ADVERTISEMENT

ಗೌರಿಬಿದನೂರು | ರೈತನ ಕೈ ಹಿಡಿದ ವಿವಿಧ ಬೆಳೆ

ಕೆ.ಎನ್‌.ನರಸಿಂಹಮೂರ್ತಿ
Published 7 ಏಪ್ರಿಲ್ 2024, 7:29 IST
Last Updated 7 ಏಪ್ರಿಲ್ 2024, 7:29 IST
<div class="paragraphs"><p>ರೈತ ನರಸಿಂಹ ರೆಡ್ಡಿ</p></div>

ರೈತ ನರಸಿಂಹ ರೆಡ್ಡಿ

   

ಗೌರಿಬಿದನೂರು: ಆ ಜಮೀನಿಗೆ ಕಾಲಿಟ್ಟ ತಕ್ಷಣವೇ ತೆಂಗು, ಅಡಿಕೆ, ಮಾವು, ಸಪೋಟ, ಬಟರ್‌ಫ್ರೂಟ್, ವಾಟರ್‌ಆಪಲ್, ಹಲಸು, ಕಬ್ಬು, ನುಗ್ಗೆಕಾಯಿ, ಬದನೆ ಕಾಯಿ, ಮೆಣಸಿನ ಕಾಯಿ, ಬಹು ವಿಧದ ಟೊಮೆಟೊ, ಬಳ್ಳಿ ಆಲೂ, ಮೆಣಸು, ಬೂದ ಕುಂಬಳಕಾಯಿ, ಸುಗಂಧರಾಜ ಹೂ...ಹೀಗೆ ನಾನಾ ತರಕಾರಿ ಮತ್ತಿತರ ಬೆಳೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅಬ್ಬಾ, ಇಷ್ಟೊಂದು ವೈವಿಧ್ಯಮಯ ಬೆಳೆಗಳು ಎನಿಸುತ್ತದೆ. ಅವರ ಕೃಷಿಗೆ ಮೆಚ್ಚುಗೆ ವ್ಯಕ್ತವಾಗುತ್ತದೆ.

ತಾಲ್ಲೂಕಿನ ತೊಂಡೆಬಾವಿ ಹೋಬಳಿಯ ವೀರಮ್ಮನಹಳ್ಳಿ ಗ್ರಾಮದ ರೈತ ನರಸಿಂಹ ರೆಡ್ಡಿ 8 ಎಕರೆ ಜಮೀನಿನಲ್ಲಿ ಹಲವು ರೀತಿಯ ಬೆಳೆ ಬೆಳೆದು ಪ್ರಗತಿಪರ ರೈತ ಎನಿಸಿದ್ದಾರೆ. ಸುತ್ತಮುತ್ತಲ ಹಳ್ಳಿಗಷ್ಟೇ ಏಕೆ ತಾಲ್ಲೂಕಿನಲ್ಲಿಯೇ ಮಾದರಿ ರೈತ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. 

ADVERTISEMENT

ತಮಗಿರುವ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಹಲವು ರೀತಿಯ ಬೆಳೆ ಬೆಳೆಯುತ್ತ ಕೃಷಿಯನ್ನೇ ಉಸಿರಾಗಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ನಾನಾ ಬೆಳೆಗಳ ಜತೆಗೆ ಹಸು, ಕುರಿ ಸಾಕಾಣಿಗೆ ಮಾಡುತ್ತಿದ್ದಾರೆ. ವರ್ಷಕ್ಕೆ ಸರಾಸರಿ ₹ 10 ಲಕ್ಷಕ್ಕೂ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ.

ಅವರ ಕೃಷಿ ಕಾರ್ಯಕ್ಕೆ ಕೃಷಿ ಪಂಡಿತ ಮತ್ತು ಉದಯೋನ್ಮುಖ ಪ್ರಶಸ್ತಿ, ಕೃಷಿ ವರ್ಣ ಪ್ರಶಸ್ತಿ, ಸಹಜ ಕೃಷಿ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳು ದೊರೆತಿವೆ.

ಮಿಶ್ರ ಬೆಳೆ ಬೆಳೆಯುವುದರಿಂದ ಕಾಲ ಕಾಲಕ್ಕೆ ಹೊಸ ಫಸಲು ಬರುತ್ತಲೇ ಇರುತ್ತದೆ. ಒಂದೇ ಬೆಳೆ ಬೆಳೆದು ನಷ್ಟಕ್ಕೆ ಒಳಗಾಗುವುದಕ್ಕಿಂತ ಸಮಗ್ರ ಕೃಷಿ ಕೈ ಹಿಡಿಯುತ್ತದೆ ಎನ್ನುವುದು ಅವರ ಕೃಷಿ ಅನುಭವ.

ಬೆಲೆಯಲ್ಲಿನ ಏರುಪೇರು, ಹವಾಮಾನ ವೈಪರೀತ್ಯ ಹೀಗೆ ಹಲವು ಕೃಷಿ ಸಂಕಷ್ಟಗಳ ನಡುವೆಯೇ ನರಸಿಂಹ ರೆಡ್ಡಿ ವಿವಿಧ ಬಗೆಯ ಬೆಳೆಗಳನ್ನು ಬೆಳೆದು ಗಮನ ಸೆಳೆಯುತ್ತಿದ್ದಾರೆ. 

ವ್ಯವಸಾಯದಲ್ಲಿಯೇ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಇವರು ರಾಜ್ಯದ ವಿವಿಧ ಕಡೆಗಳಲ್ಲಿರುವ ಮಾದರಿ ರೈತರ ಜಮೀನುಗಳಿಗೆ ತೆರಳಿ ಅಲ್ಲಿನ ವಿನೂತನ ಪ್ರಯೋಗಗಳನ್ನು ಗಮನಿಸಿ ತಮ್ಮ ಜಮೀನಿನಲ್ಲಿ ಅನುಷ್ಠಾನಕ್ಕೆ ತರುತ್ತಿದ್ದಾರೆ. ನೀರಿಗೆ ಒಂದು ಕೊಳವೆ ಬಾವಿ ಅವಲಂಬಿಸಿದ್ದಾರೆ. ಹನಿ ನೀರಾವರಿ ಪದ್ಧತಿ ಮೂಲಕ ಬೆಳೆಗಳಿಗೆ ನೀರು ಹಾಯಿಸುತ್ತಿದ್ದಾರೆ.

ಉತ್ಪನ್ನಗಳನ್ನು ಮನೆಯಲ್ಲಿಯೇ ಮೌಲ್ಯವರ್ಧನೆಗೊಳಿಸುವರು. ಇದು ಸಹ ಅವರ ಕೃಷಿ ಚಟುವಟಿಕೆಗೆ ಪೂರಕವಾಗಿದೆ. ರಾಗಿ ಹಿಟ್ಟು, ರಾಗಿ ಹುರಿ ಹಿಟ್ಟು, ರಾಗಿ ಮಾಲ್ಟ್, ಮಿಲೆಟ್ ಮಾಲ್ಟ್, ರಾಗಿ ದೋಸಾ ಹಿಟ್ಟು ಹೀಗೆ ಹಿಟ್ಟುಗಳನ್ನು ತಯಾರಿಸಿ ಸ್ವ ಸಹಾಯ ಸಂಘಗಳ ಮೂಲಕ ತಮ್ಮದೇ ಆದ ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಾರೆ.

ಗುಣಮಟ್ಟ, ಉತ್ಪನ್ನದ ಕಾರ್ಯಕ್ಷಮತೆ ಮತ್ತು ಗ್ರಾಹಕರ ಮೌಲ್ಯದ ದೃಷ್ಟಿಯಿಂದ ಗ್ರಾಹಕರಿಗೆ ಸಾಧ್ಯವಾದಷ್ಟು ಉತ್ತಮವಾದ ಮತ್ತು ರಾಸಾಯನಿಕ ಮುಕ್ತ ಉತ್ಪನ್ನ ನೀಡುವುದರ ಜತೆಗೆ ಉತ್ತಮ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದ್ದಾರೆ.

ಜಿಲ್ಲೆಯ ಅನೇಕ ಆಸಕ್ತ ಯುವ ರೈತರು ಇವರ ತೋಟಕ್ಕೆ ಬಂದು ಕೃಷಿ ಚಟುವಟಿಕೆಗಳನ್ನು ವೀಕ್ಷಿಸುವರು. ಇವರಿಂದ ಉತ್ತಮ ಬೆಳೆಯ ಬೆಳೆಯಲು ಮಾಹಿತಿ ಪಡೆಯುತ್ತಿರುತ್ತಾರೆ.

ತಾವು ಬೆಳೆದ ಹಣ್ಣುಗಳಿಗೆ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಅವರೇ ಮಾರುಕಟ್ಟೆಗೆ ತಲುಪಿಸುತ್ತಾರೆ. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ದೊರೆಯುವ ಮಾಹಿತಿ ಹಾಗೂ ಪ್ರಗತಿಪರ ರೈತರ ಸಲಹೆ ಮೇರೆಗೆ ಕೃಷಿಯನ್ನೇ ಜೀವನವಾಗಿಸಿಕೊಂಡು ಇತರರಿಗೂ ಮಾದರಿಯಾಗುವ ರೀತಿಯಲ್ಲಿ ಕೃಷಿ ನಡೆಸುತ್ತಿದ್ದಾರೆ.

ವ್ಯವಸಾಯ ಮೋಸ ಮಾಡುವುದಿಲ್ಲ

ವ್ಯವಸಾಯದಲ್ಲಿ ಯಾರಿಗೂ ಮೋಸ ಆಗುವುದಿಲ್ಲ. ಒಂದೇ ತೆರನಾದ ಬೆಳೆ ಬೆಳೆದರೆ ರೈತನಿಗೆ ಆರ್ಥಿಕ ಹೊರೆಯಾಗುತ್ತದೆ. ಆದ್ದರಿಂದ ಎಲ್ಲ ಬಗೆಯ ವಿವಿಧ ಮಾದರಿಯ ಬೆಳೆ ಬೆಳೆದು ಕಾಲಕ್ಕೆ ತಕ್ಕಂತೆ ಪಾಲನೆ ಮಾಡಿದರೆ ಪ್ರತಿ ಬೆಳೆಯು ಆದಾಯ ತಂದು ಕೊಡುತ್ತದೆ. ರೈತರು ಹೆದರದೆ ವ್ಯವಸಾಯದಲ್ಲಿ ತೊಡಗಬೇಕು ಎಂದು ನರಸಿಂಹ ರೆಡ್ಡಿ ತಿಳಿಸುವರು.

ಸಹಜ ಸಮೃದ್ಧಿ ಆರ್ಗಾನಿಕ್ ಸಂಸ್ಥೆಯಿಂದ ನಿರಂತರವಾಗಿ ಹಳೇ ಕಾಲದ ಬೀಜಗಳನ್ನು ಸಂಗ್ರಹಿಸಿ, ರೈತರಿಗೆ ಸಂಪ್ರದಾಯಿಕ ಕೃಷಿಗೆ ಉತ್ತೇಜನ ನೀಡುತ್ತಿದ್ದೇವೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.