
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಚುನಾವಣೆಯಲ್ಲಿ 8ರಿಂದ 10 ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲ್ಲುವರು ಎಂದು ಸಂಸದ ಡಾ.ಕೆ.ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಂದು ಮತಕ್ಕೆ ₹3 ಲಕ್ಷ, ₹5 ಲಕ್ಷ ನೀಡುತ್ತಿದ್ದಾರೆ. ಹೀಗೆ ಹಣ ನೀಡುವವರಿಂದ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಮತ್ತು ರೈತರ ಅಭಿವೃದ್ಧಿ ಸಾಧ್ಯವೇ’ ಎಂದು ಪ್ರಶ್ನಿಸಿದರು.
ಚಿಮುಲ್ ಜಿಲ್ಲೆಗೆ ತರಬೇಕು ಎನ್ನುವ ಆಸೆ ಬಹಳ ದಿನಗಳಿಂದ ಇತ್ತು. ಚಿಮುಲ್ ರಚನೆಯ ವೇಳೆ ಕಾಂಗ್ರೆಸ್‌ನವರು ಕ್ಷುಲ್ಲಕ ರಾಜಕೀಯ ಮಾಡಿದರು. ಚಿಮುಲ್ ಚುನಾವಣೆಯಲ್ಲಿ ಹಣ ಕೊಟ್ಟವರಿಗೆ ಮತ ನೀಡಬೇಡಿ. ರೈತರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಮತ ನೀಡಿ ಎಂದು ಕೋರಿದರು.
‘ಹಾಲು ಒಕ್ಕೂಟ ಪವಿತ್ರವಾದ ಸಂಸ್ಥೆ. ನನ್ನ ತಂದೆ ತಾಯಿಯನ್ನು ಎಷ್ಟು ಗೌರವಿಸುವೆನೊ ಅದೇ ರೀತಿಯಲ್ಲಿ ಒಕ್ಕೂಟ ಗೌರವಿಸುವೆ. ಕಳ್ಳರು, ಸುಳ್ಳರು ಭ್ರಷ್ಟಾಚಾರ ಮಾಡುವವರನ್ನು ದಯ
ವಿಟ್ಟು ಆಯ್ಕೆ ಮಾಡಬೇಡಿ. ಕೆಲವರು ಪ್ಯಾಷನ್‌ಗಾಗಿ ಚುನಾವಣೆಗೆ ಬಂದಿದ್ದಾರೆ. ನಿಮಗೆ ಸ್ಪಂದಿಸುವ ನಿರ್ದೇಶಕರನ್ನು ಆಯ್ಕೆ ಮಾಡಿ’ ಎಂದು ಕೋರಿದರು.
‘ಚಿಕ್ಕಬಳ್ಳಾಪುರದ ನಂದಿ ಭಾಗದಲ್ಲಿ ಎನ್‌ಡಿಎ ಅಭ್ಯರ್ಥಿ ಇಲ್ಲ. ನಾನು ಈ ಕ್ಷೇತ್ರದಲ್ಲಿ ಯಾರಿಗೂ ಬೆಂಬಲ ನೀಡಿಲ್ಲ. ನನಗೂ ಅಲ್ಲಿನ ಅಭ್ಯರ್ಥಿಗಳಿಗೂ ಸಂಬಂಧವಿಲ್ಲ. ನಮ್ಮ ಸ್ಥಳೀಯ ಮುಖಂಡರಿಗೆ ಈ ಕ್ಷೇತ್ರದ ಜವಾಬ್ದಾರಿ ಕೊಟ್ಟಿದ್ದೆ. ಅವರು ಆ ಜವಾಬ್ದಾರಿ ನಿರ್ವಹಣೆಯಲ್ಲಿ ವಿಫಲವಾಗಿದ್ದಾರೆ. ಈ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಸುಲಭವಾಗಿ ಗೆಲ್ಲುತ್ತಿದ್ದರು’ ಎಂದರು.
‘ಎರಡು ವರ್ಷಗಳ ನಂತರ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ನಮ್ಮವರೇ ಅಧ್ಯಕ್ಷರಾಗುವರು. ರಾಜಕೀಯ ಪಕ್ಷ ಎಂದರೆ ವಿಶ್ವಾಸ ಮುಖ್ಯ. ಇಲ್ಲಿದ್ದು ಮತ್ತೊಂದು ಪಕ್ಷ, ಅಭ್ಯರ್ಥಿ ಬೆಂಬಲಿಸುವುದು, ಅಲ್ಲಿದ್ದು ಇಲ್ಲಿ ಕೆಲಸ ಮಾಡುವುದು ಆತ್ಮವಂಚನೆ. ನನ್ನ ರಾಜಕೀಯ ಜೀವನದಲ್ಲಿ ಎಂದಿಗೂ ಈ ಕೆಲಸ ಮಾಡಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.