ADVERTISEMENT

ಚಿಕ್ಕಬಳ್ಳಾಪುರ: ಕಾರ್ಡ್‌ಗೆ ಅಲೆದಾಡಿ ನೊಂದ ಬಡಜೀವ

ಮಾಸಾಶನಕ್ಕಾಗಿ ಇಳಿ ವಯಸ್ಸಿನಲ್ಲೂ ಕುಗ್ರಾಮದಿಂದ 10 ಕಿ.ಮೀ ದೂರದ ಊರಿಗೆ ಕಾಲ್ನಡಿ, ಆಟೊ ಮೂಲಕ ಅಲೆದಾಟ

ಈರಪ್ಪ ಹಳಕಟ್ಟಿ
Published 10 ಜೂನ್ 2020, 19:30 IST
Last Updated 10 ಜೂನ್ 2020, 19:30 IST
ಆಧಾರ್‌ ತೋರಿಸಿ ಪಡಿತರ ಚೀಟಿ ಕೊಡಿಸುವಂತೆ ಕಣ್ಣೀರು ಹಾಕಿ ಮೊರೆಯಿಟ್ಟ ಹುಸೇನ್‌ ಬೀ
ಆಧಾರ್‌ ತೋರಿಸಿ ಪಡಿತರ ಚೀಟಿ ಕೊಡಿಸುವಂತೆ ಕಣ್ಣೀರು ಹಾಕಿ ಮೊರೆಯಿಟ್ಟ ಹುಸೇನ್‌ ಬೀ   

ಚಿಕ್ಕಬಳ್ಳಾಪುರ: ‘ಮನೆಯಿಂದ ಸೊಸೆ ಹೊರಹಾಕಿದ್ದಾಳೆ ಸ್ವಾಮಿ. ದುಡಿದು ತಿನ್ನುವ ಶಕ್ತಿ ಇಲ್ಲ. ದುಡಿದು ಹಾಕುವ ಗಂಡ ಗತಿಸಿ ವರ್ಷಗಳೇ ಕಳೆದಿವೆ. ರೇಷನ್‌ ಅಕ್ಕಿ ತಿಂದಾದರೂ ಇರುವಷ್ಟು ದಿನ ಬದುಕೋಣ ಎಂದರೆ ರೇಷನ್‌ ಕಾರ್ಡ್‌ ಕೊಡಲು ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ. ನೀವಾದರೂ ಕಾರ್ಡ್ ಕೊಡಿಸಿ ಪುಣ್ಯ ಕಟ್ಟಿಕೊಳ್ಳಿ’

ಬಾಗೇಪಲ್ಲಿ ತಾಲ್ಲೂಕಿನ ಬಿಳ್ಳೂರು ರಸ್ತೆಯ ಕಲ್ಲಿಪಲ್ಲಿ ಗ್ರಾಮದಲ್ಲಿ ಬುಧವಾರ ಪಾತಪಾಳ್ಯಕ್ಕೆ ಹೋಗಲು ರಚ್ಚು ಕಟ್ಟೆಯ ಮೇಲೆ ಆಟೊಗಳಿಗಾಗಿ ಕಾಯುತ್ತ ಬೇಸರದಲ್ಲಿ ಕುಳಿತಿದ್ದ ಅಡವಿಕೊತ್ತೂರಿನ 77 ವರ್ಷದ ವೃದ್ಧೆ ಹುಸೇನ್‌ ಬೀ ಅವರು ಕಣ್ಣೀರು ಹಾಕುತ್ತಲೇ ದೈನ್ಯದಿಂದ ಮೊರೆಯಿಟ್ಟ ಪರಿ ಇದು.

ಚೈತನ್ಯ ಕಳೆದುಕೊಂಡು ಬಾಗಿದ ಸುಕ್ಕುಗಟ್ಟಿದ ಶರೀರ, ಮಂಜಾದ ಕಣ್ಣುಗಳು, ನಡೆದಾಡಲು ತ್ರಾಣವಿಲ್ಲದೆ ನಡುಗುವ ಕೈಕಾಲುಗಳು, ವಯೋ ಸಹಜ ನೋವುಗಳ ಜತೆಗೆ ಹೆತ್ತ ಮಕ್ಕಳೇ ಜೀವನದ ಸಂಧ್ಯಾಕಾಲದಲ್ಲಿ ಕೈಬಿಟ್ಟ ಆಘಾತದಿಂದ ಜರ್ಜರಿತವಾಗಿದ್ದ ಆ ಇಳಿಜೀವದ ನೋವು ನೋಡಿದವರಲ್ಲಿ ಕರುಣೆ ಉಕ್ಕಿಸುತ್ತಿತ್ತು.

ADVERTISEMENT

ಪಡಿತರ ಚೀಟಿಗಾಗಿ ಹುಸೇನ್‌ ಬೀ ಅವರು ಹತ್ತು ಹಲವು ಬಾರಿ ಬಾಗೇಪಲ್ಲಿ ಮತ್ತು ಪಾತಪಾಳ್ಯಕ್ಕೆ ಅಲೆದಾಡಿ ನೊಂದು ಹೋಗಿದ್ದಾಗಿ ಅಳಲು ತೋಡಿಕೊಂಡರು. ಅನಕ್ಷರಸ್ಥರಾದ ನಮಗೆ ಅಧಿಕಾರಿಗಳು ಏನೆನೋ ಸಬೂಬುಗಳನ್ನು ಹೇಳಿ ಕಚೇರಿಗೆ ತಿರುಗಾಡಿಸುತ್ತಿದ್ದಾರೆ ಕಣ್ಣೀರು ಹಾಕಿದರು.

ಬೆಟ್ಟಗುಡ್ಡಗಳಿಂದ ಆವೃತ್ತವಾದ ಅರಣ್ಯ ಪ್ರದೇಶದಲ್ಲಿರುವ ಮೂಲಸೌಕರ್ಯ ವಂಚಿತ ಕುಗ್ರಾಮ ಅಡವಿಕೊತ್ತೂರಿನಿಂದ ಬುಧವಾರ ಕೂಡ ಅವರು ಪಡಿತರ ಚೀಟಿ ಮಾಡಿಸಲು ಸಮೀಪದ ಬಿಳ್ಳೂರಿಗೆ ಸುಮಾರು 4 ಕಿ.ಮೀ ನಷ್ಟು ದೂರವನ್ನು ಸೋತ ಕಾಲಿನಲ್ಲೇ ನಡೆದು ಬಂದು ಆಟೊಗಳಿಗಾಗಿ ಕಾಯುತ್ತಿದ್ದರು.

‘ಮಗ–ಸೊಸೆಯಿಂದ ಎಳ್ಳಷ್ಟು ಸಹಾಯವಿಲ್ಲ. ಗುಡಿಸಲಲ್ಲಿ ಬದುಕುತ್ತಿರುವೆ. ಪಿಂಚಣಿ ನೀಡಲು ಊರಿಗೆ ಫೋಸ್ಟ್‌ಮೆನ್‌ ಕೂಡ ಬರುವುದಿಲ್ಲ. ಪ್ರತಿ ಬಾರಿ ಪಿಂಚಣಿಗಾಗಿ ತೋಳಪಲ್ಲಿ ವರೆಗೆ ನಡೆದು ಹೋಗಿ ಬರುವುದರೊಳಗೆ ಜೀವ ಹೈರಾಣಾಗುತ್ತದೆ. ಇರುವಷ್ಟು ದಿನ ರೇಷನ್‌ ಅಕ್ಕಿ ತಿಂದಾದರೂ ಬದುಕೋಣ ಎಂದರೆ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ’ ಎಂದು ಹನಿಗಣ್ಣಾದರು ಹುಸೇನ್‌ ಬೀ.

‘ಒಂದೆಡೆ ಹೆತ್ತ ಮಕ್ಕಳು ಬೀದಿಗೆ ತಳ್ಳಿದ ನೋವು, ಇನ್ನೊಂದೆಡೆ ಕೆಟ್ಟ ಆಡಳಿತ ವ್ಯವಸ್ಥೆಯಿಂದಾಗಿ ಸಾಕಷ್ಟು ವಯೋವೃದ್ಧರು ವಿವಿಧ ಸಮಸ್ಯೆಗಳಿಂದ ನಲುಗಿ ಒಳಗೊಳಗೆ ನೋವು ತಿನ್ನುತ್ತಿದ್ದಾರೆ. ಕಳೆದ ಕೆಲ ತಿಂಗಳಿಂದ ಸಾಕಷ್ಟು ವಯೋವೃದ್ಧರಿಗೆ ಮಾಸಾಶನ ದೊರೆತಿಲ್ಲ. ಅಧಿಕಾರಿಗಳನ್ನು ವಿಚಾರಿಸಿದರೆ ಬೇಜವಾಬ್ದಾರಿ ವರ್ತನೆ ತೋರುತ್ತಾರೆ’ ಎಂದು ಕಲ್ಲಿಪಲ್ಲಿ ನಿವಾಸಿ ರಮೇಶ್‌ ಬೇಸರ ವ್ಯಕ್ತಪಡಿಸಿದರು.

‘ಅಡವಿಕೊತ್ತೂರು ಅರಣ್ಯ ಪ್ರದೇಶದಲ್ಲಿರುವ ಗಡಿ ಗ್ರಾಮ. ಫೋಸ್ಟ್‌ಮೆನ್‌ಗಳು ಅಂತಹ ಹಳ್ಳಿಗಳತ್ತ ತಲೆ ಹಾಕದಿದ್ದರೆ ಹಳ್ಳಿಗಳಲ್ಲಿ ಮಾಸಾಶನವನ್ನೇ ನಂಬಿಕೊಂಡು ಬದುಕುವ ಅಶಕ್ತ ವಯೋವೃದ್ಧರ ಪಾಡು ಏನಾಗಬೇಕು. ನಡೆದಾಡಲು ಆಗದ ವಯಸ್ಸಿನಲ್ಲಿ ಹತ್ತಾರು ಕಿ.ಮೀ ದೂರ ಬಂದು ಪಿಂಚಣಿ ಪಡೆದು ಹೋಗಿ ಎನ್ನುವ ಅಧಿಕಾರಿಗಳಿಗೆ ಮಾನವೀಯತೆ ಇದೆಯೇ’ ಎಂದು ಖಾರವಾಗಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.