ADVERTISEMENT

ಚಿಕ್ಕಬಳ್ಳಾಪುರ: ದರ್ಶನಕ್ಕೆ ಸಂತುಷ್ಟವಾಯ್ತು ಆಸ್ತಿಕ ಗಣ

ಎರಡೂವರೆ ತಿಂಗಳ ಬಳಿಕ ಬಾಗಿಲು ತೆರೆದ ದೇವಾಲಯಗಳು, ಭಕ್ತರಿಗೆ ಷರತ್ತು ಬದ್ಧ ದರ್ಶನಕ್ಕೆ ಅವಕಾಶ

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 12:24 IST
Last Updated 8 ಜೂನ್ 2020, 12:24 IST
ಚಿಕ್ಕಬಳ್ಳಾಪುರದ ಕಂದವಾರ ಬಾಗಿಲಿನಲ್ಲಿರುವ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಭಕ್ತರು ದರ್ಶನ ಪಡೆದರು.
ಚಿಕ್ಕಬಳ್ಳಾಪುರದ ಕಂದವಾರ ಬಾಗಿಲಿನಲ್ಲಿರುವ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಭಕ್ತರು ದರ್ಶನ ಪಡೆದರು.   

ಚಿಕ್ಕಬಳ್ಳಾಪುರ: ಕೊರೊನಾ ವೈರಸ್‌ ಸೋಂಕಿನ ಭೀತಿ ಮತ್ತು ಲಾಕ್‌ಡೌನ್‌ ಕಾರಣಕ್ಕೆ ಜಿಲ್ಲೆಯಲ್ಲಿ ಕಳೆದ ಎರಡೂವರೆ ತಿಂಗಳಿಂದ ಬಾಗಿಲು ಮುಚ್ಚಿದ್ದ ದೇವಸ್ಥಾನಗಳು ಸೋಮವಾರ ಎಂದಿನಂತೆ ಬಾಗಿಲು ತೆರೆದು, ಭಕ್ತರಿಗೆ ಷರತ್ತು ಬದ್ಧ ದರ್ಶನ ಅವಕಾಶ ಕಲ್ಪಿಸಿದವು.

ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ ಅನ್ವಯ ಸೋಮವಾರದಿಂದ ‘ಅನ್‌ಲಾಕ್‌ 1.0’ ಆರಂಭವಾಗಿದೆ. ಪರಿಷ್ಕೃತ ಮಾಗಸೂಚಿಯ ಅನ್ವಯ ರಾಜ್ಯ ಸರ್ಕಾರ ದೇವಾಲಯ ತೆರೆಯಲು ಅನುಮತಿ ನೀಡಿತ್ತು, ಹೀಗಾಗಿ, ಭಾನುವಾರವೇ ದೇಗುಲಗಳನ್ನು ಶುಚಿಗೊಳಿಸಿ, ಮುಂಜಾಗ್ರತಾ ಕ್ರಮಗಳನ್ನು ಒಳಗೊಂಡ ದರ್ಶನಕ್ಕೆ ಅಣಿಗೊಳಿಸಲಾಗಿತ್ತು.

ಪ್ರತಿ ದೇವಾಲಯಗಳಲ್ಲಿ ಕೂಡ ಭಕ್ತರ ದರ್ಶನ ಸಾಲಿನಲ್ಲಿ ವ್ಯಕ್ತಿಗತ ಅಂತರ (6 ಅಡಿ) ಕಾಪಾಡಿಕೊಳ್ಳಲು ಅನುಕೂಲವಾಗುವಂತೆ ಬಿಳಿ ವೃತ್ತಗಳನ್ನು ರಚಿಸಲಾಗಿತ್ತು. ಅನೇಕ ಕಡೆಗಳಲ್ಲಿ ಕಟ್ಟಿಗೆಯ ತಡೆಬೇಲಿ ನಿರ್ಮಿಸಲಾಗಿತ್ತು. ಪ್ರವೇಶದ್ವಾರಗಳಲ್ಲಿ ಸ‍್ಯಾನಿಟೈಸರ್‌ ಸ್ಟ್ಯಾಂಡ್‌ ಅಳವಡಿಸಿದ್ದು ಗೋಚರಿಸಿತು.

ADVERTISEMENT

ಸೋಮವಾರ ಬೆಳಿಗ್ಗೆಯಿಂದಲೇ ಭಕ್ತರು ದೇವಾಲಯಗಳತ್ತ ಮುಖ ಮಾಡಿದ್ದರು. ಕೆಲ ದೇವಾಲಯಗಳಲ್ಲಿ ಸರತಿ ಸಾಲಿ‌ನಲ್ಲಿ ನಿಂತು ದರ್ಶನ ಪಡೆಯುತ್ತಿದ್ದ ದೃಶ್ಯಗಳು ಕಂಡುಬಂದವು. ಸುರಕ್ಷತೆಯ ದೃಷ್ಟಿಯಿಂದ ದೇವಾಲಯಗಳಲ್ಲಿ ಭಕ್ತರಿಗೆ ತೀರ್ಥ, ಪ್ರಸಾದ ವಿತರಿಸದಂತೆ ಷರತ್ತು ವಿಧಿಸಿದ ಕಾರಣಕ್ಕೆ ಭಕ್ತರು ದರ್ಶನ ಮಾತ್ರದಿಂದಲೇ ಧನ್ಯತಾಭಾವ ಅನುಭವಿಸಿದರು.

ಜಿಲ್ಲೆಯಲ್ಲಿ ಸೋಮವಾರ ಪ್ರಮುಖವಾಗಿ ನಂದಿ ಗ್ರಾಮದ ಭೋಗನಂದೀಶ್ವರ, ರಂಗಸ್ಥಳದ ರಂಗನಾಥ ಸ್ವಾಮಿ, ಎಲ್ಲೋಡು ಆದಿನಾರಾಯಣಸ್ವಾಮಿ, ವಿಧುರಾಶ್ವತ್ಥದ ಅಶ್ವತ್ಥ ನಾರಾಯಣ ಸ್ವಾಮಿ, ಗಡಿದಂ ಲಕ್ಷ್ಮೀ ವೆಂಕಟರಮಣಸ್ವಾಮಿ, ಕೈವಾರ ಅಮರನಾರಾಯಣಸ್ವಾಮಿ ದೇಗುಲಗಳಲ್ಲಿ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ದರ್ಶನಕ್ಕೆ ಬಂದಿದ್ದು ಗೋಚರಿಸಿತು.

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಎ, ಬಿ ಮತ್ತು ಸಿ ದರ್ಜೆಯ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿತ್ತು. ಪ್ರತಿ ದೇವಾಲಯದ ಪ್ರವೇಶದ್ವಾರಗಳಲ್ಲಿ ಕೈ ಶುಚಿಗೊಳಿಸಿಕೊಳ್ಳಲು ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು.

ಮಾಸ್ಕ್ ಧರಿಸಿ ಬಂದವರಿಗೆ ಮಾತ್ರ ಥರ್ಮಲ್‌ ಸ್ಕ್ಯಾನಿಂಗ್ ಸಾಧನದಿಂದ ಪರಿಶೀಲಿಸಿ ದೇಗುಲಗಳ ಒಳಗೆ ಬಿಡಲಾಯಿತು. 65 ವಯಸ್ಸಿನ ವೃದ್ಧರು, 10 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರಿಗೆ ದೇವಸ್ಥಾನ ಪ್ರವೇಶ ನಿರ್ಬಂಧಿಸಲಾಗಿತ್ತು.

ದೇವಾಲಯಗಳಲ್ಲಿ ಇರುವವರು ಮತ್ತು ದರ್ಶನಕ್ಕೆ ಬಂದ ಭಕ್ತರ ಮೊಬೈಲ್‌ನಲ್ಲಿ ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್‌ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು. ಆದರೆ, ಆ ವಿಚಾರ ಅಷ್ಟಾಗಿ ಗಂಭೀರವಾಗಿ ಭಕ್ತರು ಪರಿಗಣಿಸಿದ್ದು ಕಂಡು ಬರಲಿಲ್ಲ.

ಪ್ರಸ್ತುತ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿರುವಜಿಲ್ಲಾಡಳಿತ ಜನಸಂದಣಿ ಸೇರುವ ಉತ್ಸವಗಳಾದ ಬ್ರಹ್ಮ ರಥೋತ್ಸವ, ಜಾತ್ರೆ ಮುಂತಾದ ವಿಶೇಷ ಧಾರ್ಮಿಕ ಕೈಂಕರ್ಯಗಳನ್ನು ಮುಂದಿನ ಆದೇಶದವರೆಗೆ ನಿಷೇಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.