ಚಿಂತಾಮಣಿ: ನಗರದ ಹೋಟೆಲ್ ಮುಂಭಾಗದ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ₹2 ಲಕ್ಷ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಶಿವಮೊಗ್ಗ ನಗರದ ಸೋಮನಾಥ್ ಬಡಾವಣೆಯ ನಿವಾಸಿ ಹುಲಗಪ್ಪ (27) ಹಾಗೂ ಅವನಿಂದ ಹಣ ಸ್ವೀಕರಿಸಿದ್ದ ಸುಭಾಷ್ ಎಂಬುವವನನ್ನು ಬಂಧಿಸಿ, ಆರೋಪಿಗಳಿಂದ ₹1.53 ಲಕ್ಷ ಹಾಗೂ ದ್ವಿಚಕ್ರವಾಹನ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ನಿವಾಸಿ, ಸೌದೆ ವ್ಯಾಪಾರಿ ಆರ್.ವಿ.ಶಿವಕುಮಾರ್ ಆಗಸ್ಟ್ 14 ರಂದು ಸೌದೆ ತುಂಡರಿಸುವ ಯಂತ್ರ ಖರೀದಿಗೆ ₹2 ಲಕ್ಷದೊಂದಿಗೆ ಕಾರಿನಲ್ಲಿ ಬಂದಿದ್ದರು.
ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಕೋಲಾರ ರಸ್ತೆಯಲ್ಲಿರುವ ಹೋಟೆಲ್‌ಗೆ ಹೋಗಿದ್ದರು. ವಾಪಸ್ ಬಂದಾಗ ಹಣ ಕಳವಾಗಿತ್ತು. ಈ ಸಂಬಂಧ ನಗರ ಠಾಣೆಗೆ ದೂರು ನೀಡಿದ್ದರು.
ನಗರಠಾಣೆ ಇನ್‌ಸ್ಪೆಕ್ಟರ್ ವಿಜಿಕುಮಾರ್ ನೇತೃತ್ವದಲ್ಲಿ ಎಸ್‌ಪಿ ಕುಶಾಲ್ ಚೌಕ್ಸೆ ತನಿಖಾ ತಂಡವನ್ನು ನೇಮಕ ಮಾಡಿದ್ದರು. ಸಬ್ ಇನ್‌ಸ್ಪೆಕ್ಟರ್ ಪ್ರಕಾಶ್, ಪುನೀತ್ ನಂಜರಾಯ್, ಸಿಬ್ಬಂದಿ ಜಗದೀಶ್, ಮಂಜುನಾಥ್, ವಿಶ್ವನಾಥ್, ಶ್ರೀನಿವಾಸಮೂರ್ತಿ, ಲೋಕೇಶ್, ನರೇಶ್, ವೆಂಕಟರಮಣ, ಅನಿಲ್ ಕುಮಾರ್ ತನಿಖಾ ತಂಡದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.