ADVERTISEMENT

ಚಿಂತಾಮಣಿ: ಚತುರ್ಥಿಗೆ ಮುನ್ನ ಮಾರುಕಟ್ಟೆಗೆ ಗಣಪ

ಎಂ.ರಾಮಕೃಷ್ಣಪ್ಪ
Published 24 ಆಗಸ್ಟ್ 2025, 7:15 IST
Last Updated 24 ಆಗಸ್ಟ್ 2025, 7:15 IST

ಚಿಂತಾಮಣಿಯ ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಮಾರಾಟಕ್ಕೆ ಇಟ್ಟಿರುವ ಗಣೇಶ ಮೂರ್ತಿಗಳು.

ಚಿಂತಾಮಣಿಯ ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಮಾರಾಟಕ್ಕೆ ಇಟ್ಟಿರುವ ಗಣೇಶ ಮೂರ್ತಿಗಳು.

ಚಿಂತಾಮಣಿ: ತಾಲ್ಲೂಕಿನಾದ್ಯಂದ ಗೌರಿ–ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ರಸ್ತೆಗಳಲ್ಲಿ ಸಾರ್ವಜನಿಕ ಮತ್ತು ವೈಯಕ್ತಿಕವಾಗಿ ಮನೆಗಳಲ್ಲಿ ಗಣೇಶ ಮತ್ತು ಗೌರಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ, ವಿಜೃಂಭಣೆಯಿಂದ ಹಬ್ಬ ಆಚರಿಸಲಾಗುತ್ತದೆ. ಅದೇ ರೀತಿ ಈ ಬಾರಿಯ ಗಣೇಶ ಹಬ್ಬದ ಆಚರಣೆಗಾಗಿ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.

ADVERTISEMENT

ನಗರದ ವಿವಿಧೆಡೆ ರಸ್ತೆಬದಿಗಳ ಪಾದಚಾರಿ ಮಾರ್ಗಗಳಲ್ಲಿ ತರಹೇವಾರಿ ಗೌರಿ, ಗಣೇಶಮೂರ್ತಿಗಳು ರಾರಾಜಿಸುತ್ತಿವೆ. ರಸ್ತೆಯ ಬದಿಗಳಲ್ಲಿ ವೈವಿದ್ಯಮಯ ಮೂರ್ತಿಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ.

ಪರಿಸರಸ್ನೇಹಿ ಮತ್ತು ಸಣ್ಣ ಗೌರಿ, ಗಣೇಶ ಮೂರ್ತಿಗಳನ್ನು ಪೂಜಿಸಲು ಜನರು ಆಸಕ್ತಿ ತೋರಿಸುತ್ತಾರೆ.

ಗಣೇಶ ಮೂರ್ತಿ ತಯಾರಕರು ಜನರ ಬೇಡಿಕೆಗೆ ತಕ್ಕಂತೆ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಒಂದು ಅಡಿಯಿಂದ 10–20 ಅಡಿ ಎತ್ತರದ ಮೂರ್ತಿಗಳನ್ನು ತಯಾರಿಸಿದ್ದಾರೆ. ₹500ನಿಂದ ಗರಿಷ್ಠ 20 ಸಾವಿರದವರೆಗೆ ಗಾತ್ರಕ್ಕೆ ತಕ್ಕಂತ ಬೆಲೆಯ ಗಣೇಶ ಮೂರ್ತಿಗಳನ್ನು ಗ್ರಾಹಕರು ಬುಕ್ಕಿಂಗ್ ಮಾಡುತ್ತಿದ್ದಾರೆ.

ವಿವಿಧ ಸ್ವರೂಪದ ವಿನಾಯಕ: ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಶಿವ ಪಾರ್ವತಿ, ಮಣಿಕಂಠ, ವಿಷ್ಣು ಸ್ವರೂಪ ಮತ್ತು ಇಲಿ, ನಂದಿ, ಸಿಂಹ, ಸರ್ಪ, ಗರುಡ, ನವಿಲು ವಾಹನ ಮಾಡಿಕೊಂಡು ಸವಾರಿ ಮಾಡುವ ಗಣೇಶ ಮೂರ್ತಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ನಗರದ ರಸ್ತೆ ರಸ್ತೆಗಳಲ್ಲಿ ಗಣೇಶನ ಮೂರ್ತಿಗಳೇ ರಾರಾಜಿಸುತ್ತಿವೆ.

ಚುನಾವಣಾ ವರ್ಷಗಳಲ್ಲಿ ವಿವಿಧ ರಾಜಕಾರಣಿಗಳು ಪೈಪೋಟಿ ಎಂಬಂತೆ ಜನರಿಗೆ ಉಚಿತ ಮೂರ್ತಿಗಳನ್ನು ಹಂಚುತ್ತಾರೆ. ಆದರೆ, ಈಗ ಚುನಾವಣೆ ಇಲ್ಲ. ಮತ್ತೊಂದೆಡೆ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಮೂರ್ತಿಗಳ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಮಾರಾಟಗಾರರು ಮತ್ತು ಗಣೇಶ ತಯಾರಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಮಣ್ಣಿಂದಷ್ಟೇ ಅಲ್ಲ ಪೇಪರ್ ಮೂರ್ತಿಯೂ ಉಂಟು

ಪಿಒಪಿ ಗಣಪತಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟವನ್ನು ಸರ್ಕಾರವು ಸಂಪೂರ್ಣವಾಗಿ ನಿಷೇಧಿಸಿದೆ. ಮಣ್ಣಿನಿಂದ ಪರಿಸರಸ್ನೇಹಿ ಗಣಪತಿಗಳನ್ನು ಮಾತ್ರ ತಯಾರಿಸಬೇಕು ಎಂಬ ಸೂಚನೆ ನೀಡಿದೆ. ಜೇಡಿ ಮಣ್ಣಿನಲ್ಲಿ ಪರಿಸರಸ್ನೇಹಿ ಗಣಪತಿಗಳನ್ನು ತಯಾರಿಸಲಾಗುತ್ತಿದೆ. ಇತ್ತೀಚೆಗೆ ಕೆಲವರು ಮಣ್ಣಿನ ಬದಲು ಪೇಪರ್, ಮಿಲ್‌ಗಳಲ್ಲಿ ಬಿಸಾಡುವ ಕಚ್ಚಾ ಕಡಲೆ ಹಿಟ್ಟು, ಗೆಣಸಿನ ಪುಡಿ, ಬಿಳಿ ರಂಗೋಲಿ ಪುಡಿ ಮಿಶ್ರಣ ಮಾಡಿ ಗಣಪತಿ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ಗಣೇಶ ಖರೀದಿಸಲು ಹೋಗುವ ಗ್ರಾಹಕರಿಗೆ ವಿವಿಧ ಬಗೆಯ ಗಣೇಶ ಮೂರ್ತಿಗಳನ್ನು ತೋರಿಸುವ ಮಾರಾಟಗಾರರು, ಇದು ಮಣ್ಣಿನದ್ದು, ಮತ್ತೊಂದು ಪೇಪರ್‌ನಿಂದ ತಯಾರಿಸಿದ್ದು, ಮಗದೊಂದು ಮಿಲ್‌ಗಳಲ್ಲಿ ಬಿಸಾಡುವ ಕಚ್ಚಾ ಕಡಲೆ ಹಿಟ್ಟು, ಗೆಣಸಿನ ಹಿಟ್ಟು ಬಳಸಿ ತಯಾರಿಸಿದ್ದು ಎಂಬ ವಿವರಣೆ ನೀಡುವುದು ಸಾಮಾನ್ಯವಾಗಿದೆ.

ಗ್ರಾಹಕರಿಂದ ಉತ್ತಮ ಸ್ಪಂದನೆ

ಮೂರು ತಿಂಗಳಿನಿಂದ ಜೇಡಿಮಣ್ಣಿನ ಗಣೇಶ ಮೂರ್ತಿಗಳನ್ನು ಮಾಡಿದ್ದೇವೆ. 1ರಿಂದ 10 ಅಡಿವರೆಗೆ ಗಣಪತಿಗಳಿಗೆ ಅವುಗಳ ಗಾತ್ರಕ್ಕೆ ತಕ್ಕಂತೆ ₹500ರಿಂದ ₹10,000ರವರೆಗೆ ದರ ನಿಗದಿಪಡಿಸಿದ್ದೇವೆ. ಗ್ರಾಹಕರು ಒಂದು ವಾರದಿಂದ ಬುಕ್ಕಿಂಗ್ ಮಾಡುತ್ತಿದ್ದು, ಉತ್ತಮ ಸ್ಪಂದನೆ ಇದೆ. ಆದರೆ, ಮಳೆ ವಾತಾವರಣ ಇರುವುದರಿಂದ ಮೂರ್ತಿಗಳ ಸಂಗ್ರಹಣೆ ಕಷ್ಟವಾಗಿದೆ.

ಶ್ಯಾಮ್ ಸುಂದರ, ಗಣೇಶ ಮೂರ್ತಿ ತಯಾರಕ, ನೆರ್ನಕಲ್ಲು, ಕೈವಾರ ಹೋಬಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.