ADVERTISEMENT

ಮಿತ ಸಂತಾನಕ್ಕೆ ಆದ್ಯತೆ ನೀಡಿ

‘ವಿಶ್ವ ಜನಸಂಖ್ಯಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಹಂಗಾಮಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಸಲಹೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 13:12 IST
Last Updated 11 ಜುಲೈ 2019, 13:12 IST
ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು ಜನಸಂಖ್ಯಾ ಸ್ಫೋಟದ ದುಷ್ಪರಿಣಾಮ ಕುರಿತಾದ ಕಿರು ನಾಟಕ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು ಜನಸಂಖ್ಯಾ ಸ್ಫೋಟದ ದುಷ್ಪರಿಣಾಮ ಕುರಿತಾದ ಕಿರು ನಾಟಕ ಪ್ರದರ್ಶಿಸಿದರು.   

ಚಿಕ್ಕಬಳ್ಳಾಪುರ: ‘ದೇಶದ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಪ್ರತಿಯೊಬ್ಬರೂ ಮಿತ ಸಂತಾನಕ್ಕೆ ಆದ್ಯತೆ ನೀಡಬೇಕು’ ಎಂದು ಹಂಗಾಮಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ವಿಶ್ವ ಜನಸಂಖ್ಯಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


‘ದೇಶದ ಜನಸಂಖ್ಯೆ ಹೆಚ್ಚಾದಂತೆ ಸೌಲಭ್ಯಗಳ ಕೊರತೆ ಸಹ ಅಧಿಕವಾಗಿ ದೇಶದ ಅರ್ಥಿಕ ವ್ಯವಸ್ಥೆ ಹಾಗೂ ಪ್ರಕೃತಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಇಂದಿನ ಯುವ ಜನತೆ ಜನಸಂಖ್ಯಾ ನಿಯಂತ್ರಣಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು’ ಎಂದರು.


‘ಜನಸಂಖ್ಯೆ ನಿಯಂತ್ರಣಕ್ಕೆ ಸಾಕಷ್ಟು ಸೂತ್ರಗಳಿವೆ ಅವುಗಳನ್ನು ಪಾಲಿಸಬೇಕು. 21 ವರ್ಷ ತುಂಬಿದ ಗಂಡು ಮತ್ತು 18 ವರ್ಷ ದಾಟಿದ ಹೆಣ್ಣು ಮಕ್ಕಳಿಗೆ ಮಾತ್ರ ಮದುವೆ ಮಾಡಬೇಕು. ವಿವಾಹದ ನಂತರ ಕನಿಷ್ಠ ಮೂರು ವರ್ಷಗಳವರೆಗೆ ಮೊದಲನೇ ಮಗುವನ್ನು ಹೊಂದಬಾರದು. ಮಗುವಿನಿಂದ ಮಗುವಿಗೆ ಕನಿಷ್ಠ ನಾಲ್ಕು ವರ್ಷಗಳ ಅಂತರವಿರುವಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT


‘ಪ್ರಸ್ತುತ ವಿಶ್ವದ ಜನಸಂಖ್ಯೆ 750 ಕೋಟಿ ತಲುಪಿದೆ. ಆ ಪೈಕಿ ಭಾರತದ ಜನಸಂಖ್ಯೆ 135 ಕೋಟಿ ಇದೆ. ಈ ಜನಸಂಖ್ಯಾ ಸ್ಫೋಟ ಕಡಿಮೆ ಮಾಡುವ ಉದ್ದೇಶದಿಂದಲೇ ಈ ಕಾರ್ಯಕ್ರಮ ಆಚರಿಸಲಾಗುತ್ತದೆ. ಆದರೆ ಜನರು ಸಂತಾನ ನಿಯಂತ್ರಣ ಕ್ರಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.


ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯ್ ಕುಮಾರ್ ಮಾತನಾಡಿ, ‘ಅಜ್ಞಾನ, ಅನಕ್ಷರತೆ ಹಾಗೂ ಮೂಢನಂಬಿಕೆಗಳೇ ಇಂದಿನ ಜನಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣ. ಜನಸಂಖ್ಯೆಯ ಹೆಚ್ಚಳದಿಂದ ದೇಶದ ಆಹಾರ ಭದ್ರತೆ ಹಾಗೂ ಆರ್ಥಿಕ ವ್ಯವಸ್ಥೆಗೆ ಪೆಟ್ಟು ಬೀಳುತ್ತಿದೆ. ನೈಸರ್ಗಿಕ ಸಂಪನ್ಮೂಲಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದರೆ ದೇಶದ ಅಭಿವೃದ್ಧಿಗೆ ಮಾರಕವಾಗಲಿದೆ’ ಎಂದರು.


‘ಈ ಸಮಸ್ಯೆಯನ್ನು ಮನಗಂಡೇ ಹಿಂದೆ ಮೈಸೂರು ಸಂಸ್ಥಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಮಹಿಳೆಯರಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲು ಆಸ್ಪತ್ರೆಗಳನ್ನು ಆರಂಭಿಸಿದ್ದರು. ಇವತ್ತು ರಾಜ್ಯದಲ್ಲಿ ತುರ್ತಾಗಿ ಜನಸಂಖ್ಯೆ ನಿಯಂತ್ರಿಸುವ ಕ್ರಮಗಳು ಜಾರಿಗೆ ಬರಬೇಕು’ ಎಂದು ಹೇಳಿದರು.


ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ಅರಿವು ಮೂಡಿಸಿದರು.


ನೀರು ಮತ್ತು ನೈರ್ಮಲ್ಯ ತಜ್ಞ ಡಾ.ಕೆ.ಗುರುದೇವ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಎಂ.ಚನ್ನಕೇಶವರೆಡ್ಡಿ, ಜಿಲ್ಲಾ ರೋಗ ವಾಹಕ ಆಶ್ರೀತರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಕಾಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.