ಚಿಂತಾಮಣಿ: ನಗರದ ವಾರ್ಡ್ ನಂ 17 ರ ಚೌಡರೆಡ್ಡಿ ಪಾಳ್ಯದಲ್ಲಿ ಭಾನುವಾರ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ(ಎಸ್‌ಡಿಪಿಐ) ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಸಣಾ ಶಿಬಿರ ನಡೆಯಿತು.
ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಶಿಬಿರ ನಡೆಯಿತು. ನಗರದ ವಿವಿಧ ಭಾಗಗಳಿಂದ ಸಾರ್ವಜನಿಕರು ನುರಿತ ತಜ್ಞರಿಂದ ಹೃದಯ ರೋಗ, ನರರೋಗ, ಕ್ಯಾನ್ಸರ್, ಮೂತ್ರಪಿಂಡದ ಕಲ್ಲು ಮತ್ತಿತರ ಹಲವು ಕಾಯಿಲೆಗಳಿಗೆ ಸಂಬಂಧಿಸಿದ ತಪಾಸಣೆ ಮಾಡಿಸಿಕೊಂಡರು.
ಎಸ್‌ಡಿಪಿಐ ಅಧ್ಯಕ್ಷ ಅನ್ಸರ್ ಪಾಷಾ, ‘ನಾವು ಆರೋಗ್ಯ ಲೆಕ್ಕಿಸದೆ ದುಡಿಯುತ್ತೇವೆ. ಆರೋಗ್ಯ ಕೈಕೊಟ್ಟಾಗ ದುಡಿದ ಹಣ ಒಯ್ದು ಆಸ್ಪತ್ರೆಗೆ ಸುರಿಯುತ್ತೇವೆ. ಪ್ರತಿಯೊಬ್ಬರೂ ಆರೋಗ್ಯದ ಕಡೆ ಕಾಳಜಿ ವಹಿಸಬೇಕು. ನಿಯಮಿತವಾಗಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯದ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಇತ್ತೀಚೆಗೆ ಜನರ ಜೀವನಶೈಲಿಯಿಂದಲೇ ಹಲವಾರು ಕಾಯಿಲೆಗಳು ಬರುತ್ತಿವೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಜನರು ಹಿಂದಿನ ಜೀವನಶೈಲಿಗೆ ಮರುಳುವುದು ಉತ್ತಮ ಎಂದು ತಿಳಿಸಿದರು.
ಪಕ್ಷದ ಜಿಲ್ಲಾ ಸಮಿತಿಯ ಸದಸ್ಯ ಮನ್ಸೂರ್ ಪಾಷಾ, ಅಬ್ದುಲ್ ರಬ್, ರಂಜಾನ್, ರಾಮಾಂಜಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.