ADVERTISEMENT

ಬಸ್‌ ಪ್ರಯಾಣಕ್ಕೆ ಜನರ ನಿರಾಸಕ್ತಿ

ಚಿಂತಾಮಣಿ: ಸಹಜ ಸ್ಥಿತಿಗೆ ಮರಳದ ಸಂಚಾರ, ಸಂಸ್ಥೆಗೆ ನಷ್ಟ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 9:36 IST
Last Updated 20 ಜೂನ್ 2020, 9:36 IST
ಚಿಂತಾಮಣಿ ಘಟಕದಲ್ಲಿ ಸಂಚಾರಕ್ಕೆ ಸಿದ್ಧವಾಗಿರುವ ಬಸ್‌ಗಳು
ಚಿಂತಾಮಣಿ ಘಟಕದಲ್ಲಿ ಸಂಚಾರಕ್ಕೆ ಸಿದ್ಧವಾಗಿರುವ ಬಸ್‌ಗಳು   

ಚಿಂತಾಮಣಿ: ಲಾಕ್‌ಡೌನ್ ಸಡಿಲಿಕೆ ನಂತರ ಬಸ್‌ ಸಂಚಾರಕ್ಕೆ ಅವಕಾಶ ನೀಡಿ ತಿಂಗಳಾದರೂ ತಾಲ್ಲೂಕಿನಲ್ಲಿ ಪ್ರಯಾಣಿಕರಿಂದ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ. ಶೇ 40ರಷ್ಟು ಬಸ್‌ಗಳು ಮಾತ್ರ ಸಂಚರಿಸುತ್ತಿವೆ.

ಮೇ 19ರಿಂದ ಜಿಲ್ಲೆಯಲ್ಲಿ ಬಸ್‌ ಸಂಚಾರ ಪ್ರಾರಂಭವಾಗಿದೆ. ಆರಂಭದ ದಿನಗಳಲ್ಲಿ 8-10 ಬಸ್‌ ಸಂಚರಿಸುತ್ತಿದ್ದವು. ಪ್ರಯಾಣಿಕರ ಸಂಖ್ಯೆ ಹಂತ ಹಂತವಾಗಿ ಹೆಚ್ಚುತ್ತಿದ್ದು ಸದ್ಯ 60 ಬಸ್ ಸಂಚರಿಸುತ್ತಿವೆ. ಲಾಕ್‌ಡೌನ್ ಮೊದಲು ಸಾಮಾನ್ಯ ದಿನಗಳಲ್ಲಿ ₹ 15ರಿಂದ ₹ 16 ಲಕ್ಷದ ಆದಾಯ ಸಂಗ್ರಹವಾಗುತ್ತಿತ್ತು. ಈಗ ₹ 5 ಲಕ್ಷಕ್ಕೆ ಸೀಮಿತವಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ತಾಲ್ಲೂಕು ಘಟಕದ ವ್ಯವಸ್ಥಾಪಕ ಬಿ. ಅಪ್ಪಿರೆಡ್ಡಿ ತಿಳಿಸಿದರು.

ಬೆಂಗಳೂರಿಗೆ ಪ್ರಯಾಣಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪ್ರಯಾಣಿಕರ ಪ್ರತಿಕ್ರಿಯೆ ನೀರಸವಾಗಿದೆ ಎಂದರು.

ADVERTISEMENT

ನಗರದಿಂದ ಶಿವಮೊಗ್ಗ, ಮೈಸೂರು, ಹಟ್ಟಿ, ಹೊಸಪೇಟೆ, ಗಂಗಾವತಿಗೂ ಬಸ್‌ ಸಂಚರಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಸದ್ಯಕ್ಕೆ ಚೇಳೂರು ಮತ್ತು ಪೆದ್ದೂರು ಕಡೆಗೆ ಮಾತ್ರ ಬಸ್ ಬಿಡಲಾಗುತ್ತಿದೆ. ದಿನೇ ದಿನೇ ಸ್ವಲ್ಪ ಪ್ರಗತಿ ಕಾಣುತ್ತಿದ್ದರೂ ಮೊದಲಿನ ಸ್ಥಿತಿಗೆ ಬರಲು ಸಾಕಷ್ಟು ಸಮಯವೇ ಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕೊರೊನಾ ಭಯದಿಂದ ಜನರು ಸಂಚಾರ ಮಾಡುತ್ತಿಲ್ಲ. ಮದುವೆ ಸೇರಿದಂತೆ ಯಾವುದೇ ಶುಭಕಾರ್ಯ, ಸಮಾರಂಭಗಳಿಗೆ ಭಾಗವಹಿಸುವವರ ಸಂಖ್ಯೆಯೂ ಕುಸಿದಿದೆ. ಜನ ಸಂಚರಿಸುತ್ತಿಲ್ಲ. ಗ್ರಾಮೀಣ ಭಾಗದ ಜನರು ಸ್ವಂತ ವಾಹನಗಳಲ್ಲಿಯೇ ಹೆಚ್ಚು ಪ್ರಯಾಣಿಸುತ್ತಾರೆ ಎಂದು ತಿಳಿಸಿದರು.

ಸಂಸ್ಥೆಯ ಘಟಕ, ಬಸ್ ನಿಲ್ದಾಣ ಹಾಗೂ ಬಸ್‌ಗಳಲ್ಲಿ ಎಲ್ಲ ರೀತಿಯ ಕೊರೊನಾ ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದೇವೆ. ಬಸ್‌ನಲ್ಲಿ ಪ್ರಯಾಣಿಸಲು ಆಸಕ್ತಿ ತೋರುತ್ತಿಲ್ಲ. ಖಾಸಗಿ ಬಸ್‌ ಸಂಚಾರಕ್ಕೆ ಅನುಮತಿ ನೀಡಿದ್ದರೂ ಪ್ರಯಾಣಿಕರು ಕಡಿಮೆ ಇರುವುದರಿಂದ ಬಸ್‌ ಸಂಚರಿಸುತ್ತಿಲ್ಲ. ಪ್ರಯಾಣಿಕರಿಂದ ಬರುವ ಆದಾಯ ಡೀಸೆಲ್‌ಗೂ‌ ಸಾಕಾಗುವುದಿಲ್ಲ ಎನ್ನುವುದು ಖಾಸಗಿ ಬಸ್ ಮಾಲೀಕರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.