ADVERTISEMENT

ಸರ್ಕಾರಿ ಆಸ್ಪತ್ರೆ ನವೀಕರಣಕ್ಕೆ ₹10 ಕೋಟಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಾಳೆ ಶಂಕುಸ್ಥಾಪನೆ: ಸಚಿವ ಡಾ.ಎಂ.ಸಿ. ಸುಧಾಕರ್

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 6:49 IST
Last Updated 23 ನವೆಂಬರ್ 2025, 6:49 IST

ಚಿಂತಾಮಣಿ: ನಗರದ ಸಾರ್ವಜನಿಕ ಆಸ್ಪತ್ರೆ ನವೀಕರಣಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಕೆ.ಇ.ಎ) ₹10 ಕೋಟಿ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದೆ. ಇದೇ 24ರಂದು ಚಿಕ್ಕಬಳ್ಳಾಪುರ ಜಿಲ್ಲಾ ಪ್ರವಾಸ ಕೈಗೊಳ್ಳಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು. 

ಆಸ್ಪತ್ರೆ ಆವರಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ‘ಸಾರ್ವಜನಿಕ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಅಸ್ಪತ್ರೆ ಉನ್ನತೀಕರಣದ ಜೊತೆಗೆ ಹೊಸಾಗಿ ನಿರ್ಮಾಣವಾಗುತ್ತಿರುವ ತೀವ್ರ ನಿಗಾ ಘಟಕದ ವಿಭಾಗ ಸೇರಿ 400 ಹಾಸಿಗೆಗಳ ಸುಸಜ್ಜಿತ ಕಾರ್ಪೋರೇಟ್ ಆಸ್ಪತೆಯನ್ನಾಗಿ ರೂಪಿಸುವುದು ನನ್ನ ಕನಸು’ ಎಂದು ಹೇಳಿದರು.

ಸರ್ಕಾರ ಹಾಗೂ ವಿವಿಧ ಕಡೆಗಳಿಂದ ಹಣ ಕ್ರೋಢೀಕರಿಸಿ ಹಂತ ಹಂತವಾಗಿ ಕಾಮಗಾರಿ ನಡೆಸಲಾಗುತ್ತಿದೆ ಎಂದರು. 

ADVERTISEMENT

ಆರ್.ಎಂ.ಎನ್.ಸಿ.ಎಚ್ ಯೋಜನೆಯಡಿ ನಿರ್ಮಾಣವಾದ ಮಹಿಳಾ ಮಕ್ಕಳ ಆಸ್ಪತ್ರೆಯನ್ನು 60 ಹಾಸಿಗೆಗಳಿಂದ 100 ಹಾಸಿಗೆಗೆ ಉನ್ನತೀಕರಿಸಲಾಗಿದೆ. ಇದಕ್ಕಾಗಿ ₹6.60 ಕೋಟಿ ವೆಚ್ಚ ಮಾಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಇಲಾಖೆಯಿಂದಲೂ ಸಹಕಾರ ಸಿಕ್ಕಿದೆ. ಸಣ್ಣಪುಟ್ಟ ಕಾಮಗಾರಿಗಳಷ್ಟೇ ಬಾಕಿಯಿದ್ದು, ಈ ಆಸ್ಪತ್ರೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. 

ಪರಿಶೀಲನೆ: ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ನೂತನ ಕಟ್ಟಡದ ಎಲ್ಲ ಅಂತಸ್ತು, ವಿಭಾಗಗಳಿಗೂ ಸಚಿವ ಭೇಟಿ ನೀಡಿ, ಪರಿಶೀಲಿಸಿದರು. ಪ್ರತಿ ಕೊಠಡಿಗೆ ತೆರಳಿ, ಶೌಚಾಲಯ, ನೀರಿನ ನಲ್ಲಿ, ಕಿಟಕಿ, ಬಾಗಿಲುಗಳನ್ನು ಪರಿಶೀಲಿಸಿದರು. 

ಇದೇ ವೇಳೆ ಆಸ್ಪತ್ರೆಯ ಆರ್ಥೋ ವಿಭಾಗಕ್ಕೆ ಎಚ್‌ಡಿಎಫ್‌ಸಿ ಬ್ಯಾಂಕ್ ದೇಣಿಗೆಯಾಗಿ ನೀಡಿದ ₹75 ಲಕ್ಷ ಮೌಲ್ಯದ ಯಂತ್ರೋಪಕರಣಗಳನ್ನು ಸ್ವೀಕರಿಸಲಾಯಿತು. 

ಜಿಲ್ಲಾ ವೈದ್ಯಾಧಿಕಾರಿ ಡಾ.ಮಹೇಶ್, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಸಂತೋಷ್ ಹಾಗೂ ವೈದ್ಯರು, ಎಚ್.ಡಿ.ಎಫ್.ಸಿ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.