ADVERTISEMENT

ಚಿಮುಲ್ ಚುನಾವಣೆ: ಯಾರ ತೆಕ್ಕೆಗೆ ಶಿಡ್ಲಘಟ್ಟ ಕ್ಷೇತ್ರ

ಚಿಮುಲ್ ಚುನಾವಣೆ; ಬಂಕ್ ಮುನಿಯಪ್ಪ, ಬೆಳ್ಳೂಟಿ ಚೊಕ್ಕೇಗೌಡ ನಡುವೆ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 5:38 IST
Last Updated 25 ಜನವರಿ 2026, 5:38 IST
ಬಂಕ್ ಮುನಿಯಪ್ಪ
ಬಂಕ್ ಮುನಿಯಪ್ಪ   

ಶಿಡ್ಲಘಟ್ಟ: ಈ ಹಿಂದೆ ಕೋಚಿಮುಲ್‌ನಲ್ಲಿ ಇದ್ದಾಗ ಶಿಡ್ಲಘಟ್ಟ ಕ್ಷೇತ್ರವು ಒಂದೇ ಕ್ಷೇತ್ರವಾಗಿತ್ತು. ಆದರೆ ಚಿಮುಲ್ ಅಸ್ತಿತ್ವಕ್ಕೆ ಬಂದ ನಂತರ ಎರಡು ಕ್ಷೇತ್ರಗಳಾಗಿವೆ.  ಶಿಡ್ಲಘಟ್ಟ ಮತ್ತು ಜಂಗಮಕೋಟೆ ಕ್ಷೇತ್ರಗಳು ಅಸ್ತಿತ್ವ ಪಡೆದಿವೆ. 

ಶಿಡ್ಲಘಟ್ಟ ಕ್ಷೇತ್ರ ವ್ಯಾಪ್ತಿಗೆ ಬಶೆಟ್ಟಹಳ್ಳಿ ಹೋಬಳಿ, ಕಸಬಾ ಹೋಬಳಿಯ ಆನೂರು, ಕುಂದಲಗುರ್ಕಿ, ದೇವರಮಳ್ಳೂರು, ಅಬ್ಲೂಡು, ಶಿಡ್ಲಘಟ್ಟ ನಗರಸಭೆ ಒಳಪಡುತ್ತವೆ. ಈ ಕ್ಷೇತ್ರ ವ್ಯಾಪ್ತಿಯಲ್ಲಿ 80 ಡೆಲಿಗೇಟ್‌ಗಳು (ಮತದಾರರು) 

ಫೆ.1ರಂದು ಚಿಮುಲ್ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಶಿಡ್ಲಘಟ್ಟ ಕ್ಷೇತ್ರದಿಂದ ಬಿಜೆಪಿ ಜೆಡಿಎಸ್‌ನ ಎನ್‌ಡಿಎ ಬೆಂಬಲಿತ ಅಭ್ಯರ್ಥಿಯಾಗಿ ಬಂಕ್ ಮುನಿಯಪ್ಪ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಬೆಳ್ಳೂಟಿ ಚೊಕ್ಕೇಗೌಡ ಸ್ಪರ್ಧಿಸಿದ್ದಾರೆ.

ADVERTISEMENT

ಶಾಸಕ ಬಿ.ಎನ್.ರವಿಕುಮಾರ್ ಅವರ ಆಪ್ತ ಬಂಕ್ ಮುನಿಯಪ್ಪ ಕಳೆದ ಬಾರಿಯ ಕೋಚಿಮುಲ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಒಂದು ಮತದಿಂದ ಪರಾಭವಗೊಂಡಿದ್ದರು. ಅದಕ್ಕೂ ಹಿಂದೆ ಕೋಚಿಮುಲ್ ನಿರ್ದೇಶಕರಾಗಿದ್ದರು. ಈ ಬಾರಿ ಅವರು ಎನ್‌ಡಿಎ ಅಭ್ಯರ್ಥಿಯಾಗಿದ್ದಾರೆ.

ಅವರು ನಿರ್ದೇಶಕರಾಗಿದ್ದ ಅವಧಿಯಲ್ಲಿ ಬೈಪಾಸ್ ರಸ್ತೆಯಲ್ಲಿ ಸುಸಜ್ಜಿತ ಶಿಬಿರ ಕಚೇರಿ ನಿರ್ಮಾಣ, ಇರುಗಪ್ಪನಹಳ್ಳಿ ಬಳಿ ಜಾನುವಾರುಗಳಿಗೆ ಆಹಾರ ಘಟಕಕ್ಕಾಗಿ 25 ಎಕರೆ ಜಮೀನು ಮಂಜೂರು ಮಾಡಿಸಿರುವುದು, 25 ಹೊಸ ಡೇರಿಗಳು ಮತ್ತು 15 ಶಿತಲೀಕರಣ ಕೇಂದ್ರಗಳ ಸ್ಥಾಪನೆ ಮಾಡಿದ್ದಾರೆ. ಹಲವಾರು ವರ್ಷಗಳ ರಾಜಕೀಯ ಅನುಭವ ಇದೆ. ಈಗ ಈ ಹಿರಿಯ ನಾಯಕ ಮತ್ತೆ ಚಿಮುಲ್ ನಿರ್ದೇಶಕರಾಗಲು ಹೋರಾಟ ನಡೆಸಿದ್ದಾರೆ. ಶಾಸಕ ಮೇಲೂರು ಬಿ.ಎನ್.ರವಿಕುಮಾರ್ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಬೆಳ್ಳೂಟಿ ಚೊಕ್ಕೇಗೌಡ ಅವರ ತಾತ ಹಲವು ವರ್ಷಗಳ ಕಾಲ ಮಂಡಲ ಪಂಚಾಯಿತಿ ಚೇರ್ಮನ್ ಆಗಿದ್ದವರು. ಕಾಂಗ್ರೆಸ್ ಕುಟುಂಬದ ಹಿನ್ನೆಲೆ ಮತ್ತು ಜನರೊಂದಿಗಿನ ಒಡನಾಟದಿಂದ ಒಮ್ಮತದ ಅಭ್ಯರ್ಥಿಯಾಗಿದ್ದಾರೆ. ಮೊಟ್ಟಮೊದಲ ಬಾರಿಗೆ ಚುನಾವಣಾ ಕಣಕ್ಕೆ ಧುಮುಕಿರುವ ಇವರಿಗೆ ಕಾಂಗ್ರೆಸ್ ಮುಖಂಡರ ಬೆಂಬಲ ಸಿಕ್ಕಿದೆ.

ಮೇಲ್ನೋಟಕ್ಕೆ ಎರಡೂ ಪಕ್ಷಗಳಲ್ಲಿ ಒಗ್ಗಟ್ಟು, ಒಮ್ಮತವಿರುವಂತೆ ಭಾಸವಾದರೂ ಒಳಸುಳಿಗಳು ಬೇರೆಯೇ ರೀತಿಯಾಗಿ ಕಂಡುಬರುತ್ತಿವೆ. ಎನ್.ಡಿ.ಎ ಎಂಬುದಾಗಿ ಜೆ.ಡಿ.ಎಸ್ ಮತ್ತು ಬಿ.ಜೆ.ಪಿ ಮೈತ್ರಿ ಮಾಡಿಕೊಂಡಿದ್ದರೂ ಒಟ್ಟಿಗೆ ಸಭೆಯನ್ನು ನಡೆಸಿಲ್ಲ.

ಬಿಜೆಪಿ ಯಿಂದ ಪಲಿಚೇರ್ಲು ಗ್ರಾಮದ ಪಿ.ವಿ.ದೇವರೆಡ್ಡಿ ಅವರನ್ನು ಕಣಕ್ಕೆ ಇಳಿಸಲಾಗಿತ್ತು. ನಂತರ ಅವರು ನಾಮಪತ್ರ ವಾಪಸ್ ತೆಗೆದಿದ್ದಾರೆ. ಬಿಜೆಪಿ ಜಿಲ್ಲಾ ಅಧ್ಯಕ್ಷ ಸೀಕಲ್ ರಾಮಚಂದ್ರ ಗೌಡ ಮತ್ತು ಮಾಜಿ ಶಾಸಕ ಎಂ.ರಾಜಣ್ಣ ಎನ್.ಡಿ.ಎ ಅಭ್ಯರ್ಥಿ ಪರವಾಗಿ ಯಾವ ರೀತಿ ಬೆಂಬಲ ನೀಡುವರು ಎಂಬುದು ಚರ್ಚೆಗೆ ಒಳಗಾಗಿದೆ.

ಕಾಂಗ್ರೆಸ್ ಪಕ್ಷದಿಂದ ಮುಖಂಡ ರಾಜೀವ್ ಗೌಡ ಅಮಾನತುಗೊಂಡಿದ್ದಾರೆ. ಅವರ  ಬೆಂಬಲಿಗರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದು ಕೂಡ ಚರ್ಚೆಗೆ ಒಳಗಾಗಿದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಅವರ ತೀರ್ಮಾನಗಳೂ ಚುನಾವಣೆಯ ದಿಕ್ಕನ್ನು ಬದಲಿಸಲು ಶಕ್ಯವಿದೆ.

ಹೀಗೆ ಶಿಡ್ಲಘಟ್ಟ ಕ್ಷೇತ್ರದಲ್ಲಿ ಚಿಮುಲ್ ಚುನಾವಣೆಯ ಕಾವು ಜೋರಾಗಿದೆ.

ಚೊಕ್ಕೇಗೌಡ

ಕಾಂಗ್ರೆಸ್ ವರ್ಚಸ್ಸು ಕಾಂಗ್ರೆಸ್ ಪಕ್ಷದ ವರ್ಚಸ್ಸು ಬೆಂಬಲ ಮತ್ತು ಎಲ್ಲಾ ಮುಖಂಡರ ಆಶೀರ್ವಾದ ಇರುವುದರಿಂದ ಯಾವುದೇ ಆತಂಕವಿಲ್ಲದೆ ಚುನಾವಣೆಯನ್ನು ಎದುರಿಸುತ್ತಿರುವೆ. -ಬಿ.ಕೆ.ಚೊಕ್ಕೇಗೌಡ ** ‘ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ’ನಾನು ನಿರ್ದೇಶಕನಾಗಿದ್ದಾಗ ಮಾಡಿರುವ ಸೇವಾಕಾರ್ಯಗಳ ಬೆಂಬಲವಿದೆ. ಶಾಸಕ ಬಿ.ಎನ್.ರವಿಕುಮಾರ್ ಅವರ ದೂರದೃಷ್ಟಿ ಯೋಜನೆಗಳೊಂದಿಗೆ ಇನ್ನಷ್ಟು ಕೆಲಸ ಮಾಡಲು ಮತ ಯಾಚಿಸುವೆ. ಮತದಾರರು ಪ್ರೀತಿ ವಿಶ್ವಾಸದಿಂದ ಬೆಂಬಲಿಸುವುದಾಗಿ ಭರವಸೆ ನೀಡುತ್ತಿದ್ದಾರೆ. -ಬಂಕ್ ಮುನಿಯಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.