ADVERTISEMENT

ಚಿಂತಾಮಣಿ: ಪದವೀಧರ ಮತದಾರರ ಪಟ್ಟಿಗೆ ನೋಂದಣಿಗೆ ನಿರುತ್ಸಾಹ

ಹೆಸರು ಸೇರ್ಪಡೆ ಮಾಡಲು ನವೆಂಬರ್ 6 ಕೊನೆ ದಿನ

ಎಂ.ರಾಮಕೃಷ್ಣಪ್ಪ
Published 22 ಅಕ್ಟೋಬರ್ 2025, 6:19 IST
Last Updated 22 ಅಕ್ಟೋಬರ್ 2025, 6:19 IST
   

ಚಿಂತಾಮಣಿ: ವಿಧಾನ ಪರಿಷತ್‌ನ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಚುನಾವಣಾ ಅಧಿಕಾರಿಗಳ ನೇಮಕವಾಗಿದ್ದು, ಮತದಾರರ ಪಟ್ಟಿ ತಯಾರಿ ನಡೆಯುತ್ತಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ನವೆಂಬರ್ 6 ಕೊನೆ ದಿನ. ತಾಲ್ಲೂಕಿನಲ್ಲಿ ಸಾವಿರಾರು ಮಂದಿ ಪದವೀಧರರಿದ್ದರೂ ನೋಂದಣಿಗೆ ಹಿಂದೇಟು ಹಾಕುತ್ತಿದ್ದಾರೆ.

ವಿಧಾನ ಪರಿಷತ್‌ ಆಗ್ನೇಯ ಪದವೀಧರರ ಕ್ಷೇತ್ರಕ್ಕೆ 5 ವರ್ಷಗಳ ನಂತರ ಮತದಾರರ ಪಟ್ಟಿ ಪರಿಷ್ಕರಣೆ ಆರಂಭವಾಗಿದೆ. ರಾಜಕೀಯ ಪಕ್ಷಗಳು ಮತ್ತು ಸ್ಪರ್ಧಿಸಲು ಆಸಕ್ತಿಯುಳ್ಳವರು ಮತದಾರರ ಹುಡುಕಾಟದಲ್ಲಿ ತೊಡಗಿದ್ದಾರೆ. 2020ರಲ್ಲಿ ನಡೆದಿದ್ದ ಚುನಾವಣೆಗೆ ಮುನ್ನ ಸಿದ್ಧಗೊಂಡಿದ್ದ ಮತದಾರರ ಪಟ್ಟಿಯಲ್ಲಿ ತಾಲ್ಲೂಕಿನಿಂದ 3,276 ಪುರುಷ, 1,836 ಮಹಿಳೆಯರು ಸೇರಿ ಒಟ್ಟು 5,110 ಮಂದಿ ಮತದಾರರು ನೋಂದಣಿ ಮಾಡಿಕೊಂಡಿದ್ದರು.

2026ರಲ್ಲಿ ಮತ್ತೆ ಚುನಾವಣೆ ನಡೆಯಲಿದೆ. ಹೊಸದಾಗಿ ಮತದಾರರ ಪಟ್ಟಿ ಸಿದ್ಧಪಡಿಸುವ ಕೆಲಸ ಆರಂಭವಾಗಿದೆ. ಪದವೀಧರ ಮತದಾರ ಆಗಲು ಅರ್ಹತೆ ಹೊಂದಿರುವ ಸಾವಿರಾರು ಜನರು ಇದ್ದಾರೆ. ಅವರಲ್ಲಿ ಎಷ್ಟು ಮಂದಿ ಮತದಾನದ ಹಕ್ಕು ಪಡೆಯಲು ಮುಂದೆ ಬರುತ್ತಾರೆ ಎಂಬುದು ಪ್ರಶ್ನೆಯಾಗಿದೆ.

ADVERTISEMENT

ಪದವೀಧರರು ತಾವಾಗಿಯೇ ಮತದಾರರ ಪಟ್ಟಿಗೆ ನೋಂದಣಿ ಮಾಡಿಸಲು ಮುಂದೆ ಬರುತ್ತಿಲ್ಲ. ಪದವೀಧರರನ್ನು ಹುಡುಕಿ ಅವರಿಂದ ಅಗತ್ಯ ದಾಖಲೆ ಪಡೆದು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಸಾಕಷ್ಟು ಕಸರತ್ತು ನಡೆಸಬೇಕಾಗುತ್ತದೆ. ಬಹುತೇಕ ಪದವೀಧರರು ಸ್ವಯಂಪ್ರೇರಣೆಯಿಂದ ನೋಂದಣಿ ಮಾಡಿಸುವುದಿಲ್ಲ. ಅಂತಹವರ ಬೆನ್ನಿಗೆ ಬಿದ್ದು ಹೆಸರು ನೋಂದಾಯಿಸುವ ಕೆಲಸವನ್ನು ಸ್ಪರ್ಧೆ ಆಕಾಂಕ್ಷಿಗಳೇ ಮಾಡಬೇಕಾಗುತ್ತದೆ ಎಂದು ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮುಖಂಡರೊಬ್ಬರು ತಿಳಿಸಿದರು.

ಪದವೀಧರ ಮತಕ್ಷೇತ್ರದ ಚುನಾವಣೆಯಲ್ಲಿ ಮತದಾರರಾಗಿ ಅರ್ಹತೆ ಪಡೆಯಲು ದೇಶದ ಯಾವುದೇ ಅಧಿಕೃತ ವಿಶ್ವವಿದ್ಯಾಲಯದ ಪದವಿ ಹೊಂದಿರಬೇಕು. ಪದವಿ ಪಡೆದ ಕೂಡಲೇ ಮತದಾರನಾಗಲು ಸಾಧ್ಯವಿಲ್ಲ. ಮತದಾರರ ಪಟ್ಟಿ ಸಿದ್ಧಗೊಳ್ಳುವ ಪ್ರಕ್ರಿಯೆ ಕೊನೆಗೊಳ್ಳುವ ದಿನಕ್ಕಿಂತ ಮೂರು ವರ್ಷ ಮೊದಲು ಪದವಿ ಪಡೆದಿರಬೇಕು ಎಂದು ಚುನಾವಣಾ ಶಾಖೆ ಅಧಿಕಾರಿ ಚೇತನ್ ತಿಳಿಸಿದರು.

ಪ್ರತಿ ಐದು ವರ್ಷಗಳಿಗೊಮ್ಮೆ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸಲಾಗುತ್ತದೆ. ಸಾಮಾನ್ಯವಾಗಿ ಪದವೀಧರರು ಉದ್ಯೋಗದ ನಿಮಿತ್ತ ಪದೇ ಪದೇ ವಲಸೆ ಹೋಗುವುದರಿಂದ ಅವರ ಸ್ಥಳ ಬದಲಾವಣೆಯಾಗುತ್ತಿರುತ್ತದೆ. ಇತರೆ ಪದವೀಧರ ಕ್ಷೇತ್ರಗಳಿಗೆ ಬೇರೆ ಬೇರೆ ಕಾಲದಲ್ಲಿ ಚುನಾವಣೆ ನಡೆಯುತ್ತದೆ. ಹೀಗಾಗಿ ಕ್ಷೇತ್ರದ ಚುನಾವಣೆ ನಡೆಯುವ ಕೆಲ ತಿಂಗಳ ಮುಂಚೆ ಮತದಾರರ ಪಟ್ಟಿ ಸಿದ್ಧಪಡಿಸಲಾಗುತ್ತದೆ.

ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಮತ್ತೆ ಅಗತ್ಯ ದಾಖಲೆ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಹೊಸ ಮತದಾರರನ್ನು ನೋಂದಣಿ ಮಾಡಿಸಿ ಪಟ್ಟಿಗೆ ಸೇರ್ಪಡೆಗೊಳಿಸಲಾಗುತ್ತದೆ. ಸ್ಪರ್ಧಿಸುವ ಅಭ್ಯರ್ಥಿಗಳ ಬೆಂಬಲಿಗರು ಮನೆ ಮನೆಗೂ ತೆರಳಿ ಪದವೀಧರರಿಂದ ಅರ್ಜಿಗೆ ಸಹಿ ಪಡೆದು, ಅಗತ್ಯ ದಾಖಲೆ ಪಡೆದು ಚುನಾವಣಾ ಅಧಿಕಾರಿಗೆ ಸಲ್ಲಿಸುತ್ತಾರೆ. ಸ್ವಯಂಪ್ರೇರಣೆಯಿಂದ ಆಗಮಿಸಿ ಮತದಾರರಾಗುವುದು ಬೆರಳಣಿಕೆಯಷ್ಟು ಮಂದಿ ಮಾತ್ರ ಎಂದು ತಾಲ್ಲೂಕು ಕಚೇರಿ ಚುನಾವಣೆ ಶಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಸಾಮಾನ್ಯ ಚುನಾವಣೆಗಳಲ್ಲಿ ಒಮ್ಮೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯಾದರೆ ಕಾಯಂ ಆಗಿರುತ್ತದೆ. ವಿಳಾಸ ಬದಲಾವಣೆ, ಕ್ಷೇತ್ರ ಬದಲಾವಣೆ ಆದರೆ ಮಾತ್ರ ತಿದ್ದುಪಡಿ ಮಾಡಬಹುದು. ಆದರೆ, ಪದವೀಧರ ಮತಕ್ಷೇತ್ರದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಹೊಸದಾಗಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಪಟ್ಟಿಯಲ್ಲಿ ಹೆಸರಿದ್ದವರು ಸಹ ಹೊಸದಾಗಿ ದಾಖಲೆಗಳೊಂದಿಗೆ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದೇ ಕಾರಣದಿಂದ ಪ್ರತಿ ಬಾರಿ ಹೆಸರು ಸೇರ್ಪಡೆಗೆ ಪದವೀಧರರು ನಿರುತ್ಸಾಹ ತೋರುತ್ತಾರೆ ಎಂದು ಮುಖಂಡ ರಾಮಕೃಷ್ಣಾರೆಡ್ಡಿ ತಿಳಿಸಿದರು.

ಪದವೀಧರ ಒಂದು ಬಾರಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿದರೆ ಬದುಕಿರುವವರೆಗೂ ಮತದಾರನಾಗಿರುತ್ತಾನೆ. ಕ್ಷೇತ್ರವನ್ನು ಬದಲಿಸಿದ, ವಿಳಾಸ ಬದಲಾವಣೆಯಾದವರಿಗೆ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶ ನೀಡಬೇಕು. ಪ್ರತಿ ಚುನಾವಣೆಗೂ ಹೊಸದಾಗಿ ಮತದಾರರ ಪಟ್ಟಿ ಸಿದ್ಧಪಡಿಸುವ ಪದ್ಧತಿ ಬದಲಾವಣೆ ಆಗಬೇಕು. ಲೋಕಸಭೆ, ವಿಧಾನಸಭೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಗೆ ಇದೇ ಪದ್ಧತಿ ಜಾರಿಯಲ್ಲಿದೆ ಎಂದು ಬಹುತೇಕ ಪದವೀಧರರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.