ADVERTISEMENT

4 ಸಾವಿರ ಯೂನಿಟ್ ರಕ್ತ ಸಂಗ್ರಹ

ಮಾಜಿ ಸಚಿವ ಎ.ಚೌಡರೆಡ್ಡಿ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2025, 16:06 IST
Last Updated 21 ಫೆಬ್ರುವರಿ 2025, 16:06 IST
ಚಿಂತಾಮಣಿಯಲ್ಲಿ ಶುಕ್ರವಾರ ಅಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಚಾಲನೆ ನೀಡಿದರು
ಚಿಂತಾಮಣಿಯಲ್ಲಿ ಶುಕ್ರವಾರ ಅಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಚಾಲನೆ ನೀಡಿದರು   

ಚಿಂತಾಮಣಿ: ಗೃಹ ಸಚಿವಾಲಯದ ಮಾಜಿ ಸಚಿವ ಎ.ಚೌಡರೆಡ್ಡಿ ಹುಟ್ಟುಹಬ್ಬದ ಅಂಗವಾಗಿ ಶುಕ್ರವಾರ ನಗರದ ಕಿಶೋರ ವಿದ್ಯಾಭವನದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಶಿಬಿರಕ್ಕೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಹಾಗೂ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಪಿ.ಎನ್.ರವೀಂದ್ರ, ಜಿಲ್ಲಾ ಎಸ್‌ಪಿ ಕುಶಾಲ ಚೌಕ್ಸೆ, ಡಾ.ಬಾಲಾಜಿ, ಕಿಶೋರ ವಿದ್ಯಾಭವನದ ಪ್ರಾಂಶುಪಾಲ ಸಿ.ವಿ.ಮಂಜುನಾಥ್ ಸ್ಥಳೀಯ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.

ಬೆಂಗಳೂರು ಕೇಂದ್ರೀಯ ರಕ್ತನಿಧಿ, ಚಿಕ್ಕಬಳ್ಳಾಪುರ, ಬೆಂಗಳೂರು, ಕೋಲಾರ, ಶಿವಮೊಗ್ಗ ಮತ್ತಿತರ ರೆಡ್‌ಕ್ರಾಸ್ ಸಂಸ್ಥೆಗಳಿಂದ 400ಕ್ಕೂ ಹೆಚ್ಚು ವೈದ್ಯಕೀಯ ತಂಡಗಳು ರಕ್ತದಾನಿಗಳಿಂದ ರಕ್ತದಾನ ಮಾಡಿಸಿಕೊಂಡವು. ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ವ್ಯವಸ್ಥಿತವಾಗಿ ರಕ್ತದಾನ ನಡೆಯಿತು. ಚಿಂತಾಮಣಿ ಹಾಗೂ ಸುತ್ತಮುತ್ತಲ ತಾಲ್ಲೂಕುಗಳ ಚೌಡರೆಡ್ಡಿ ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಬಂದು ರಕ್ತದಾನ ಮಾಡಿದರು.

ADVERTISEMENT

ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವವರನ್ನು ಮೊದಲೇ ನೋಂದಾಯಿಸಿಕೊಳ್ಳಲಾಗಿತ್ತು. ಪ್ರತಿ ಗ್ರಾಮ ಪಂಚಾಯಿತಿಗೂ ಸ್ವಯಂ ಸೇವಕರನ್ನು ನೇಮಿಸಿ ನೋಂದಾಯಿಸಿಕೊಳ್ಳಲಾಗಿತ್ತು. ರಕ್ತದಾನ ಮಾಡಲು ಹೋಬಳಿವಾರು ಹಾಗೂ ಗ್ರಾಮ ಪಂಚಾಯಿತಿವಾರು ಸಮಯ ನೀಡಲಾಗಿತ್ತು. ರಕ್ತದಾನಿಗಳು ಸರತಿ ಸಾಲಿನಲ್ಲಿ ನಿಂತು ಅರ್ಹ ಪರೀಕ್ಷೆ ಮಾಡಿಸಿಕೊಂಡು ಅರ್ಹತೆ ಹೊಂದಿರುವವರಿಂದ ಮಾತ್ರ ರಕ್ತ ಸಂಗ್ರಹಿಸಲಾಯಿತು. 

ಸಾವಿರಾರು ಜನರು ಅಭಿಮಾನಿಗಳು ಭಾಗವಹಿಸಿದ್ದರು. ರಕ್ತದಾನ ಮಾಡಿದವರಿಗೆ ಪ್ರಶಂಸನಾ ಪತ್ರ ಹಾಗೂ ಪಾರಿತೋಷಕ ನೀಡಲಾಯಿತು. ಸುಮಾರು 4 ಸಾವಿರಕ್ಕೂ ಹೆಚ್ಚು ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರಿಸಲು ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಡಾ.ಬಾಲಾಜಿ ತಿಳಿಸಿದರು.

ಮನುಷ್ಯನ ಪ್ರಾಣ ಉಳಿಸುವ ರಕ್ತದಾನ ಎಲ್ಲ ದಾನಗಳಿಗಿಂತ ಶ್ರೇಷ್ಠವಾದುದು. ರಸ್ತೆ ಅಪಘಾತ, ಹೆರಿಗೆ, ಶಸ್ತ್ರಚಿಕಿತ್ಸೆ ಮತ್ತಿತರ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ತುಂಬಾ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಸಕಾಲದಲ್ಲಿ ರಕ್ತ ದೊರೆಯದೆ ಪ್ರಾಣ ಕಳೆದುಕೊಂಡ ಪ್ರಕರಣಗಳು ಇವೆ. ಹೆಚ್ಚಿನ ರಕ್ತದಾನ ಸಂಗ್ರಹಿಸಿ ರಕ್ತನಿಧಿಗೆ ನೀಡುವುದು. ಈ ಮೂಲಕ ಬೇರೆಯವರಿಗೂ ಮಾರ್ಗದರ್ಶನ, ಪ್ರೇರಣೆ ನೀಡುವುದು ಶಿಬಿರದ ಉದ್ದೇಶ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ಸರ್ಕಾರದ ಎಲ್ಲ ಇಲಾಖೆಗಳ ಅಧಿಕಾರಿಗಳು, ನೌಕರರು, ನಗರ ಹಾಗೂ ತಾಲ್ಲೂಕಿನ ಎಲ್ಲ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.