
ಚಿಕ್ಕಬಳ್ಳಾಪುರ: ಸಕಲ ರಂಗಹೆಜ್ಜೆ ಸಂಸ್ಥೆಯು ನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸುಗ್ಗಿ ನಾಟಕೋತ್ಸವವೂ ಜನರ ಮನಸೂರೆಗೊಂಡಿತು. ಎರಡು ದಿನಗಳ ನಾಟಕೋತ್ಸವದಲ್ಲಿ ನಾಟಕಗಳು, ವಿಚಾರ ಸಂಕಿರಣ, ಚಿತ್ರಕಲಾ ಪ್ರದರ್ಶನಗಳು ನಡೆದವು.
ದಿಲೀಪ್ ಕುಮಾರ್ ಆರ್. ನಿರ್ದೇಶನದ ‘ಡರ್ ಬರ್ ಬುಡ್ಡಣ್ಣ’, ಮತ್ತು ರಂಗಸಿರಿ ತಂಡದ ಮಧು ನಿರ್ದೇಶನದ ‘ಶೂದ್ರ ತಪಸ್ವಿ’ ನಾಟಕವು ಮೊದಲ ದಿನ ಪ್ರದರ್ಶನಗೊಂಡವು.
ನಾಟಕೋತ್ಸವಕ್ಕೆ ಚಾಲನೆ ನೀಡಿದ ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ‘ಈಗಿನ ಆಧುನಿಕ ಬದುಕಿನಲ್ಲಿ ಪೋಷಕರು ಮೊಬೈಲು, ಟಿವಿಗಳಿಗೆ ಮಕ್ಕಳನ್ನು ಹತ್ತಿರವಾಗಿಸುತ್ತಿದ್ದಾರೆ. ನಮ್ಮ ಕಲೆ, ಪರಂಪರೆ, ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಮಕ್ಕಳಿಗೂ ಕಲಿಸುವಲ್ಲಿ, ಅದನ್ನ ಮುಂದುವರೆಸುವುದರಲ್ಲಿ ತಮ್ಮ ಹೆಜ್ಜೆಗಳನ್ನು ಹಿಂದೆ ಇಡುತ್ತಿದ್ದಾರೆ’ ಎಂದು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ವ್ಯಾಸಂಗ ಮಾಡಿಸುತ್ತಿಲ್ಲ. ಖಾಸಗಿ ಶಾಲೆಗಳಿಗೆ ಸೇರಿಸಿ ನಮ್ಮ ನೆಲ, ಸಂಸ್ಕೃತಿ, ನೆಲದ ಕಥೆಗಳನ್ನು ಮರೆಯುತ್ತಿದ್ದೇವೆ. ದಿಲೀಪ್ ಕುಮಾರ್ ಮಕ್ಕಳ ಜೊತೆ ರಂಗಭೂಮಿಯನ್ಟುನತ್ತಿರುವುದು ಈ ಭಾಗಕ್ಕೆ ದೊಡ್ಡ ಕೊಡುಗೆ. ಸಕಲರಂಗ ಹೆಜ್ಜೆ ಸಂಸ್ಥೆ ಇದನ್ನು ಹೀಗೆ ಮುಂದುವರೆಸಿಕೊಂಡು ಹೋಗಲಿ ಎಂದು ಆಶಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್, ಲೇಖಕರಾದ ಪಾತಮುತ್ತಕರಹಳ್ಳಿ ಮು.ಚಲಪತಿ ಗೌಡ, ಜಲಜ, ಸತೀಶ್ ಸಿ.ಎಲ್, ರಾಜೇಶ್ ಜಿ, ಭಾಸ್ಕರ್ ಬಾಬು ಮತ್ತಿತರರು ಪಾಲ್ಗೊಂಡಿದ್ದರು.
ಮುಲ್ಲಾ ನಸ್ರುದ್ದೀನ್ ಪ್ರದರ್ಶನ: ನಾಟಕೋತ್ಸವದ ಎರಡನೇ ದಿನ ನಿರ್ದಿಗಂತ ತಂಡವು ಶಕೀಲಾ ಅಹ್ಮದ್ ನಿರ್ದೇಶನದ ‘ಕೊಡಲ್ಲ ಅಂದ್ರೆ ಕೊಡಲ್ಲ’, ಕಾಲಿ ರಂಗ ತಂಡದ ನಿರಂಜನ್ ನಿರ್ದೇಶನದ ‘ಮುಲ್ಲಾ ನಸ್ರುದ್ದೀನ’ ನಾಟಕಗಳು ಪ್ರದರ್ಶನಗೊಂಡವು.
ಕರ್ನಾಟಕ ವೈಜ್ಞಾನಿಕ ಸಂಶೋಧನಾ ಮಂಡಳಿಯ ಹುಲಿಕಲ್ ನಟರಾಜ್, ಕಸಾಪ ಜಿಲ್ಲಾ ಅಧ್ಯಕ್ಷ ಪ್ರೊ.ಕೋಡಿ ರಂಗಪ್ಪ, ನಾಗಮಣಿ ಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ ರವಿಕುಮಾರ್, ದೇವನಹಳ್ಳಿ ದೇವರಾಜ್, ಪುತ್ತೂರು ಲೋಕೇಶಪ್ಪ, ರಾಜಶೇಖರ್ ಪಾಲ್ಗೊಂಡಿದ್ದರು.