
ಚುನಾವಣೆ(ಸಾಂದರ್ಭಿಕ ಚಿತ್ರ)
ಚಿಂತಾಮಣಿ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಪ್ರಥಮ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಚಿಂತಾಮಣಿ ಕ್ಷೇತ್ರವು ಪ್ರತಿಷ್ಠೆಯ ಕಣವಾಗಿದೆ.
ಕೋಲಾರ ಹಾಲು ಒಕ್ಕೂಟದಲ್ಲಿ ಸತತ ಎರಡು ಬಾರಿ ನಿರ್ದೇಶಕ ಆಗಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವೈ.ಬಿ.ಅಶ್ವತ್ಥ ನಾರಾಯಣಬಾಬು 3ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಶಿಂಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ. ಶ್ರೀನಿವಾಸಪ್ಪ ಅವರು, ಅಶ್ವತ್ಥ ನಾರಾಯಣಬಾಬು ಅವರಿಗೆ ಸವಾಲೊಡ್ಡುವ ತವಕದಲ್ಲಿದ್ದಾರೆ. ಶ್ರೀನಿವಾಸಪ್ಪ ಅವರು ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದಾರೆ.
ಚಿಂತಾಮಣಿ ಕ್ಷೇತ್ರದ ವ್ಯಾಪ್ತಿಯಲ್ಲಿ ನಗರ ವಿಭಾಗದ ಡೇರಿಗಳು, ಕಸಬಾ ಹೋಬಳಿಯ ಊಲವಾಡಿ, ದೊಡ್ಡಗಂಜೂರು, ಆನೂರು, ಮುನ ಉಗನಹಳ್ಳಿ, ಕುರುಬೂರು ಗ್ರಾಮ ಪಂಚಾಯಿತಿ, ಮುರುಗಮಲ್ಲ ಹೋಬಳಿಯ ಮುರುಗಮಲ್ಲ, ನಂದಿಗಾನಹಳ್ಳಿ, ಪೆದ್ದೂರು, ಯಗವಕೋಟೆ, ಭೂಮಿಶೆಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಡೇರಿಗಳಿವೆ. ಕ್ಷೇತ್ರದಲ್ಲಿ ಒಟ್ಟು 72 ಸಂಘಗಳಿದ್ದು, ಅದರಲ್ಲಿ ಗೋಪಸಂದ್ರ ಸಂಘವು ಅನರ್ಹಗೊಂಡಿದೆ. ಉಳಿದ 71 ಸಂಘಗಳಿಂದ 71 ಡೆಲಿಗೇಟ್‌ಗಳು ಮತ ಚಲಾವಣೆ ಮಾಡಲಿದ್ದಾರೆ.
ಕೋಚಿಮುಲ್‌ನಲ್ಲಿ ಸತತ ಎರಡು ಬಾರಿ ಸ್ಪರ್ಧಿಸಿದ್ದ ಅಶ್ವತ್ಥನಾರಾಯಣಬಾಬು ಅವರು ಜೆಡಿಎಸ್‌ನ ಹಿರಿಯ ಸಹಕಾರಿ ಧುರೀಣ ತಳಗವಾರದ ರಾಜಗೋಪಾಲ್ ಅವರನ್ನು ಪರಾಭವಗೊಳಿಸಿದ್ದರು. ಕ್ರಿಯಾಶೀಲ ನಿರ್ದೇಶಕರಾಗಿದ್ದ ಅವರು, ಒಕ್ಕೂಟದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ತಮ್ಮ ಕೈ ಹಿಡಿಯಲಿವೆ ಎಂಬ ಆಕಾಂಕ್ಷೆಯಲ್ಲಿದ್ದಾರೆ.
ತಾಲ್ಲೂಕಿನಲ್ಲಿ ಅನೇಕ ಸಂಘಗಳ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ, ಬಿಎಂಸಿಗಳ ಸ್ಥಾಪನೆ, ನಗರದಲ್ಲಿ ಐಸ್ ಸ್ಕ್ರೀಂ ಘಟಕ ನಿರ್ಮಾಣ, ಆಕಸ್ಮಿಕವಾಗಿ ಮೃತಪಟ್ಟ ಹಸುಗಳಿಗೆ ಪರಿಹಾರಧನ ವಿತರಿಸಿದ್ದಾರೆ. ಕಾರ್ಯದರ್ಶಿ ಮತ್ತು ನೌಕರರಿಗೆ ಅಗತ್ಯವಿರುವ ಸಹಕಾರ ನೀಡಿದ್ದಾರೆ. ಅವರು ರಾಜಕೀಯದಲ್ಲಿ ಸಕ್ರಿಯರಾಗಿರುವ ಹೊರತಾಗಿಯೂ, ಡೇರಿಗಳ ವ್ಯವಹಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಾತೀತವಾಗಿ ನಡೆದುಕೊಂಡಿದ್ದಾರೆ ಎಂಬ ಹೆಗ್ಗಳಿಕೆ ಅಶ್ವತ್ಥನಾರಾಯಣ ಬಾಬು ಅವರಿಗಿದೆ. ಅಲ್ಲದೆ, ಅವರು ಬಹುತೇಕ ಡೇರಿಗಳ ಡೆಲಿಗೇಟ್‌ಗಳ ನಾಡಿಮಿಡಿತ ಅರಿತವರಾಗಿದ್ದಾರೆ. ಹೀಗಾಗಿ, ಗೆಲುವು ಅವರಿಗೆ ಕಟ್ಟಿಟ್ಟಬುತ್ತಿ ಎನ್ನುತ್ತಾರೆ ಹಾಲು ಉತ್ಪಾದಕರು.
ಅಶ್ವತ್ಥ ನಾರಾಯಬಾಬು ಅವರು ಜಿಲ್ಲಾ ಉತ್ಸುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರಿಗೆ ಆಪ್ತರು. ಚಿಂತಾಮಣಿಯಲ್ಲಿರುವ ಒಟ್ಟಾರೆ ಡೇರಿಗಳ ಪೈಕಿ ಹೆಚ್ಚು ಡೇರಿಗಳು ಕಾಂಗ್ರೆಸ್ ಹಿಡಿತದಲ್ಲಿವೆ. ಹೀಗಾಗಿ, ಇಲ್ಲಿ ಜಿದ್ದಾಜಿದ್ದಿನ ಪೈಪೋಟಿ ಇಲ್ಲ. ಬದಲಿಗೆ ಅಶ್ವತ್ಥನಾರಾಯಣ ಅವರು ನಿರಾಯಾಸವಾಗಿ ಗೆಲ್ಲಲಿದ್ದಾರೆ ಎಂಬುದು ರಾಜಕೀಯ ನಾಯಕರ ಲೆಕ್ಕಾಚಾರ. ಆದರೆ, ಚುನಾವಣೆಯಲ್ಲಿ ಏನು ಬೇಕಾದರೂ ಆಗಬಹುದು. ರಾಜಕೀಯ ಪಂಡಿತರ ಲೆಕ್ಕಾಚಾರಗಳು ಉಲ್ಟಾ ಆಗಿರುವ ಅನೇಕ ಉದಾಹರಣೆಗಳಿವೆ ಎನ್ನುತ್ತಾರೆ ಮತ್ತೆ ಕೆಲವರು.
‘ನಂದಿನಿ ಸಹಕಾರ ಬ್ಯಾಂಕ್’ ಸ್ಥಾಪಿಸಿ, ಡಿಸಿಸಿ ಬ್ಯಾಂಕಿಗಿಂತ ಕಡಿಮೆ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡಿ ಹಾಲಿನ ಉತ್ಪಾದನೆಯನ್ನು ಈಗಿನ 4.5 ಲಕ್ಷದಿಂದ 10 ಲಕ್ಷ ಲೀಟರ್‌ಗೆ ಹೆಚ್ಚಿಸುವ ಮಹತ್ವಾಕಾಂಕ್ಷೆ ಇದೆಅಶ್ವತ್ಥನಾರಾಯಣಬಾಬು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ
ವೈ.ಬಿ.ಅಶ್ವತ್ಥನಾರಾಯಣಬಾಬು
ಬಿ. ಶ್ರೀನಿವಾಸಪ್ಪ
ಮೈತ್ರಿ ಅಭ್ಯರ್ಥಿಗಿಲ್ಲ ಕ್ಷೇತ್ರ ಪರಿಚಯ
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿರುವ ಶಿಂಗನಹಳ್ಳಿ ಡೇರಿ ಅಧ್ಯಕ್ಷ ಶ್ರೀನಿವಾಸ ಅವರು ಚಿಂತಾಮಣಿ ಕ್ಷೇತ್ರಕ್ಕೆ ಹೊಸಬರಾಗಿದ್ದಾರೆ. ಅವರು ಕ್ಷೇತ್ರದಲ್ಲಿ ಅಷ್ಟಾಗಿ ಯಾರಿಗೂ ಪರಿಚಯವಿಲ್ಲ.
ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮೈತ್ರಿ ಮಾಡಿಕೊಂಡಿದ್ದರೂ, ಕೆಳಮಟ್ಟದಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುವುದು ಕಷ್ಟಸಾಧ್ಯ. ಒಂದು ಪಕ್ಷದವರು ಅಭ್ಯರ್ಥಿ ಗೆಲುವಿಗೆ ಉತ್ಸಾಹ ತೋರಿದರೆ, ಮತ್ತೊಂದು ಪಕ್ಷದವರು ಅಷ್ಟಾಗಿ ಉತ್ಸುಕತೆ ತೋರುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಎಷ್ಟೇ ಆದರೂ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವೈ.ಬಿ.ಅಶ್ವತ್ಥ ನಾರಾಯಣಬಾಬು ಹಳೆಯ ಹುಲಿಯಾಗಿದ್ದು, ಅವರಿಗೆ ಹೊಸಬರಾದ ಶ್ರೀನಿವಾಸ ಅವರು ಹೇಗೆ ಪೈಪೋಟಿ ನೀಡಲಿದ್ದಾರೆ ಎಂಬುದು ಕ್ಷೇತ್ರದಲ್ಲಿ ಜನರಲ್ಲಿ ಕುತೂಹಲ ಮೂಡಿಸಿದೆ.
ಸೌಲಭ್ಯ ಕಲ್ಪಿಸಲು ಯತ್ನ
ಹೊಸ ಒಕ್ಕೂಟದಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ. ಮುಖ್ಯವಾಗಿ ಪ್ಯಾಕೇಜ್ ಘಟಕದ ಸ್ಥಾಪನೆ, ಉತ್ಪಾದಕರಿಗೆ ಹಾಲಿನ ದರ ಹೆಚ್ಚಳ, ಸಬ್ಸಿಡಿ ದರದಲ್ಲಿ ಪಶು ಆಹಾರ ಸೇರಿದಂತೆ ಹಲವು ಯೋಜನೆಗಳ ಜಾರಿಗೆ ಶ್ರಮಿಸುತ್ತೇನೆ ಎಂದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಶ್ವತ್ಥನಾರಾಯಣಬಾಬು ಹೇಳುತ್ತಾರೆ.
ಕಳೆದ 10 ವರ್ಷಗಳ ಅನುಭವದಲ್ಲಿ ಒಕ್ಕೂಟದ ಸಮಸ್ಯೆಗಳು, ಅಡಳಿತದಲ್ಲಿನ ತೊಂದರೆಗಳು, ಉತ್ಪಾದಕರ ಸಮಸ್ಯೆಗಳು ಮತ್ತು ಅವುಗಳ ಬದಲಾವಣೆಗೆ ಅಗತ್ಯವಿರುವ ಮಾರ್ಗೋಪಾಯಗಳ ಬಗ್ಗೆ ತಿಳಿದಿದ್ದೇನೆ ಎಂದು ಹೇಳುತ್ತಾರೆ.
ಹಾಲು ಉತ್ಪಾದರ ಸಮಸ್ಯೆ ಅರಿವಿದೆ
ನಾನು ರೈತ, ಹಾಲು ಉತ್ಪಾದಕ ಹಾಗೂ ಡೇರಿ ಅಧ್ಯಕ್ಷನಾಗಿದ್ದು, ಹಾಲು ಉತ್ಪಾದಕರ ಸಮಸ್ಯೆಗಳ ಅರಿವಿದೆ. ಒಕ್ಕೂಟದಿಂದ ರೈತರಿಗೆ ದೊರೆಯುವ ಎಲ್ಲ ಸೌಲಭ್ಯಗಳನ್ನು ಉತ್ಪಾದಕರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಉತ್ಪಾದಕರಿಗೆ ಹೆಚ್ಚಿನ ದರ ಕೊಡಿಸುವುದು ನನ್ನ ಮೊದಲ ಆದ್ಯತೆ.
ನಾನು ಪ್ರಥಮ ಬಾರಿಗೆ ಸ್ಪರ್ಧಿಸಿದ್ದರೂ ನನಗೆ ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿ ಅವರ ಬೆಂಬಲವಿದೆ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಸಹಕಾರ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಭದ್ರವಾಗಿದ್ದು, ನನಗೆ ಗೆಲುವು ಸಿಗಲಿದೆ.
ಶ್ರೀನಿವಾಸಪ್ಪ, ಮೈತ್ರಿಕೂಟದ ಅಭ್ಯರ್ಥಿ