ಚಿಂತಾಮಣಿ: ನಗರಕ್ಕೆ ನಾಲ್ಕು ದಿಕ್ಕುಗಳಿಂದಲೂ ಸಂಪರ್ಕ ಕಲ್ಪಿಸುವ ರಸ್ತೆಗಳ ಬದಿ ಇರುವ ಗುಲ್ ಮೊಹರ್ ಗಿಡಗಳಲ್ಲಿ ಬಿಟ್ಟಿರುವ ಹೂವುಗಳು ರಸ್ತೆಯ ಅಂದ ಹೆಚ್ಚಿಸಿವೆ.
ಗುಲ್ ಮೊಹರ್ ಹೂವುಗಳನ್ನು ನೋಡುತ್ತಿದ್ದರೆ ಮನಸ್ಸಿಗೆ ಹಿತವೆನಿಸುತ್ತದೆ. ಬಿರು ಬೇಸಿಗೆಯಲ್ಲಿ ಕಣ್ಣುಗಳು ಉರಿಯುವಾಗ ಕೆಂಬಣ್ಣದ ಹೂವುಗಳು ಪ್ರಯಾಣಿಕರ ಕಣ್ಣಿಗೆ ತಂಪು ನೀಡಿ ಮನಸ್ಸಿಗೆ ಉಲ್ಲಾಸ ಕೊಡುತ್ತಿವೆ. ನಗರದ ಕನ್ನಪಲ್ಲಿ ಟಿಟಿಡಿ ಕಲ್ಯಾಣ ಮಂಟಪ, ತಾಲ್ಲೂಕು ಕಚೇರಿ, ನಗರಸಭೆ ಆವರಣ, ಬಾಲಕಿಯರ ಪ್ರೌಢಶಾಲೆ ಅವರಣ ಸೇರಿ ಇತರೆಡೆಗಳಲ್ಲಿ ಗುಲ್ ಮೊಹರ್ ಹೂವುಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.
ಗುಲ್ ಎಂದರೆ ಗುಲಾಬಿ ಹೂವು ಎಂದೂ, ಮೊಹರ್ ಎಂದರೆ ಗುರುತು. ಮುಂಗಾರು ಪೂರ್ವ ಮಳೆಯಾಗುವ ಹಿನ್ನೆಲೆಯಲ್ಲಿ ಮೇ ಮತ್ತು ಜೂನ್ ತಿಂಗಳಲ್ಲಿ ಬಹುತೇಕ ಗಿಡ-ಮರಗಳು ಹೂ ಬಿಡುತ್ತವೆ.
ಮೇ-ಫ್ಲವರ್ ಎಂದೇ ಹೆಸರಾದ ಗುಲ್ ಮೊಹರ್ ಮರದಲ್ಲಿ ಮೈತುಂಬಾ ಹೂವು ತುಂಬಿಕೊಂಡಿರುವ ಸಂಭ್ರಮ ನೋಡುವುದೇ ಕಣ್ಣಿಗೆ ಹಬ್ಬ. ಮಕ್ಕಳ ಆಟಕ್ಕೆ ಸಾಥ್ ನೀಡುವ ಗುಲ್ ಮೊಹರಿನ ಮೊಗ್ಗುಗಳು, ಹೂವಿನ ಕೇಸರದ ಭಾಗಗಳು ದೊಡ್ಡವರಲ್ಲೂ ಬಾಲ್ಯದ ನೆನಪನ್ನು ತರುತ್ತಿವೆ.
ಮರದಲ್ಲಿ ನಾನಾ ಚಿತ್ತಾಕರ್ಷಕ ಹೂವಿನ ಗೊಂಚಲುಗಳು ನಗೆ ಬೀರಿದರೆ, ಉದುರಿದ ದಳಗಳು ನೆಲದಲ್ಲಿ ಹೂವು ಹಾಸಿಗೆಯಂತೆ ಕಂಗೊಳಿಸುತ್ತಿವೆ. ಕೆಲವು ಆಕರ್ಷಣೆ ಜತೆಗೆ ಸುಗಂಧವನ್ನೂ ಬೀರುವುದರಿಂದ ಮತ್ತಷ್ಟು ಸವಿಯಬೇಕೆನಿಸುತ್ತದೆ.
ಲೆಗ್ಯೂಮ್ ಗುಂಪಿಗೆ ಸೇರಿದ ಗುಲ್ ಮೊಹರ್ ಸಸ್ಯವು ಫ್ಯಾಬೇಸಿಯ ಕುಟುಂಬದ ಸದಸ್ಯ ಎಂಬ ಮಾಹಿತಿ ಇದೆ. ಹಾಗಾಗಿ ಇದರಿಂದಲೂ ನೆಲಕ್ಕೆ ಸಾರಜನಕದ ಲಭ್ಯವಾಗಲಿದ್ದು, ಮಣ್ಣಿನ ರಕ್ಷಣೆಗೆ ಇದು ಸಹಕಾರಿಯಾಗಿದೆ. ಗುಲ್ ಮೊಹರ್ ಹೆಸರು ಪರ್ಷಿಯನ್ ಮೂಲದ ಹೆಸರು ಎನ್ನುತ್ತಾರೆ ಸಸ್ಯ ತಜ್ಞರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.