತ್ಸವದಲ್ಲಿ ಎರಡನೇ ದಿನವಾದ ಬುಧವಾರ ನಾದಸ್ವರ ಮತ್ತು ತವಿಲ್‌ನಿಂದ ಕಾರ್ಯಕ್ರಮ ಆರಂಭವಾಯಿತು. ಸಾವಿರಾರು ಸಂಗೀತ ಪ್ರಿಯರು, ವಿದ್ವಾಂಸರು ಭಾಗವಹಿಸಿದ್ದರು.

ಗ್ರಾಮದ ಬೀದಿ ಬೀದಿಯಲ್ಲೂ ಸಂಗೀತದ ರಸದೌತಣವನ್ನು ಜನರು ಕುಳಿತಲ್ಲೇ ಸವಿದರು. ಉದಯೋನ್ಮುಖ ಸಂಗೀತಗಾರರಿಗೆ ಖ್ಯಾತ ಸಂಗೀತಗಾರರನ್ನು ಕಂಡು ಹಾಗೂ ಅವರ ಗಾಯನವನ್ನು ಕೇಳಿ ಗಾನಗಂಧರ್ವ ಲೋಕದಲ್ಲಿ ವಿಹರಿಸಿದರು. ಸಂಗೀತೋತ್ಸವದ ಸಭಾಂಗಣದ ಒಳಗೆ ಹಾಗೂ ಹೊರಗಡೆ ಜನಜಂಗುಳಿ ತುಂಬಿ ತುಳುಕುತ್ತಿತ್ತು. ಬೆಳಿಗ್ಗೆಯಿಂದ ರಾತ್ರಿಯವರೆಗೂ ಸಂಗೀತದ ಲಹರಿ ನಿರಂತರವಾಗಿ ನಡೆಯಿತು.

ಸಂಜೆಯ ಕಾರ್ಯಕ್ರಮಗಳಲ್ಲಿ ಪಿ.ಜೆ.ಬ್ರಹ್ಮಾಚಾರಿ ಅವರ ಪಿಟೀಲು ಸೋಲೋ ಜನರನ್ನು ಮಂತ್ರಮುಗ್ಧರನ್ನಾಗಿ ಮಾಡಿತು. ಪಿಟೀಲು ಸೋಲೋಗೆ ಸಹಕಲಾವಿದ ಬೆಂಗಳೂರಿನ ಪ್ರಿಯಬ್ರಹ್ಮ ಸಹಪಿಟೀಲು, ಬೆಂಗಳೂರಿನ ಎ.ಎಸ್.ಎನ್.ಸ್ವಾಮಿ ಮೃದಂಗ, ಕೆ.ಕೆ.ಭಾನುಪ್ರಕಾಶ್ ರಿದಂಪ್ಯಾಡ್, ಓಂಕಾರ್ ಖಂಜಿರ, ಶಂಕರ್ ಮೋರ್ಸಿಂಗ್‌ಗೆ ಸಂಗೀತಪ್ರಿಯರು ಮನಸೋತರು.

ADVERTISEMENT

ಡಾ.ಶ್ರೀಕಾಂತಂ ನಾಗೇಂದ್ರಶಾಸ್ತ್ರೀ ಗಾಯನಕ್ಕೆ ಸಂಗೀತಪ್ರಿಯರು ತಲೆದೂಗಿದರು. ಬೆಂಗಳೂರಿನ ಜನಾರ್ದನ್ ಪಿಟೀಲು, ಎ.ಎಸ್.ಎನ್.ಸ್ವಾಮಿ ಮೃದಂಗ, ಎಂ.ಕೆ.ವಾಸವಿ ಘಟಂ ವಾದನಗಳು ಸಂಗೀತಗಾರರನ್ನು ನಾದಲೋಕದಲ್ಲಿ ವಿಹರಿಸುವಂತೆ ಮಾಡಿತು.

ಕೇರಳದ ತ್ರಿವೆಂಡ್ರಂ ಡಾ.ಎನ್.ಜೆ.ನಂದಿನಿ ಗಾಯನಕ್ಕೆ ಚೆಲುವರಾಜ್ ಮೃದಂಗ, ಬಿ.ರಾಜಶೇಖರ್ ಮೋರ್ಸಿಂಗ್, ಜನಾರ್ಧನ್ ಪಿಟೀಲು, ಎನ್.ಗುರುಮೂರ್ತಿ ಘಟಂ ಮೆರಗು ನೀಡಿದವು.

ಮೈಸೂರು ನಾಗರಾಜ್ ಮತ್ತು ಮಂಜುನಾಥ್ ಅವರ ಪಿಟೀಲು ಸೋಲೋ, ಪಿಟೀಲು ಸೋಲೋಗೆ ತಂಜಾವೂರ್ ಮುರುಘ ಭೂಪತಿ ಮೃದಂಗ, ಪಂಡಿತ್ ರೂಪಕ್ ಕಲ್ಲೂರ್ಕರ್ ತಬಲ, ಭಾಗ್ಯಲಕ್ಮೀ ಕೃಷ್ಣ ಮೋರ್ಸಿಂಗ್ ಪ್ರತಿಭೆ ಮೆರೆದರು.

ಬೆಂಗಳೂರಿನ ನೂಪುರ ಫೈನ್ ಆರ್ಟ್ಸ್ ರೂಪರಾಜೇಶ್ ತಂಡದ ಗೌರೀಸುತ ಕಥಾಮೃತ ನೃತ್ಯ ರೂಪಕವು ಸಂಗೀತಾಭಿಮಾನಿಗಳ ಮನತಣಿಸಿತು. ಇಡೀ ರಾತ್ರಿ ಅನೇಕ ವಿದ್ವಾಂಸರ ಹರಿಕಥೆ, ಬುರ್ರಕಥೆ, ವಿವಿಧ ಕಲಾಶಾಲೆಗಳಿಂದ ಭರತನಾಟ್ಯ, ನಾಟಕ ಮೂಡಿಬಂತು.

ಕೈವಾರದ ಸಂಗೀತೋತ್ಸವದಲ್ಲಿ ಎ.ಎಲ್‌.ವೆಂಕಟೇಶ್‌ ತಂಡದಿಂದ ಬುರ್ರಕಥೆ
ಕೈವಾರದ ಸಂಗೀತೋತ್ಸವದಲ್ಲಿ ನಾದಸ್ವರ ಕಲಾವಿದರ ಸಂಗೀತ 
ಕೈವಾರದ ಸಂಗೀತೋತ್ಸವದಲ್ಲಿ ಬುಧವಾರ ಸಭಾಂಗಣದಲ್ಲಿ ನೆರೆದಿದ್ದ ಜನರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.