ಚಿಂತಾಮಣಿ: ನಗರ ಹಾಗೂ ತಾಲ್ಲೂಕಿನಾದ್ಯಂತ ಮಂಗಳವಾರ ಮತ್ತು ಬುಧವಾರ ಒಂದೇ ಸಮನೆ ಸುರಿಯುತ್ತಿದ್ದ ಜಡಿ ಮಳೆ ಗುರುವಾರ ಸ್ವಲ್ಪ ಬಿಡುವು ನೀಡಿದ್ದರಿಂದ ಜೀವನ ಸಹಜ ಸ್ಥಿತಿಯತ್ತ ಮರಳಿತು.
ಮಂಗಳವಾರ ಬೆಳಿಗ್ಗೆ ಜನತೆ ನಿದ್ದೆಯಿಂದ ಎದ್ದೇಳುತ್ತಿದ್ದಂತೆ ಜಡಿ ಮಳೆ ಹಾಗೂ ಮೈ ನಡುಗಿಸುವ ಚಳಿಯಿಂದ ಮನೆಗಳಿಂದ ಹೊರಗೆ ಬರುವುದೇ ದುಸ್ತರವಾಯಿತು. ಎರಡು ದಿನಗಳ ಕಾಲ ಸುರಿದ ಜಡಿಮಳೆಗೆಡ ಬಹುತೇಕ ಜನಜೀವನ ಅಸ್ತವ್ಯಸ್ತವಾಗಿತ್ತು. ವ್ಯಾಪಾರ ವಹಿವಾಟು ಸ್ತಬ್ಧವಾಗಿತು.
ನಗರದ ಬಹುತೇಕ ರಸ್ತೆಗಳು ಕೆಸರು ಗದ್ದೆಗಳಾಗಿದ್ದವು. ವಾಹನಗಳ ಸಂಚಾರಕ್ಕೆ ಮತ್ತು ಜನರ ಓಡಾಟಕ್ಕೆ ಅಡಚಣೆ ಉಂಟಾಗಿತ್ತು. ರಸ್ತೆಗಳಲ್ಲಿನ ಗುಂಡಿಗಳು ನೀರಿನಿಂದ ಆವೃತವಾಗಿದ್ದು ಜನರು ಮತ್ತು ವಾಹನ ಸವಾರರು ಎಚ್ಚರಿಕೆಯಿಂದ ಹೆಜ್ಜೆ ಇಡುವ ಆತಂಕ ನಿರ್ಮಾಣವಾಗಿತ್ತು.
ಅಲ್ಲಲ್ಲಿ ಮಳೆ ನೀರು ನಿಂತಿರುವುದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿ ಡೆಂಗಿ, ಚಿಕುನ್ ಗುನ್ಯಾ, ಮಲೇರಿಯಾ ಹರಡುವ ಭೀತಿ ಎದುರಾಗಿದೆ. ಈಗಾಗಲೇ ಜ್ವರ, ಶೀತ ಪ್ರಕರಣಗಳು ಹೆಚ್ಚಾಗಿದ್ದು ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.