ಚಿಂತಾಮಣಿ: ತಾಲ್ಲೂಕಿನಲ್ಲಿ ಹಿಂದೆಂದೂ ಕಾಣದ ಬಿಸಿಗಾಳಿ ಬೀಸುತ್ತಿದೆ. ವಾತಾವರಣದಲ್ಲಿ ಉಷ್ಣಾಂಶ ದಾಖಲೆ ನಿರ್ಮಿಸುತ್ತಿದ್ದು, ಬೇಸಿಗೆಯ ಝಳ ದಿನೇ ದಿನೇ ಹೆಚ್ಚಾಗುತ್ತಿದೆ.
ನಗರದಲ್ಲಿ ಕಳೆದ ಒಂದು ವಾರದಿಂದ 32 ಡಿಗ್ರಿ ಸೆಲ್ಸಿಯಸ್ ನಿಂದ ಪ್ರಾರಂಭವಾಗಿ ಮಧ್ಯಾಹ್ನದ ವೇಳೆಗೆ 38 ಡಿಗ್ರಿ ಸೆಲ್ಸಿಯಸ್ ಉಷ್ಟಾಂಶ ದಾಖಲಾಗುತ್ತಿದೆ. ದಿನದ 24 ಗಂಟೆಯೂ ಕನಿಷ್ಠ 28-30 ಡಿಗ್ರಿ ಸೆಲ್ಸಿಯಸ್ ಉಷ್ಠಾಂಶ ಇರುತ್ತದೆ. ಮೇ 5 ರವರೆಗೆ ಬಿಸಿಗಾಳಿ ಮತ್ತು ಶಾಖದ ಅಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಳಗ್ಗೆ 7 ಗಂಟೆಯಿಂದಲೇ ಬಿಸಿಲು ಚುರುಕು ಮುಟ್ಟಿಸುತ್ತಿದೆ. 10 ಗಂಟೆ ಸಮೀಪಿಸುತ್ತಿದ್ದಂತೆ 36, 37 ಡಿಗ್ರಿ ಸೆಲ್ಸಿಯಸ್ ದಾಟುತ್ತದೆ. ಇದರಿಂದ ಜನ ಹೊರ ಬರಲು ಹಿಂಜರಿಯುತ್ತಿದ್ದು, ಮಧ್ಯಾಹ್ನದ ಹೊತ್ತಿನಲ್ಲಿ ಜನ ಓಡಾಡುವುದಕ್ಕೆ ವಿರಾಮ ಹಾಕಿದ್ದಾರೆ.
ಬೀದಿಬದಿ ವ್ಯಾಪಾರಿಗಳು, ವೃದ್ಧರು, ಮಹಿಳೆಯರು, ಮಕ್ಕಳು ಬಿಸಿ ಗಾಳಿ ಹೊಡೆತಕ್ಕೆ ಸುಸ್ತಾಗಿದ್ದಾರೆ. ಮಧ್ಯಾಹ್ನದ ವೇಳೆಗೆ ರಸ್ತೆಗಳಲ್ಲಿ ಜನರು ಕಣ್ಮರೆಯಾಗಿ ಬಿಕೋ ಎನ್ನುತ್ತವೆ. ವಾಹನಗಳ ಸಂಖ್ಯೆಯೂ ವಿರಳವಾಗುತ್ತಿದೆ.
ಜನರು ಬಿಲಿಸಿನ ಆಯಾಸ ದೂರ ಮಾಡಿಕೊಳ್ಳಲು ಎಳನೀರು ಮತ್ತಿತರ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ. ನಗರದ ರಸ್ತೆ ಬದಿಗಳಲ್ಲಿ, ವೃತ್ತಗಳಲ್ಲಿ ಎಳನೀರು. ಮಜ್ಜಿಗೆ, ಕಲ್ಲಂಗಡಿ, ಹಣ್ಣಿನ ಜ್ಯೂಸ್ ಸೇವಿಸುವುದು ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ.
ರೈತರು, ಕಾರ್ಮಿಕರು ಮತ್ತಿತರ ದುಡಿಯುವ ವರ್ಗದ ಪರಿಸ್ಥಿತಿ ಬಿಸಿಲಿನ ತಾಪಕ್ಕೆ ಹೈರಾಣಾಗಿದೆ. ಕಚೇರಿ, ಮನೆಗಳಲ್ಲಿ ಹಗಲು ರಾತ್ರಿ ಫ್ಯಾನ್ ಗಳಿಲ್ಲದೆ ಇರಲು ಅಸಾಧ್ಯವಾದ ಪರಿಸ್ಥಿತಿ ಉಂಟಾಗಿದೆ. ಫ್ಯಾನ್ ಗಳು ನಿರಂತರವಾಗಿ ಸೇವೆ ನೀಡುತ್ತಿದ್ದರೂ, ಅಲ್ಲಿಂದಲೂ ಬಿಸಿ ಗಾಳಿಯೇ ಹೊರಬರುತ್ತಿದೆ. ಬೆಳಗಿನಜಾವ ವಾಯುವಿಹಾರ ಮಾಡುವ ಸಂದರ್ಭದಲ್ಲೂ ತಂಗಾಳಿ ಮಾಯವಾಗಿದೆ.
ಆರೋಗ್ಯ ಕೇಂದ್ರಗಳಲ್ಲಿ ಬಿಸಿಲಿನ ತಾಪದ ಪರಿಸ್ಥಿತಿ ಎದುರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಓಆರ್‌ಎಸ್ ಪುಡಿಯನ್ನು ಅಗತ್ಯವುಳ್ಳವರಿಗೆ ವಿತರಿಸಲಾಗುತ್ತಿದೆ. ರೋಗಿಗಳ ಆರೈಕೆಗಾಗಿ ಐವಿ ಫ್ಲೂಯಿಡ್ಸ್ ಮತ್ತು ಜೀವರಕ್ಷಕ ಔಷಧಿಗಳ ದಾಸ್ತಾನ ಮಾಡಲಾಗಿದೆ.
ಡಾ.ರಾಮಚಂದ್ರಾರೆಡ್ಡಿ ತಾಲ್ಲೂಕು ಆರೋಗ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.