
ಪ್ರಜಾವಾಣಿ ವಾರ್ತೆ
ಸಾವು (ಪ್ರಾತಿನಿಧಿಕ ಚಿತ್ರ)
ಚಿಂತಾಮಣಿ: ಬೆಂಗಳೂರು–ಮದನಪಲ್ಲಿ ಹೆದ್ದಾರಿಯ ಜೆ.ಕೆ ಭವನದ ಬಳಿ ಸೋಮವಾರ ಕಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದರಿಂದಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬೈಕ್ ಸವಾರ ಸೋಮವಾರ ರಾತ್ರಿ ಮೃತಪಟ್ಟಿದ್ದಾನೆ.
ನಗರದ ಕೋಲಾರ ವೃತ್ತದಲ್ಲಿ ನಿವಾಸಿ ಅಭಯ್ (22) ಮೃತ ವ್ಯಕ್ತಿ. ಅಭಯ್ ಚಿನ್ನಸಂದ್ರ ಗ್ರಾಮದ ಕಡೆಯಿಂದ ಬೈಕ್‌ನಲ್ಲಿ ಕೋಲಾರ ವೃತ್ತದಲ್ಲಿರುವ ಮನೆಗೆ ತೆರಳುತ್ತಿದ್ದರು. ಆಗ ಮದನಪಲ್ಲಿ ಕಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದ. ಡಿಕ್ಕಿಯ ರಭಸಕ್ಕೆ ಸವಾರ ಕೆಳಗೆ ಬಿದ್ದು, ತೀವ್ರವಾಗಿ ಗಾಯಗೊಂಡಿದ್ದ. ಘಟನೆಯಲ್ಲಿ ಕಾರು ಮತ್ತು ಬೈಕ್ ಜಖಂಗೊಂಡಿದ್ದವು.
ಗಾಯಾಳುವನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಗಾಯಾಳು ಸೋಮವಾರ ರಾತ್ರಿ ಮೃತಪಟ್ಟಿದ್ದಾನೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.