
ಮಂಚೇನಹಳ್ಳಿ: ಹೊಸದಾಗಿ ರಚನೆಯಾದ ಮಂಚೇನಹಳ್ಳಿ ಕ್ಷೇತ್ರಕ್ಕೆ ಚಿಮುಲ್ ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
67 ಡೆಲಿಗೇಟ್ (ಮತದಾರರು) ಗಳನ್ನು ಒಳಗೊಂಡ ಮಂಚೇನಹಳ್ಳಿ ಹಾಲು ಒಕ್ಕೂಟದ ಅಧಿಪತಿಯಾಗಲು ಕಾಂಗ್ರೆಸ್, ಬಿಜೆಪಿ–ಜೆಡಿಎಸ್ ಮೈತ್ರಿಕೂಟ ಮತ್ತು ಶಾಸಕ ಕೆ.ಎಚ್. ಪುಟ್ಟಸ್ವಾಮಿ ಗೌಡ ನೇತೃತ್ವದ ಕೆಎಚ್‌ಪಿ ಬಣದ ಬೆಂಬಲಿತ ಅಭ್ಯರ್ಥಿಗಳ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಮಂಚೇನಹಳ್ಳಿ ಹಾಲು ಒಕ್ಕೂಟದ ಕ್ಷೇತ್ರವು ಮಂಚೇನಹಳ್ಳಿ, ಮಣಕನಗುರ್ಕಿ, ಜರಬಂಡಹಳ್ಳಿ, ಪುರ, ಗೌಡಗೆರೆ, ಹಳೇಹಳ್ಳಿ, ಶಾಂಪುರ ಪಂಚಾಯಿತಿ, ಕಲ್ಲಿನಾಯಕನಹಳ್ಳಿ, ಬೇವಿನಹಳ್ಳಿ, ಅಲೀಪುರ, ತರಿದಾಳು, ತೊಂಡೇಬಾವಿ, ಜಿ. ಬೊಮ್ಮಸಂದ್ರ, ಅಲಕಾಪುರ ಪಂಚಾಯಿತಿಗಳನ್ನು ಒಳಗೊಂಡಿದೆ.
67 ಡೆಲಿಗೇಟ್‌ಗಳನ್ನು ಹೊಂದಿದ ಈ ಕ್ಷೇತ್ರದಲ್ಲಿ ಗೌರಿಬಿದನೂರು ಶಾಸಕ ಕೆ.ಎಚ್. ಪುಟ್ಟಸ್ವಾಮಿ ಗೌಡ ಅವರ ಬೆಂಬಲಿತ ಅಭ್ಯರ್ಥಿಯಾಗಿ ಜೆ. ಕಾಂತರಾಜು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕೋಚಿಮುಲ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಇವರಿಗೆ ಇದೆ. ಇವರಿಗೆ ಆಟೊರಿಕ್ಷಾ ಚಿಹ್ನೆ ನೀಡಲಾಗಿದೆ. ಚುನಾವಣೆ ಗೆಲುವಿಗೆ ಶಾಸಕ ಕೆ.ಎಚ್. ಪುಟ್ಟಸ್ವಾಮಿ ಗೌಡ ಅವರ ಬೆಂಬಲವನ್ನೇ ನೆಚ್ಚಿಕೊಂಡಿದ್ದಾರೆ.
ಕಾಂಗ್ರೆಸ್ ಬೆಂಬಲಿತರಾಗಿ ಚುನಾವಣಾ ಅಖಾಡಕ್ಕೆ ಇಳಿದಿರುವ ಅಲಕಾಪುರ ಡೇರಿ ಅಧ್ಯಕ್ಷ ನಾಗರಾಜು ಅವರಿಗೂ ಡೇರಿಯಲ್ಲಿ ಕೆಲಸ ಮಾಡಿದ ಅನುಭವವಿದೆ. ಜೊತೆಗೆ, ಈ ಭಾಗದ ರೈತರ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಇದು ಅವರಿಗೆ ಧನಾತ್ಮಕವಾಗುವ ಸಾಧ್ಯತೆ ಎಂದು ರಾಜಕೀಯ ವಿಶ್ಲೇಷಕರು ಪ್ರತಿಪಾದಿಸುತ್ತಾರೆ. ಇಷ್ಟೇ ಅಲ್ಲದೆ, ಇವರ ಗೆಲುವಿಗಾಗಿ ರಣತಂತ್ರ ಹೆಣೆಯುತ್ತಿರುವ ಮಾಜಿ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಅವರು ಹಳ್ಳಿ ಮತ್ತು ಹೋಬಳಿ ಮಟ್ಟದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ಈ ಇಬ್ಬರಿಗೂ ಪ್ರಬಲ ಸ್ಪರ್ಧೆಯೊಡ್ಡಲು ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಶ್ರೀನಾಥ್ ಬಾಬು ಹೊರಹೊಮ್ಮಿದ್ದು, ಮಂಚೇನಹಳ್ಳಿ ಹಾಲು ಒಕ್ಕೂಟದ ಚುನಾವಣಾ ಕಣವು ರಂಗೇರುವಂತೆ ಮಾಡಿದೆ. ಶ್ರೀನಾಥ್ ಅವರ ಗೆಲುವಿಗೆ ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಮತ್ತು ಕೆಎಚ್‌ಪಿ ಬಣದ ಅಭ್ಯರ್ಥಿಗಳಿಗೆ ಶ್ರೀನಾಥ್ ಅವರು ಪ್ರಬಲ ಪೈಪೋಟಿ ಒಡ್ಡುವ ನಿರೀಕ್ಷೆ ಇದೆ. ಹೀಗಾಗಿ, ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬುದು ಮತದಾರರೇ ನಿರ್ಣಯಿಸಲಿದ್ದಾರೆ.
ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ
ಹತ್ತು ವರ್ಷ ಹಾಲು ಒಕ್ಕೂಟದ ಅಧ್ಯಕ್ಷನಾಗಿ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿದೆ. ಇದೇ ವೇಳೆ ನೌಕರರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಮಾಡುತ್ತ ಬಂದಿದ್ದೇನೆ. ಹಾಲಿನ ಗುಣಮಟ್ಟದಲ್ಲಿ ಜಿಲ್ಲೆಯು ಪ್ರಥಮ ಸ್ಥಾನ ಪಡೆಯುವಂತೆ ಮಾಡಿದ್ದೇನೆ. ತಾಲ್ಲೂಕಿನ ಬಿಎಂಸಿ ಗಳಿಗೆ ಸೋಲಾರ್ ಅಳವಡಿಸಿ ಸರ್ಕಾರದಿಂದ ಸಹಾಯಧನ ಕೊಡಿಸುವ ಯೋಜನೆ ಸಹ ರೂಪಿಸಲಾಗುತ್ತಿದೆ. ರೈತರಿಗಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಕಾಂತರಾಜು ಚಿಮುಲ್ ಕೆಎಚ್‌ಪಿ ಅಭ್ಯರ್ಥಿ
ಹತ್ತು ವರ್ಷದಿಂದ ರೈತರಿಗಾಗಿ ಕೆಲಸ ಮಾಡಿದ್ದೇವೆ. ಈ ಮೊದಲು ಇದ್ದವರು ಶೀತಲೀಕರಣ ಘಟಕವನ್ನು ಮುಚ್ಚಿ ರೈತರನ್ನು ಬೀದಿಗೆ ತಂದಿದ್ದಾರೆ. ರೈತರಿಗೆ ಹನುಮಂತಪುರ ಹಾಲಿನ ಕೇಂದ್ರದಲ್ಲಿ ಹಲವು ಅನುಕೂಲ ಮಾಡಿಕೊಡಲಾಗಿದೆ–ಶ್ರೀನಾಥ್ ಬಾಬು ಮೈತ್ರಿಕೂಟದ ಅಭ್ಯರ್ಥಿ
ನಾನು ರೈತನ ಕೆಲಸ ಮಾಡುತ್ತಿದ್ದೇನೆ. ಅಲಕಾಪುರ ಹಾಲಿನ ಕೇಂದ್ರದಲ್ಲಿ ₹50 ಸಾವಿರ ಇದ್ದ ಹಣವನ್ನು ₹20 ಲಕ್ಷ ಮಾಡಿದ್ದೇನೆ. ರೈತರ ಸಮಸ್ಯೆಗಳನ್ನು ಬಗೆಹರಿಸುತ್ತಾ ಬಂದಿದ್ದೇನೆ. ಈ ಕಾರಣದಿಂದ ರೈತರು ನನ್ನನ್ನು ಗೆಲ್ಲಿಸುವ ನಿರೀಕ್ಷೆ ಇದೆ.ನಾಗರಾಜ್ ಚಿಮುಲ್ ಕಾಂಗ್ರೆಸ್ ಅಭ್ಯರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.