
ಚಿಂತಾಮಣಿ: ‘ತಾಲ್ಲೂಕಿನಲ್ಲಿ 150 ಎಕರೆಯಲ್ಲಿ ಎಲೆಕ್ಟ್ರಿಕಲ್ ವೆಹಿಕಲ್ ಸಿಟಿ ಸ್ಥಾಪಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ತಾಲ್ಲೂಕಿನ ಎರ್ರಕೋಟೆ ಮತ್ತು ದೂಮಲಪಲ್ಲಿಗಡ್ಡ ಗ್ರಾಮದ ಬಳಿ 150 ಎಕರೆ ಸಂಪೂರ್ಣ ಸರ್ಕಾರಿ ಪ್ರದೇಶವನ್ನು ಗುರುತಿಸಲಾಗಿದೆ. ಸಂಬಂಧಪಟ್ಟವರು ಈಗಾಗಲೇ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಒಪ್ಪಿಗೆ ನೀಡಿದ್ದಾರೆ. ಬೇರೆ ಎಲ್ಲಿಗೋ ಹೋಗುತ್ತಿದ್ದ ಎಲೆಕ್ಟ್ರಿಕಲ್ ವೆಹಿಕಲ್ ಸಿಟಿಯನ್ನು ನಾನು ಪ್ರಯತ್ನಿಸಿ ಸಂಬಂಧಪಟ್ಟವರ ಜತೆ ಮಾತನಾಡಿ ಕ್ಷೇತ್ರಕ್ಕೆ ತರುತ್ತಿದ್ದೇನೆ’ ಎಂದರು.
‘ತಾಲ್ಲೂಕಿನ ಜೀಡರಹಳ್ಲಿ ಬಳಿ 20 ಎಕರೆ ಪ್ರದೇಶದಲ್ಲಿ ಡ್ರೋಣ್ ಟೆಸ್ಟಿಂಗ್ ಕೇಂದ್ರ ಸ್ಥಾಪಿಸಲಾಗುತ್ತದೆ. ಈಗಾಗಲೇ 10 ಎಕರೆ ನೀಡಲಾಗಿದೆ. ಉಳಿದ 10 ಎಕರೆ ಜಾಗವನ್ನು ಶೀಘ್ರವಾಗಿ ಮಂಜೂರು ಮಡಲಾಗುವುದು’ ಎಂದು ತಿಳಿಸಿದರು.
‘ಕಾಗತಿ ಭಾಗದ ಕೈಗಾರಿಕಾ ಪ್ರದೇಶದ ಬಳಿ 200 ಎಕರೆಯನ್ನು ನೂತನ ಎಪಿಎಂಸಿ ಸ್ಥಾಪನೆಗೆ ಮೀಸಲಿಡಲಾಗಿದೆ. ನಗರದ ಚೇಳೂರು ರಸ್ತೆಯಲ್ಲಿರುವ ಎಪಿಎಂಸಿಯಲ್ಲಿ ಸ್ಥಳಾವಕಾಶದ ಕೊರತೆ ಇದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತರಣೆ ಆಗಲಿರುವುದನ್ನು ಗಮನಿಸಿ 200 ಎಕರೆ ಪ್ರದೇಶದಲ್ಲಿ ಎಪಿಎಂಸಿ ವಿಸ್ತರಣಾ ಘಟಕ ಸ್ಥಾಪಿಸಿ, ಕೆಲವು ವ್ಯಾಪಾರಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು’ ಎಂದರು.
ಕೆ.ಸಿ.ವ್ಯಾಲಿ ಮತ್ತು ಎಚ್.ಎನ್ ವ್ಯಾಲಿ ಯೋಜನೆಗಳ ಮೂಲಕ ಬೆಂಗಳೂರಿನ ಸಂಸ್ಕರಿಸಿದ ನೀರನ್ನು ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆ ರೂಪಿಸಲಾಗಿದೆ. ಮುರುಗಮಲ್ಲ ಹೋಬಳಿಯಲ್ಲಿ ಕೆ.ಸಿ.ವ್ಯಾಲಿಯಲ್ಲಿ 54 ಕೆರೆ ತುಂಬಿಸಲಾಗುತ್ತದೆ. ಎಚ್.ಎನ್.ವ್ಯಾಲಿಯಲ್ಲಿ 119 ಕೆರೆ ತುಂಬಿಸಲಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.