ಚಿಕ್ಕಬಳ್ಳಾಪುರ: ಆಡಳಿತ ಪಕ್ಷದ ಸದಸ್ಯರ ನಡುವೆ ತೀವ್ರ ಚರ್ಚೆ ಮತ್ತು ಜಟಾಪಟಿಗೆ ಕಾರಣವಾಗಿದ್ದ ಇಲ್ಲಿನ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವು ಸದಸ್ಯ ಸುಬ್ರಹ್ಮಣ್ಯಾಚಾರಿ ಪಾಲಾಗುವ ಸಾಧ್ಯತೆ ಇದೆ.
ಸ್ಥಾಯಿ ಸಮಿತಿ ರಚನೆ ವಿಚಾರವು ನಗರಸಭೆ ಮಾಜಿ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು ಮತ್ತು ಹಾಲಿ ಅಧ್ಯಕ್ಷ ಎ.ಗಜೇಂದ್ರ ನಡುವೆ ಜಟಾಪಟಿಗೆ ಕಾರಣವಾಗಿತ್ತು. ಈ ಸಂಬಂಧ ಸುಧಾಕರ್ ಅವರು ನಗರದ ತಮ್ಮ ನಿವಾಸದಲ್ಲಿ ಶನಿವಾರ ಆಡಳಿತ ಪಕ್ಷದ ಸದಸ್ಯರ ಸಭೆ ನಡೆಸಿದರು.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ತೀವ್ರ ಚರ್ಚೆಗಳು ನಡೆದವು.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್, ಆನಂದ ರೆಡ್ಡಿ ಬಾಬು ಮತ್ತು ಗಜೇಂದ್ರ ನಮ್ಮ ಪಕ್ಷದ ಮುಖಂಡರು. ಇಬ್ಬರಿಗೂ ತಿಳಿ ಹೇಳುವ ಕೆಲಸ ಮಾಡುವೆ. ರಾಜಕಾರಣದಲ್ಲಿ ಸಣ್ಣ ಪುಟ್ಟ ವ್ಯತ್ಯಾಸ ಇದ್ದೇ ಇರುತ್ತದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವೆಯೇ ರಾಜಕೀಯ ಜಟಾಪಟಿ ಇದೆ. ಇಲ್ಲಿರುವುದು ಕಾಂಗ್ರೆಸ್ ಶಾಸಕರು. ಬಿಜೆಪಿ ಅಧ್ಯಕ್ಷರ ಆಡಳಿತಕ್ಕೆ ಅಡ್ಡಿಪಡಿಸುವರು. ನಮ್ಮ ಸದಸ್ಯರ ನಡುವೆ ಯಾವುದೇ ಸಮಸ್ಯೆಗಳೂ ಇಲ್ಲ. ನಾನು ಅಣ್ಣನ ಸ್ಥಾನದಲ್ಲಿ ಇದ್ದೇನೆ. ಎಲ್ಲವನ್ನೂ ಸರಿಪಡಿಸುವೆ ಎಂದು ಹೇಳಿದರು.
ಈ ವೇಳೆ ಮಾಧ್ಯಮದವರು ಯಾರು ಅಧ್ಯಕ್ಷರಾಗುವರು ಎಂದಿದ್ದಕ್ಕೆ, ‘ಸುಬ್ರಹ್ಮಣ್ಯಾಚಾರಿ ಅವರನ್ನು ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲು ಒಮ್ಮತದಿಂದ ತೀರ್ಮಾನಿಸಲಾಗಿದೆ. ಮಾಜಿ ಅಧ್ಯಕ್ಷರು ಮತ್ತು ಅಧ್ಯಕ್ಷರು ಒಂದೇ ಹೆಸರು ತಿಳಿಸಿದ್ದಾರೆ. ಎಲ್ಲರೂ ಒಮ್ಮತದಿಂದ ಈ ಬಗ್ಗೆ ನಿರ್ಧಾರ ಮಾಡಿದ್ದಾರೆ ಎಂದರು.
ಸಿದ್ಧತೆ ಮಾಡಿಕೊಳ್ಳದ ರಾಜ್ಯ ಸರ್ಕಾರ: 6.50 ಲಕ್ಷ ಟನ್ ಯೂರಿಯಾ ಅಗತ್ಯವಿದೆ ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಬೇಡಿಕೆ ಸಲ್ಲಿಸಿತ್ತು. ಕೇಂದ್ರ ಸರ್ಕಾರ 8.13 ಲಕ್ಷ ಟನ್ ಕಳುಹಿಸಿದೆ. 7 ಲಕ್ಷ ಟನ್ ಹಂಚಿಕೆ ಮಾಡಿದ್ದಾರೆ. ಉಳಿದ ಗೊಬ್ಬರ ದಾಸ್ತಾನು ಇರಬೇಕು. ಆದರೆ ರೈತರಿಗೆ ಏಕೆ ಯೂರಿಯಾ ಸಿಗುತ್ತಿಲ್ಲ. ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಕೃಷಿ ಇಲಾಖೆ ಎಚ್ಚರವಹಿಸಬೇಕಾಗಿತ್ತು ಎಂದರು.
ರಾಜ್ಯಕ್ಕೆ 11 ಲಕ್ಷ ಟನ್ ಬೇಡಿಕೆ ಇದೆ. ಸೆಪ್ಟೆಂಬರ್‌ವರೆಗೆ ಮುಂಗಾರು ಅವಧಿ ಇದೆ. ಪ್ರತಿ ದಿನವೂ ಮೂರರಿಂದ ಐದು ಸಾವಿರ ಟನ್ ಯೂರಿಯಾ ರಾಜ್ಯಕ್ಕೆ ಬರುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣವನ್ನು ಮಾಡುವುದನ್ನು ಬಿಡಬೇಕು ಎಂದರು.
ಎಚ್.ಎನ್.ವ್ಯಾಲಿ ಮತ್ತು ಕೆ.ಸಿ ವ್ಯಾಲಿ ನೀರನ್ನು ಮೂರು ಹಂತದಲ್ಲಿ ಸಂಸ್ಕರಿಸಿ ಹರಿಸಿದರೆ ನಾವೇ ಸಚಿವರನ್ನು ಅಭಿನಂದಿಸುತ್ತೇವೆ. ಹಣಕ್ಕಿಂತ ಜನರ ಆರೋಗ್ಯ ಮುಖ್ಯ. ಆದರೆ ಸರ್ಕಾರ ಹೆಚ್ಚು ಹಣ ವೆಚ್ಚವಾಗುತ್ತದೆ ಎನ್ನುವುದನ್ನೇ ಹೇಳುತ್ತಿದೆ. ಜನರ ಆರೋಗ್ಯ ಮುಖ್ಯವಲ್ಲವೇ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.